ಫಲಾನುಭವಿಗಳಿಗೆ ಇನ್ನೂ ಯಾಕೆ ಗೃಹಲಕ್ಷ್ಮಿ ಹಣ ತಲುಪಿಲ್ಲ? ಹಾಸನದಲ್ಲಿ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ
ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಲ್ಲ. ಈ ಬಗ್ಗೆ ಡಿಸಿ, ಜಿ.ಪಂ. ಸಿಇಒ ಪರಿಶೀಲನೆ ಮಾಡಬೇಕು. ಸರ್ಕಾರ ಹಣ ಕೊಡಲು ತಯಾರಿರುವಾಗ ನೀವು ಅದನ್ನು ಗಮನಿಸಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಹೇಳಿದರು.
ಹಾಸನ, ನವೆಂಬರ್ 7: ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಹಲವೆಡೆ ಇನ್ನೂ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳನ್ನು ವಿಚಾರಿಸಿದರು. ಹಾಸನ ಪ್ರವಾಸದಲ್ಲಿರುವ ಅವರು ಹಾಸನ (Hassan) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು. ಎಲ್ಲ ಫಲಾನುಭವಿಗಳಿಗೆ ಇನ್ನೂ ಯಾಕೆ ‘ಗೃಹಲಕ್ಷ್ಮಿ’ ಹಣ ತಲುಪಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶೇ 90ಕ್ಕಿಂತ ಕಡಿಮೆ ಯಾಕಾಗಿದೆ? ಡಿಸಿ, ಸಿಇಒ ಜೊತೆ ಮಾತಾಡಿ ಎಲ್ಲರ ಖಾತೆಗೆ ಹಣ ಹೋಗುವಂತೆ ಮಾಡಿ ಎಂದು ಪ್ರಗತಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಲ್ಲ. ಈ ಬಗ್ಗೆ ಡಿಸಿ, ಜಿ.ಪಂ. ಸಿಇಒ ಪರಿಶೀಲನೆ ಮಾಡಬೇಕು. ಸರ್ಕಾರ ಹಣ ಕೊಡಲು ತಯಾರಿರುವಾಗ ನೀವು ಅದನ್ನು ಗಮನಿಸಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಹೇಳಿದರು.
ಗೃಹಜ್ಯೋತಿ ಯೋಜನೆಗೂ 63 ಸಾವಿರ ಗ್ರಾಹಕರ ನೋಂದಣಿ ಆಗಬೇಕು. ಎಲ್ಲವನ್ನೂ ಗಮನಿಸಿ ಅವರು ಅರ್ಹರಿದ್ದರೆ ಮಾಡಿ, ಇಲ್ಲವಾದರೆ ಕೈಬಿಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಒಂದೇ ದಿನ ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ-ಕುಮಾರಸ್ವಾಮಿ ಹೇಳಿದ್ದೇನು?
ನಾನು ಮಟ್ಕಾ ನಿಲ್ಲಿಸಿ ಎಂದು ಹೇಳಿದ್ದೇನೆ. ಜಿಲ್ಲೆಯಲ್ಲಿ ಮಟ್ಕ ನಿಂತಿದೆಯಾ? ಧೈರ್ಯವಾಗಿ ಎದೆತಟ್ಟಿ ಹೇಳಮ್ಮ ಎಂದು ಸಿದ್ದರಾಮಯ್ಯ ಸೂಚಿಸಿದರು. ಇದೇ ವೇಳೆ, ನಿರಂತರವಾಗಿ ಕ್ರಮ ಕೈಗೊಳ್ಳುತ್ತಾ ಇದ್ದೇವೆ ಎಂದು ಎಸ್ಪಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದು ಬೇರೆ ವಿಚಾರ. ಮಟ್ಕಾ ನಿಂತಿದೆಯಾ ಹೇಳಿ. ಮಟ್ಕಾ ನಿಲ್ಲಬೇಕು, ಡ್ರಗ್ಸ್ ನಿಲ್ಲಬೇಕು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕಡಿವಾಣ ಹಾಕಲೇಬೇಕು. ನಿಮ್ಮ ಇನ್ಸ್ಪೆಕ್ಟರ್ ಜನಪರವಾಗಿ ಇದ್ದರೆ ಸಹಜವಾಗಿ ಅಪರಾದ ಕಡಿಮೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನೀವು ಕೆಲಸ ಮಾಡೋದಷ್ಟೇ ಅಲ್ಲ, ನಿಮ್ಮ ಕೈ ಕೆಳಗಿನ ಅಧಿಕಾರಿಗಳು ಕೆಲಸ ಮಾಡಬೇಕು. ಅಧಿಕಾರಿಗಳು ಜನಪರವಾಗಿ ಇದ್ದರೆ ಜನರು ನಮ್ಮ ಬಳಿ ಬರೋದಿಲ್ಲ ಎಂದು ಒಂದೊಂದೇ ಇಲಾಖೆ ಅದಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ