ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ: ಬಾಲ್ಯದ ನೆನಪು ಮೆಲುಕು ಹಾಕಿದ ಬಾನು ಮುಷ್ತಾಕ್

ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್​ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿರುವ ಅವರು, ಇದು ನನಗೆ ಮೊದಲೇನಲ್ಲ, ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ: ಬಾಲ್ಯದ ನೆನಪು ಮೆಲುಕು ಹಾಕಿದ ಬಾನು ಮುಷ್ತಾಕ್
ಸಾಹಿತಿ ಬಾನು ಮುಷ್ತಾಕ್​
Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2025 | 6:02 PM

ಹಾಸನ, ಅಕ್ಟೋಬರ್​ 15: ಹಾಸನಾಂಬೆ (Hasanamba) ದರ್ಶನ ಇದು ನನಗೆ ಮೊದಲಲ್ಲ. ನನ್ನ ತಾಯಿಯ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ. ಆಗ ನಿಮ್ಮಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಇದೀಗ ಕಾಣಿಸಿಕೊಳ್ಳುತ್ತಿದ್ದೇನೆ. ಮುಸ್ಲಿಮರು ಹಾಸನಾಂಬೆಯನ್ನ ಹುಸೇನ್ ಬಿ ಎಂದು ನಂಬುತ್ತಿದ್ದರು. ಇದೊಂದು ಭಾವೈಕ್ಯತೆಯ ಸಂಕೇತವೂ ಆಗಿದೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ (Banu Mushtaq) ಹೇಳಿದ್ದಾರೆ.

ಭಾನು ಮುಷ್ತಾಕ್​ ಹೇಳಿದ್ದಿಷ್ಟು 

ಹಾಸನಾಂಬೆ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭಾನು ಮುಷ್ತಾಕ್, ಬಹಳ ಹಿಂದಿನಿಂದ ನಮ್ಮ ತಾಯಿ ಹಾಗೂ ನಮ್ಮ ಕುಟುಂಬದ ಪೂರ್ವಿಕರಿಂದ ಬಂದಂತ ಗ್ರಹಿಕೆ ಏನೆಂದರೆ ಮುಸ್ಲಿಂ ಸಮುದಾಯದವರು ಕೂಡ ಇಲ್ಲಿ ಹಸೇನ್ ಬಿ ಎಂದು ಹಾಸನಾಂಬೆಗೆ ಹೆಸರು ಕೊಟ್ಟ ಪ್ರಸಂಗವನ್ನು ನಾನು ನೋಡಿದ್ದೇನೆ. ಆ ಒಂದು ಐತಿಹ್ಯ ಕೂಡ ನನಗೆ ಗೊತ್ತಿದೆ ಎಂದರು.

ಇದನ್ನೂ ಓದಿ: ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್

ಮುಸ್ಲಿಮರು ಹಾಸನಾಂಬೆಯನ್ನ ಹುಸೇನ್ ಬಿ ಎಂದು ನಂಬುತ್ತಿದ್ದರು. ಇಲ್ಲಿ ನಮಗೆ ಹಸೇನ್ ಬಿ, ಹುಸೇನ್ ಬಿ ಎಂದು ಪರಿಚಯ ಮಾಡಿಕೊಡುತ್ತಿದ್ದರು. ಸಕ್ಕರೆ, ಊದುಗಡ್ಡಿ ತಂದು ಮುಸ್ಲಿಮರು ಸಂಪ್ರದಾಯ ಪ್ರಕಾರ ಪೂಜೆ ಮಾಡುತ್ತಿದ್ದರು. ಅದನ್ನ ನಾನು ಬಾಲ್ಯದಲ್ಲಿ ನೋಡಿದ್ದೇನೆ. ಆಗ ದರ್ಶನಕ್ಕೆ ಬರುತ್ತಿದ್ದ ಭಕ್ತರ ಗ್ರಹಿಕೆ ಮತ್ತು ನಂಬಿಕೆ ಬೇರೆಯಾಗಿತ್ತು. ಈಗ ಅದು ನನಗೆ ನೆನಪಾಯ್ತು ಎಂದಿದ್ದಾರೆ.

ಇದು ಹಾಸನಾಂಬೆ ಜಾತ್ರೆ ನಮ್ಮೂರ ಹಬ್ಬ. ನಮ್ಮೂರ ಹಬ್ಬದಲ್ಲಿ ನಾವೆಲ್ಲಾ ಬಹಳ ಉತ್ಸಾಹದಿಂದ ಭಾಗಿ ಆಗಿದ್ದೇವೆ. ಅತಿ ಹೆಚ್ಚಿನ ಭಾವೈಕ್ಯತೆಯ ಸಂಕೇತ ನೆಮ್ಮದಿಯ ತಾಣ ಮತ್ತು ನಮ್ಮ ಹಾಸನದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಂಬಂಧದ ಅತ್ಯುತ್ತಮ ಉದಾಹರಣೆ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾಸನಾಂಬ ಸನ್ನಿಧಿಯಲ್ಲಿ ಡಿಕೆಶಿಯಿಂದ ನಾರಾಯಣಿ ಮಂತ್ರ, ಖಡ್ಗಮಾಲಾ ಸ್ತೋತ್ರ ಪಠಣ: ಅಚ್ಚರಿಯ ಮಾಹಿತಿ ನೀಡಿದ ಅರ್ಚಕರು

ಹಾಸನಾಂಬೆ ಉತ್ಸವಕ್ಕೆ ಈ ಬಾರಿ ಉತ್ತಮ ವ್ಯವಸ್ಥೆ ಆಗಿದೆ. ಯಾವುದೇ ಗೊಂದಲ ಇಲ್ಲದೆ, ಹೆಚ್ಚು ಕಾಯದೆ, ನೂರಾರು ಕಿ.ಮೀ ದೂರದಿಂದ ಬರುವ ಭಕ್ತರಿಗೆ ಒಳ್ಳೆಯ ದರ್ಶನ ಆಗಿದೆ.  ಈ ಹಿಂದೆ ಬಹಳ ಜನ ಹೆಣ್ಣು ಮಕ್ಕಳು ಬರುತ್ತಿದ್ದರು. ಈಗ ಸ್ವಲ್ಪ ಕಡಿಮೆ ಆಗಿದ್ದು, ಮತ್ತೆ ಬರುತ್ತಿದ್ದಾರೆ ಎಂದು ಭಾನು ಮುಷ್ತಾಕ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 5:52 pm, Wed, 15 October 25