ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆ ನೀಡಿದ್ರಾ ಸಿದ್ದೇಶ್ವರ ಸ್ವಾಮಿ?
ಹೂವುಗಳನ್ನು ಯಾವಾಗಲೂ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ದೇವರ ವಿಗ್ರಹದಿಂದ ಹೂವು ಅಥವಾ ಮಾಲೆ ಬಿದ್ದರೆ, ಅದು ತುಂಬಾ ಶುಭ ಸಂಕೇತವಾಗಿದೆ. ಇದು ದೇವರ ಕೃಪೆ ನಿಮ್ಮ ಮೇಲಿದೆ ಮತ್ತು ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ ಎಂದು ತೋರಿಸುತ್ತದೆ. ಅದರಂತೆ ಹಾಸನದಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರಾರ್ಥನೆ ವೇಳೆ ದೇವರ ಬಲಗಡೆಯಿಂದ ಹೂವು ಬಿದ್ದಿದೆ.
ಹಾಸನ, (ಅಕ್ಟೋಬರ್ 27): ಚನ್ನಪಟ್ಟಣದಲ್ಲಿ ಉಪಚುನಾವಣೆಯ ಕಣ ತೀವ್ರ ಕುತೂಹಲ ಮೂಡಿಸುತ್ತಿದೆ, ರಾಜ್ಯ ಮಾತ್ರವಲ್ಲ ಇಡೀ ದೇಶದ ಗಮನವನ್ನು ಚನ್ನಪಟ್ಟಣ ಉಪಚುನಾವಣೆ ಸೆಳೆಯುತ್ತಿದೆ. ಇತ್ತ ಸ್ವಕ್ಷೇತ್ರದಲ್ಲಿ ಮಗನನ್ನು ಗಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಹೆಚ್‌ಡಿ ಕುಮಾರಸ್ವಾಮಿ ಇಂದು(ಅಕ್ಟೋಬರ್ 27) ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದರು. ವೇಳೆ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಹಾಸನದ ಹಾಸನಾಂಬೆ ದರ್ಶನ ಪಡೆದ ಬಳಿಕ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ. ದೇವರ ಬಲಭಾಗದಿಂದ ಹೂ ಬೀಳುವುದನ್ನು ಅನಿತಾ ಅವರು ಕುಮಾರಸ್ವಾಮಿಗೆ ತೋರಿಸಿದರು. ಪ್ರಾರ್ಥನೆ ಮಾಡುವಾಗ ಹೂವು ಬೀಳುವುದು ಒಳ್ಳೆಯ ಸೂಚನೆಯಂತೆ. ಹೀಗಾಗಿ ಸಿದ್ದೇಶ್ವರ ಸ್ವಾಮಿ ಕುಮಾರಸ್ವಾಮಿಯವರಿಗೆ ಶುಭ ಸೂಚನೆ ನೀಡಿದ್ರಾ ಎನ್ನುವ ಕುತೂಹಲ ಹೆಚ್ಚಿಸಿದೆ.
ಪ್ರಾರ್ಥನೆ ಮಾಡುವಾಗ ಹೂವು ಬೀಳುವುದು ಒಳ್ಳೆಯ ಸೂಚನೆ. ಕೂಡಲೇ ಆ ಹೂವನ್ನು ಪ್ರಸಾದವಾಗಿ ಕಣ್ಣಿಗೊತ್ತಿಕೊಂಡು ತಲೆಯ ಮೇಲಿರಿಸಿಕೊಳ್ಳಬೇಕು. ಕೆಲವೊಂದು ದೇವಾಲಯಗಳಲ್ಲಿ ಪ್ರಸಾದ ಕೇಳಿಸುವ ಕಾರಣಿಕವಿದೆ. ಅದರಂತೆ ಯಾವುದೋ ಇಚ್ಛೆಯೊಂದನ್ನು ದೇವರ ಮುಂದೆ ಕೇಳಿಕೊಂಡಾಗ ದೇವರ ಬಲದಲ್ಲಿ ಪ್ರಸಾದವಾದರೆ ಆ ಇಚ್ಛೆ ನೆರವೇರುತ್ತದೆ. ಎಡದಲ್ಲಿ ಪ್ರಸಾದವಾದರೆ (ಎಡಗಡೆ ಹೂ ಬಿದ್ದರೆ) ಇಚ್ಛೆ ನೆರವೇರುವುದಿಲ್ಲ ಎನ್ನುವುದು ನಂಬಿಕೆಯಾಗಿದೆ.