ಹಾಸನಾಂಬ ದೇವಿ ದರ್ಶನ: ಭಕ್ತರ ದಂಡು, ಕೋಟ್ಯಂತರ ರೂಪಾಯಿ ಆದಾಯ

| Updated By: ವಿವೇಕ ಬಿರಾದಾರ

Updated on: Oct 28, 2024 | 10:14 AM

ಹಾಸನದ ಹಾಸನಾಂಬ ದೇವಿಯ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ವರ್ಷಕ್ಕೆ ಒಂಬತ್ತು ದಿನ ಮಾತ್ರ ದರ್ಶನಕ್ಕೆ ಅವಕಾಶವಿರುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಸಾಮಾನ್ಯ ಮತ್ತು ಟಿಕೆಟ್‌ ಮೂಲಕ ದರ್ಶನದ ವ್ಯವಸ್ಥೆ ಇದೆ. ಟಿಕೆಟ್ ಮತ್ತು ಲಾಡು ಮಾರಾಟದಿಂದ ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿಯ ದರ್ಶನ ಪಡೆಯಲಿದ್ದಾರೆ.

ಹಾಸನಾಂಬ ದೇವಿ ದರ್ಶನ: ಭಕ್ತರ ದಂಡು, ಕೋಟ್ಯಂತರ ರೂಪಾಯಿ ಆದಾಯ
ಹಾಸನಾಂಬ
Follow us on

ಹಾಸನ, ಅಕ್ಟೋಬರ್​ 28: ಹಾಸನದ (Hassan) ಅದಿದೇವತೆ ಹಾಸನಾಂಬ (Hasanaamba) ದೇವಿ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ವರ್ಷದಲ್ಲಿ ಒಂಬತ್ತು ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಭಕ್ತ ಸಮೂಹ ಕಿಕ್ಕಿರಿದು ಬರುತ್ತಿದೆ. ಹಾಸನಾಂಬ ದೇವಿ ದರ್ಶನಕ್ಕೆ ಎರಡು ರೀತಿ ಅವಕಾಶ ಮಾಡಿಕೊಡಲಾಗಿದೆ. ಒಂದು ಸಾಮಾನ್ಯ ಸರತಿ ಸಾಲಿನಲ್ಲಿ ನಿಂತು ದರ್ಶನ, ಎರಡನೇಯದ್ದು ಟಿಕೆಟ್​ ಪಡೆದು ನೇರ ದರ್ಶನ ಪಡೆಯುವುದು. ನೇರ ದರ್ಶನದ ಟಿಕೆಟ್‌ ಹಾಗೂ ಲಾಡು ಮಾರಾಟದಿಂದ ದೇವಾಲಯಕ್ಕೆ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.

ರವಿವಾರ ರಾತ್ರಿ 7 ಗಂಟೆಯವರೆಗೂ 22,217 ಭಕ್ತರು 300 ರೂ. ಟಿಕೆಟ್‌ ಪಡೆದು ದೇವಿ ದರ್ಶನ ಮಾಡಿದರು. 300 ರೂ. ಟಿಕೆಟ್​ ಮಾರಾಟದಿಂದ ರವಿವಾರ ರಾತ್ರಿ 7 ಗಂಟೆವರೆಗೆ 66,35,100 ರೂ. ಸಂಗ್ರಹವಾಗಿದೆ. 1000 ರೂ. ಟಿಕೆಟ್‌ ಮಾರಾಟದಿಂದ ರವಿವಾರ ರಾತ್ರಿ 7 ಗಂಟೆವರೆಗೆ 1,57,13,000 ರೂ. ಸಂಗ್ರಹವಾಗಿದೆ. ಇನ್ನು ಲಾಡು ಪ್ರಸಾದ ಮಾರಾಟದಿಂದ 18,45,000 ರೂ. ಸಂಗ್ರಹವಾಗಿದೆ. ರವಿವಾರ ರಾತ್ರಿ 7 ಗಂಟೆಯವರೆಗೆ ಒಟ್ಟು 2,41,93,100 ಹಣ ಸಂಗ್ರಹವಾಗಿದೆ.

ಸಿದ್ದರಾಮಯ್ಯ ಹಾಸನಾಂಬ ದರ್ಶನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಅ.28) ಸಂಜೆ 4ಗಂಟೆಗೆ ಹಾಸನಾಂಬ ದೇವಿ ದರ್ಶನ ಪಡೆಯಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ನಂತರ ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ: ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆ ನೀಡಿದ್ರಾ ಸಿದ್ದೇಶ್ವರ ಸ್ವಾಮಿ?

24 ಗಂಟೆಯೂ ದರ್ಶನಕ್ಕೆ ಅವಕಾಶ

ಹಾಸನಾಂಬೆಯ ಗರ್ಭಗುಡಿಯಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಾಳೆ. ಗರ್ಭಗುಡಿಯ ಬಾಗಿಲು ಈ ಬಾರಿ ಅಕ್ಟೋರಬ್ 24ರಂದು ತೆರೆಯಲಾಯ್ತು. ಈ ವರ್ಷ ಒಟ್ಟು 11 ದಿನಗಳು ದೇಗುಲದ ಗರ್ಭಗುಡಿಯ ಬಾಗಿಲು ತೆರೆದಿದ್ದರೆ ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 9 ದಿನಗಳು ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಳು ಭಕ್ತರಿಗೆ ಅವಕಾಶ ಇದೆ. ನಸುಕಿನ ಜಾವ 4 ಗಂಟೆಗೆ ದರ್ಶನ ಆರಂಭಗೊಂಡು ದಿನದ 24 ಗಂಟೆ ಕೂಡ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.

ದೇಗುಲದ ಗರ್ಭಗುಡಿಯಲ್ಲಿ ಹಚ್ಚಿಟ್ಟ ದೀಪ ಆರುವುದಿಲ್ಲ, ದೇವರ ಮುಡಿಗಿಟ್ಟ ಹೂ ಬಾಡುವುದಿಲ್ಲ. ಇದು ಹಾಸನಾಂಬೆ ಪವಾಡ ಎಂದು ಭಕ್ತರು ನಂಬಿದ್ದಾರೆ. ಆರದ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು, ತಮ್ಮ ಕೋರಿಗೆ ಈಡೇರಿಸುವ ದೇವಿಗೆ ನಮಿಸಲು ಭಕ್ತರ ದಂಡೇ ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ