
ಹಾಸನ, ಆಗಸ್ಟ್ 17: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣಾರ್ಭಟ (rain) ಜೋರಾಗಿದೆ. ಭಾರೀ ಮಳೆಯಿಂದಾಗಿ 7 ಕಿ.ಮೀ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ ಎಡಕುಮಾರಿ ಸಮೀಪ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಬೆಂಗಳೂರು ಟು ಮಂಗಳೂರು (Bengaluru t0 Mangaluru) ರೈಲ್ವೆ ಮಾರ್ಗ ತಾತ್ಕಾಲಿಕ ಬಂದ್ ಆಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿದ್ರಿಂದಾಗಿ ಮರ, ಗಿಡಗಳ ಸಮೇತ ಮಣ್ಣು ರಸ್ತೆಗೆ ಕುಸಿಯುತ್ತಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ.
ಹಾಸನದ ಸಕಲೇಶಪುರದ 7 ಕಿ.ಮೀ ವ್ಯಾಪ್ತಿಯಲ್ಲೇ 15 ಕಡೆ ಭೂಕುಸಿತವಾಗಿದೆ. ಎಡಕುಮಾರಿ ಸಮೀಪ ಹಳಿ ಮೇಲೆ ಮಣ್ಣು ಕುಸಿದು ಬೆಂಗಳೂರು ಟು ಮಂಗಳೂರು ರೈಲ್ವೆ ಮಾರ್ಗ ತಾತ್ಕಾಲಿಕ ಸ್ಥಗಿತವಾಗಿದೆ. ಮತ್ತೊಂದೆಡೆ ಇದೇ ಮಾರನಹಳ್ಳಿ ಸಮೇಪ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಮಳೆ ನಡುವೆಯೂ ಪೊಲೀಸರು ಕಾರಿನಲ್ಲಿದ್ದವರನ್ನ ರಕ್ಷಿಸಿದ್ದಾರೆ.
ಇದನ್ನೂ ಓದಿ: ಶಿರಾಡಿಘಾಟ್ ಜಲಪಾತವೊಂದರ ಬಳಿ ಕೆಳಗೆ ಉರುಳಿಬಿದ್ದ ಕಾರು, ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಭಾರಿ ಗಾಳಿ ಮಳೆಗೆ ಚಿಕ್ಕಮಗಳೂರು ಕೊಪ್ಪದ ಭೈರೇದೇವರು ಗ್ರಾಮದಲ್ಲಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಭಾಸ್ಕರ್ ಭಟ್ ಎಂಬುವರ ಮನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮುಂದಿನ ನಾಲ್ಕು ದಿನ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆಯಿದ್ದು, ಪ್ರವಾಸಿಗರು ಎಚ್ಚರವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಅತ್ತ ಕೋಲಾರ, ವೇಮಗಲ್, ಮಾಲೂರಿನಲ್ಲಿ ಮಳೆಯಾಗಿದೆ. ಆಗಸ್ಟ್ 20ರವರೆಗೆ ರಾಜ್ಯಾದ್ಯಂತ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳ, ಸುರಳಿಕಲ್ ಮಧ್ಯೆ, ಮಲಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಬಳಿ ತಡೆಗೋಡೆ ಕಟ್ಟಲಾಗಿದೆ. ಆದರೆ ಮಳೆ ಹೆಚ್ಚಾಗಿದ್ದು, ಮಲಪ್ರಭಾ ನದಿಯಿಂದ ನೀರು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದರಿಂದಾಗಿ ತಡೆಗೋಡೆ ಒಡೆದು ಹೊಲ, ಗದ್ದೆಗಳಿಗೆ ನೀರು ನುಗ್ಗಿದೆ.
ಕಬ್ಬು ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:52 am, Sun, 17 August 25