ಹಾಸನ: ಕಲುಷಿತ ಆಹಾರ ಸೇವಿಸಿ ಮೃತಪಟ್ಟ ದಂಪತಿ ಮೃತ್ಯು ರಹಸ್ಯ ಬಯಲು, ತಂದೆ-ತಾಯಿಗೆ ವಿಷ ಹಾಕಿದ ಮಗ
ಮೃತ ದಂಪತಿಗೆ ಮಂಜುನಾಥ್ ಎರಡನೇ ಪುತ್ರ. ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ನೀಡುವಂತೆ ಪದೇ ಪದೇ ತಾಯಿ ಉಮಾ ಒತ್ತಾಯಿಸುತ್ತಿದ್ದರು. ಇದರಿಂದ ಕೋಪಗೊಂಡಿದ್ದ ಮಂಜುನಾಥ್ ತಾಯಿಯ ಹತ್ಯೆಗೆ ಸಂಚು ರೂಪಿಸಿದ್ದ. ಆರೋಪಿ ಮಂಜುನಾಥ್ ತನ್ನ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆ ನಂತರ ಪಲಾವ್‌ಗೆ ಕಳೆ ನಾಶಕ ಬೆರೆಸಿದ್ದ. ಅಲ್ಲದೆ ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ತಿಂದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು.
ಹಾಸನ, ಆಗಸ್ಟ್,28: ನಾಲ್ಕು ದಿನಗಳ ಹಿಂದೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು(Death). ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದೆ. ಪುತ್ರನೇ ತನ್ನ ಪೋಷಕರಿಗೆ ವಿಷ ಹಾಕಿ ಕೊಲೆ ಮಾಡಿರುವ ಅಘಾತಕಾರಿ ಸತ್ಯ ಬಹಿರಂಗವಾಗಿದೆ(Murder). ಹೌದು ಪುತ್ರ ಮಂಜುನಾಥ್ (27) ತಿಂಡಿಗೆ ವಿಷ ಬೆರಸಿ ತಂದೆ ತಾಯಿಗೆ ತಿನ್ನಿಸಿ ಕೊಲೆ ಮಾಡಿದ್ದಾನೆ. ಪುತ್ರ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿರುವ ವಿಷಯ ಬಯಲಾಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ಉಮಾ (48), ನಂಜುಂಡಪ್ಪ (55) ಎಂಬ ದಂಪತಿ ಆಗಸ್ಟ್ 15 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಆರೋಗ್ಯ ಕೆಟ್ಟಿತ್ತು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ನಂತರ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಆದರೆ, ಬುಧವಾರ ಇಬ್ಬರೂ ಹಠಾತ್ ಸಾವಿಗೀಡಾದರು. ಕಲುಷಿತ ಆಹಾರ ಸೇವಿಸಿ ಅಪ್ಪ-ಅಮ್ಮ ತೀರಿಕೊಂಡರು ಎಂದು ಮಗ ಮಂಜುನಾಥ್ ತಿಳಿಸಿದ್ದ ಆದರೆ ಈಗ ಸತ್ಯ ಬಯಲಾಗಿದೆ.
ವಿಧವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಂಜುನಾಥ್
ಇನ್ನು ಮೃತ ದಂಪತಿಗೆ ಮಂಜುನಾಥ್ ಎರಡನೇ ಪುತ್ರ. ಮಂಜುನಾಥ್ ವಿಧವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಮಂಜುನಾಥ್ ತಾಯಿ ಮೃತ ಉಮಾ ತಮ್ಮ ಮಗನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡಿದ್ದ. ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ನೀಡುವಂತೆ ಪದೇ ಪದೇ ಉಮಾ ಒತ್ತಾಯಿಸುತ್ತಿದ್ದರು. ಇದರಿಂದ ಕೋಪಗೊಂಡಿದ್ದ ಮಂಜುನಾಥ್ ತಾಯಿಯ ಹತ್ಯೆಗೆ ಸಂಚು ರೂಪಿಸಿದ್ದ.
ಇದನ್ನೂ ಓದಿ: ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಅಸ್ವಸ್ಥ; ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗುವಾಗ ಸಾವು
ಆ.15 ರಂದು ಮೃತ ತಾಯಿ ಉಮಾ ಅವರು ಬೆಳಿಗ್ಗೆ ತಿಂಡಿಗೆ ಪಲಾವ್ ಮಾಡಿದ್ದರು. ಆರೋಪಿ ಮಂಜುನಾಥ್ ತನ್ನ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆ ನಂತರ ಪಲಾವ್‌ಗೆ ಕಳೆ ನಾಶಕ ಬೆರೆಸಿದ್ದ. ಅಲ್ಲದೆ ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ತಿಂದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು. ಕಳೆದ ಗುರುವಾರ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದಾರೆ. ಇದರಿಂದ ಅನುಮಾನಗೊಂಡ ಕಿರಿಯ ಪುತ್ರ ತಂದೆ-ತಾಯಿಯ ಹಠಾತ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಗುರುವಾರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದ ವೇಳೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆ ತಡೆದು ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಪೋಷಕರನ್ನು ತಾನೇ ಕೊಲೆ ಮಾಡಿರುವ ಸತ್ಯ ಬಯಲಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ ಜಿಲ್ಲೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ