ಹಾಸನ: ಅಂದು ಟೊಮೆಟೊ, ಇಂದು ಶುಂಠಿಗೆ ಕಳ್ಳರ ಕಾಟ; ಲಕ್ಷಗಟ್ಟಲೇ ಹಣ ಹಾಕಿ ಬೆಳೆದ ಅನ್ನದಾತನಿಗೆ ತಪ್ಪದ ಸಂಕಷ್ಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2023 | 7:23 PM

ಬೆಳೆ ಇದ್ರೆ ಬೆಲೆ ಸಿಗೋದಿಲ್ಲ, ಬೆಲೆ ಸಿಗೋ ಟೈಮಲ್ಲಿ ಬೆಳೆ ಕೈ ಹಿಡಿಯೋದಿಲ್ಲ. ಇದು ನಮ್ಮ ಅನ್ನದಾತರ ದುರಾದೃಷ್ಟವೋ? ದೌರ್ಭಾಗ್ಯವೋ ಗೊತ್ತಿಲ್ಲ. ಮಳೆಯ ಮೇಲಾಟದ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದು ಕೈತುಂಬ ಆದಾಯ ಗಳಿಸಿ ಮಾಡಿದ ಸಾಲ ತೀರಿಸಿಕೊಳ್ಳೋಣ ಎಂದು ಕನಸು ಕಂಡ್ರೆ, ಅದಕ್ಕೆ ನೂರೆಂಟು ವಿಘ್ನಗಳು ಕಾಡುತ್ತವೆ. ಅಪರೂಪಕ್ಕೆ ಎಂಬಂತೆ ಈ ಬಾರಿ ಟೊಮ್ಯಾಟೋ ಬೆಳೆದ ಕೆಲ ರೈತರು ಲಕ್ಷ ಲಕ್ಷ ಆದಾಯಗಳಿಸಿ ಅದೊಂದು ಕನಸೇನೋ ಎನ್ನುವಂತೆ ಬೆಲೆ ಮತ್ತೆ ಕುಸಿದು ಹೋಗಿದೆ. ಆದ್ರೆ, ಇದೀಗ ಶುಂಠಿ ಬೆಳೆಗಾರರಿಗೆ ಬೆಲೆ ಉತ್ತಮವಾಗಿದ್ರು, ಟೊಮ್ಯಾಟೋಗೆ ಕಾಡಿದಂತೆ ಕಳ್ಳರ ಕಾಟ ಶುಂಠಿ ಬೆಳೆಗಾರರನ್ನು ಕಂಗೆಡಿಸಿದೆ.

ಹಾಸನ: ಅಂದು ಟೊಮೆಟೊ, ಇಂದು ಶುಂಠಿಗೆ ಕಳ್ಳರ ಕಾಟ; ಲಕ್ಷಗಟ್ಟಲೇ ಹಣ ಹಾಕಿ ಬೆಳೆದ ಅನ್ನದಾತನಿಗೆ ತಪ್ಪದ ಸಂಕಷ್ಟ
ಶುಂಠಿ ಬೆಳೆ ಕಳ್ಳತನ
Follow us on

ಹಾಸನ, ಸೆ.10: ಲಕ್ಷಗಟ್ಟಲೇ ಖರ್ಚು ಮಾಡಿ ಬೆಳೆದ ಶುಂಠಿ (Ginger)ಗೆ ಉತ್ತಮ ಬೆಲೆ ಸಿಗುವ ವೇಳೆಯಲ್ಲಿ ಕಳ್ಳಟ ಕಾಟ ಹೆಚ್ಚಾಗಿದೆ. ಈ ಹಿಂದೆ ಟೊಮ್ಯಾಟೊಗೆ ಕನ್ನ ಹಾಕಿದಂತೆ ಶುಂಠಿಯನ್ನು ಕದ್ದೊಯ್ಯುತ್ತಿದ್ದಾರೆ. ಈ ಕಳ್ಳರ ಕಾಟಕ್ಕೆ ಅನ್ನದಾತರು ಹೈರಾಣಾಗಿದ್ದಾರೆ. ಹೌದು, ಇದೀಗ ಉತ್ತಮ ಬೆಲೆ ಹೊಂದಿರುವ ಶುಂಠಿಗೆ ಖದೀಮರ ಕಾಟ ಹೆಚ್ಚಾಗಿದೆ. ಹಾಸನ(Hassan) ಜಿಲ್ಲೆಯ ಬಯಲು ಸೀಮೆ, ಅರೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಶುಂಠಿ ಬೆಳೆಯುವುದು ವಾಡಿಗೆ, ಈ ಭಾಗದ ರೈತರ ವಾಣಿಜ್ಯ ಬೆಳೆಯಾಗಿದ್ದ ಶುಂಠಿಗೆ ಕಳೆದ ಬಾರಿ ಬೆಲೆ ಕುಸಿದ ಕಾರಣ ಕಡಿಮೆ ರೈತರು ಬಿತ್ತನೆ ಮಾಡಿದ್ರು, ಹಾಗಾಗಿಯೇ ಈ ಬಾರಿ ಶುಂಠಿಗೆ ಉತ್ತಮ ಧಾರಣೆ ಬಂದಿದೆ.

ಬೆಲೆ ಏರಿಕೆ ಕಂಡ ಶುಂಠಿ

ಅರವತ್ತು ಚೀಲದ ಹೊಸ ಶುಂಠಿಗೆ ನಾಲ್ಕರಿಂದ ಐದು ಸಾವಿರ, ಹಳೆ ಶುಂಠಿಗೆ ಒಂಬತ್ತರಿಂದ ಹತ್ತು ಸಾವಿರಕ್ಕೂ ಅಧಿಕ ಮಟ್ಟದ ಬೆಲೆ ಏರಿಕೆಯಾಗಿದೆ. ಹಾಗಾಗಿಯೇ ಕಳೆದ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಶುಂಠಿ ಬೆಳೆಗಾರರು ಈ ಬಾರಿ ಉತ್ತಮ ಬೆಲೆ ಸಿಕ್ಕಿದೆ ಎಂದು ಖುಷಿಪಡುವ ವೇಳೆಯಲ್ಲಿ, ಕಳ್ಳರ ಕಾಟ ಕಾಡುತ್ತಿದೆ. ರಾತ್ರೊ ರಾತ್ರಿ ಕಟಾವಿಗೆ ಬಂದ ಶುಂಟಿ ಬೆಳೆಯನ್ನು ಕದ್ದಯ್ಯುತ್ತಿರೋ ಖದೀಮರು ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತ ಲಕ್ಷ ಲಕ್ಷ ಆದಾಯ ಮಾಡುತ್ತಿದ್ದರೆ, ಕಷ್ಟಪಟ್ಟು ಬೆಳೆ ಮಾಡಿದ ರೈತರು ಕಣ್ಣೀರಿಡುವಂತಾಗಿದೆ.

ಇದನ್ನೂ ಓದಿ:Hassan: ತೋಟಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ಕದ್ದ ಕಳ್ಳರು, ಕಣ್ಣೀರು ಸುರಿಸುತ್ತಿರುವ ರೈತ ಮಹಿಳೆ

ಜಿಲ್ಲೆಯ ಅರಕಲಗೂಡು, ಆಲೂರು, ಬೇಲೂರು, ಚನ್ನರಾಯಪಟ್ಟಣ ಸೇರಿ ಹಲವು ತಾಲ್ಲೂಕುಗಳಲ್ಲಿ ಶುಂಠಿ ಬೆಳೆಯನ್ನೇ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಆದರೆ, ಸತತವಾಗಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರು ಈ ಬಾರಿ ಬಹುತೇಕವಾಗಿ ಮೆಕ್ಕೆಜೋಳ ಬಿತ್ತನೆ ಮಾಡಿದ್ರು, ಮಳೆ ಸ್ವಲ್ಪ ಪ್ರಮಾಣದಲ್ಲಿ ಏರಿಳಿತವಾದ್ರು, ಮೆಕ್ಕೆಜೋಳ ಬೆಳೆ ಹಾನಿಯಾಗಲ್ಲ ಎಂದು ಬೆಳೆ ಮಾಡಿದ್ದ ರೈತರಿಗೆ ಈ ವರ್ಷ ಮಳೆ ಕೈಕೊಟ್ಟು ಮೆಕ್ಕೆಜೋಳ ಕೂಡ ಸಂಪೂರ್ಣವಾಗಿ ನೆಲ ಕಚ್ಚಿದೆ. ಇನ್ನು ಜಿಲ್ಲೆಯ ಸಾಂಪ್ರದಾಯಿಕ ಶುಂಠಿ ಬೆಳೆಗಾರರು ಈ ವರ್ಷ ಕೂಡ ಶುಂಠಿ ಬೆಳೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆಯಲಾಗಿದೆ. ರಾಜ್ಯದ ಎಲ್ಲೆಡೆ ಶುಂಠಿ ಬೆಳೆ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಶುಂಠಿಗೆ ಚಿನ್ನದ ಬೆಳೆ ಬಂದಿದೆ.

ಅಪರೂಪದಲ್ಲಿ ಅಪರೂಪ ಎಂಬಂತೆ ಸಿಗುತ್ತಿರುವ ಬೆಳೆಯಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳ್ಳರ ಕಾಟ ನಿದ್ದೆ ಗೆಡಿಸಿದೆ. ಟೊಮ್ಯಾಟೊಗೆ ಉತ್ತಮ ಬೆಲೆ ಇದ್ದಾಗ ರಾತ್ರೊ ರಾತ್ರಿ ಬೆಳೆಯನ್ನೆ ಕದ್ದು ಮಾರಾಟ ಮಾಡಿದ್ದ ಖದೀಮರೇ ಈಗ ರೊಡ್ ಬದಿಯಲ್ಲಿರುವ ಶುಂಠಿ ಬೆಳೆಯನ್ನ ಕದ್ದೊಯ್ಯುತ್ತಿದ್ದಾರೆ. ಜಿಲ್ಲೆಯ ದುದ್ದಾ, ಜಾವಗಲ್, ಬೇಲೂರು, ಹಳೆಬೀಡು, ಆಲೂರು ಸೇರಿ ಹಲವೆಡೆ ನೂರಾರು ಕ್ವಿಂಟಾಲ್ ಶುಂಠಿಯನ್ನು ಕದ್ದು ಮಾರಾಟ ಮಾಡಲಾಗಿದೆ. ಆದ್ರೆ, ಕಳ್ಳರಾರು ಸಿಕ್ಕಿ ಬಿದ್ದಿಲ್ಲ. ಈಬಾರಿ ಉತ್ತಮ ಬೆಲೆ ಇರೋದ್ರಿಂದ ಈ ರೀತಿಯ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಹಾಗಾಗಿ ರೈತರು ಎಚ್ಚರಿಕೆ ವಹಿಸಬೇಕು, ಕಷ್ಟಪಟ್ಟು ಬೆಳೆ ಮಾಡಿದ ರೈತರಿಗೆ ಇದರ ಲಾಭ ಸಿಗಬೇಕಾದ್ರೆ ಎಚ್ಚರ ಅಗತ್ಯ ಎಂದು ವರ್ತಕ ರಮೇಶ್ ಎಂಬುವವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ನಿಜಾಮಾಬಾದ್​​ನಲ್ಲಿರುವ ಮನೆಯೊಂದರಿಂದ ನಗದು, ಚಿನ್ನ ಜತೆ ಫ್ರಿಡ್ಜ್​​​ನಲ್ಲಿರಿಸಿದ ಟೊಮೆಟೊ ಕದ್ದ ಕಳ್ಳರು

ಒಟ್ಟಿನಲ್ಲಿ ಇಂದಲ್ಲ ನಾಳೆ ಉತ್ತಮ ಬೆಲೆ ಸಿಗುತ್ತೆ ಎಂದು ಪ್ರತಿ ವರ್ಷ ಬೆಳೆ ಮಾಡುತ್ತಾ ನಷ್ಟದಲ್ಲಿರುವ ರೈತರಿಗೆ ಲಾಟರಿ ಹೊಡೆದಂತೆ ಕೆಲವೇ ಸಮಯದಲ್ಲಿ ಉತ್ತಮ ಬೆಲೆ ಸಿಕ್ಕಿ ಖುಷಿ ಪಡುವ ಸಮಯ ಬರುತ್ತೆ. ಆದ್ರೆ, ಇಂತಹ ವೇಳೆಯಲ್ಲಿ ಕಾಡುವ ಕಳ್ಳರು, ರೈತರ ಲಾಭ ದಾಸೆಗೆ ತಣ್ಣಿರೆರೆಚುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರೋ ವೇಳೆಯಲ್ಲಿ ನಡೆಯುತ್ತಿರುವ ಇಂತಹ ಮೋಸದಾಟ ತಡೆಯೋಕೆ ಪೊಲೀಸ್ ಇಲಾಖೆ ಕೂಡ ಎಚ್ಚರ ವಹಿಸಬೇಕಿದೆ ಎಂದು ರೈತರು ಕೇಳಿಕೊಂಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ