ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು! ತಿರುಪತಿ ಲಡ್ಡು ಪ್ರಕರಣದ ಬೆನ್ನಲ್ಲೇ ಅಲರ್ಟ್ ಆದ ಹಾಸನ ಜಿಲ್ಲಾಡಳಿತ

| Updated By: ಗಣಪತಿ ಶರ್ಮ

Updated on: Sep 25, 2024 | 7:26 AM

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ, ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ವರ್ಷ ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನ ದೇಗುಲದ ಬಾಗಿಲು ತೆರೆಯಲಿದ್ದರೆ, 9 ದಿನ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ. ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಿತರಣೆ ಮಾಡುವ ಲಡ್ಡು ವಿಚಾರದಲ್ಲಿ ಈ ಬಾರಿ ದೊಡ್ಡ ಮಾರ್ಪಾಡು ಮಾಡಲಾಗಿದೆ. ವಿವರ ಇಲ್ಲಿದೆ.

ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು! ತಿರುಪತಿ ಲಡ್ಡು ಪ್ರಕರಣದ ಬೆನ್ನಲ್ಲೇ ಅಲರ್ಟ್ ಆದ ಹಾಸನ ಜಿಲ್ಲಾಡಳಿತ
ಹಾಸನಾಂಬೆ ದೇವಾಲಯ
Follow us on

ಹಾಸನ, ಸೆಪ್ಟೆಂಬರ್ 25: ವಿಶ್ವ ವಿಖ್ಯಾತ ತಿರುಪತಿಯ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆಗಿತ್ತು ಎಂಬ ವಿಚಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಪರಿಣಾಮವಾಗಿ ಹಾಸನಾಂಬೆ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತ ಕೂಡ ಎಚ್ಚೆತ್ತುಕೊಂಡಿದ್ದು, ಈ ವರ್ಷ ಇಸ್ಕಾನ್ ಸಂಸ್ಥೆ ಮೂಲಕ ಲಡ್ಡು ತಯಾರಿಸಿ ವಿತರಣೆ ಮಾಡಲು ಮುಂದಾಗಿವೆ. ಈ ಮೂಲಕ ಲಡ್ಡು ಗುಣಮಟ್ಟ ಹಾಗು ಪ್ರಾವಿತ್ರ್ಯತೆ ಕಾಪಾಡಿಕೊಳ್ಳಲು ಹಾಸನಾಂಬೆ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತ ತಯಾರಿ ನಡೆಸಿವೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಆಕರ್ಷಕ ದೀಪಾಲಂಕಾರ, ಲಾಲ್ ಬಾಗ್ ಮಾದರಿಯ ಪುಷ್ಪಾಲಂಕಾರದ ಮೂಲಕ ಅದ್ದೂರಿ ಹಬ್ಬಾಚರಣೆಗೆ ಸಿದ್ದತೆ ನಡೆದಿದೆ.

ಹಾಸನಾಂಬೆ ಲಡ್ಡು: ಜಿಲ್ಲಾಧಿಕಾರಿ ಹೇಳಿದ್ದೇನು?

ಹಾಸನ ಜಿಲ್ಲಾಡಳಿತ ಸದ್ಯ ಸ್ಥಳೀಯವಾಗಿ ಲಡ್ಡು ತಯಾರು ಮಾಡಲು ನೀಡುತ್ತಿದ್ದ ಟೆಂಡರ್ ರದ್ದುಪಡಿಸಿದೆ. ಬದಲಾಗಿ ಈ ವರ್ಷದಿಂದ ಬೆಂಗಳೂರಿನ ಇಸ್ಕಾನ್ ಸಂಸ್ಥೆ ಮೂಲಕ ಲಡ್ಡು ತಯಾರಿಸಿ ವಿತರಣೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಇಸ್ಕಾನ್ ಸಂಸ್ಥೆ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ ಹಾಸನ ಡಿಸಿ ಸಿ ಸತ್ಯಭಾಮ, ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ ಪಾವಿತ್ರ್ಯತೆಗೆ ಧಕ್ಕೆ ಆಗದಂತೆ ಎಚ್ಚರ ವಹಿಸಲು ಕ್ರಮ ವಹಿಸಲಾಗುತ್ತಿದೆ. ಈ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ವರ್ಷ 9 ದಿನ ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ!

ಪ್ರತೀ ವರ್ಷ ಕೆಲವೇ ದಿನಗಳು ಮಾತ್ರ ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗುತ್ತದೆ. ಕಳೆದ ವರ್ಷ ಒಟ್ಟು 14 ದಿನ ದೇಗುಲದ ಬಾಗಿಲು ತೆರೆದು 12 ದಿನಗಳು ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಈ ವರ್ಷ 11 ದಿನ ಬಾಗಿಲು ತೆರೆದಿರಲಿದ್ದು 9 ದಿನ ದರ್ಶನಕ್ಕೆ ಅವಕಾಶ ಸಿಗಲಿದೆ. ಪ್ರತೀ ವರ್ಷ ಹಾಸನಾಂಬೆ ದರ್ಶನಕ್ಕೆ ಬಂದು ವಿಶೇಷ ದರ್ಶನಕ್ಕೆ 1 ಸಾವಿರ ರೂಪಾಯಿ ಮೊತ್ತದ ಟಿಕೆಟ್ ಪಡೆದುಕೊಂಡ ಭಕ್ತರಿಗೆ ತಲಾ ಎರಡು ಲಡ್ಡು ನೀಡಲಾಗುತ್ತಿತ್ತು. ಜೊತೆಗೆ ಭಕ್ತರು ಲಡ್ಡು ಖರೀದಿ ಮಾಡಲು ಕೂಡ ಅವಕಾಶ ಇತ್ತು. ಪ್ರತೀ ವರ್ಷ ಕನಿಷ್ಠ 10ರಿಂದ 15 ಲಕ್ಷ ಲಡ್ಡುಗಳ ಮಾರಾಟವಾಗುತ್ತಿತ್ತು. ಈ ವರ್ಷ ಇಸ್ಕಾನ್ ಸಂಸ್ಥೆ ಮೂಲಕ ಲಡ್ಡು ತಯಾರಿಸಲು ತೀರ್ಮಾನ ಮಾಡಲಾಗಿದೆ.

ವಿಶೇಷ ದರ್ಶನ ಟಿಕೆಟ್, ಲಡ್ಡು ದರ ವಿವರ

ಇಸ್ಕಾನ್ ಸಂಸ್ಥೆಯವರು ನಂದಿನಿ ತುಪ್ಪವನ್ನೇ ಬಳಸಿ ಹಾಸನದಲ್ಲೇ ಲಡ್ಡು ತಯಾರು ಮಾಡಲಿದ್ದಾರೆ ಎಂದು ಮಾಹಿತಿ ನೀಡಿರುವ ಅಧಿಕಾರಿಗಳು, 1 ಸಾವಿರ ರೂಪಾಯಿ ಮೊತ್ತದ ಟಿಕೆಟ್ ಪಡೆದ ಭಕ್ತರಿಗೆ 2 ಲಡ್ಡು, 300 ರೂ. ಟಿಕೆಟ್ ಪಡೆದು ದರ್ಶನ ಮಾಡುವ ಭಕ್ತರಿಗೆ 1 ಲಡ್ಡು ಹಾಗೂ ಎರಡು ಲಡ್ಡುಗಳ ಒಂದು ಪಾಕೇಟ್​​ಗೆ 60 ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಈವರ್ಷ ಇಡೀ ಹಾಸನ ನಗರದಲ್ಲಿ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಜೊತೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪಾಲಂಕಾರ ಮಾಡುವ ರೀತಿಯಲ್ಲೇ ದೇಗುಲದ ಅಲಂಕಾರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸನ: ಮುಂದುವರೆದ ಬೀಟಮ್ಮ ಗ್ಯಾಂಗ್ ಹಾವಳಿ, ಕಾಫಿ, ಬಾಳೆ, ಭತ್ತ ಬೆಳೆ ನಾಶ

ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವದ ವೇಳೆ ಫಲ ಪುಷ್ಪ ಪ್ರದರ್ಶನ, ಹೆಲಿ ಟೂರಿಸಂ ಸೇರಿ ಹಲವು ಆಕರ್ಷಣೆ ಇರಲಿವೆ ಎಂದು ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ