ಹಾಸನ, ಜೂನ್ 22: ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಕುಟುಂಬಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಳಿಕ ಸೂರಜ್ ರೇವಣ್ಣ (Suraj Revanna) ಮೇಲೂ ಗಂಭೀರ ಆರೋಪ ಕೇಳಿಬಂದಿದೆ. ಹಾಸನದ ಎಂಎಲ್ಸಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಆರೋಪಿಸಿ ಅರಕಲಗೂಡು ಮೂಲದ ಯುವಕನೊಬ್ಬ ದೂರು ನೀಡಿದ್ದು, ಠಾಣೆಗೆ ಹಾಜರಾಗಿ ಹೇಳಿಕೆ ದಾಖಲು ಮಾಡಿದ್ದು ನ್ಯಾಯ ಒದಗಿಸುವಂತೆ ಸಿಎಂ, ಗೃಹಸಚಿವರು, ಡಿಐಜಿಗೆ ಕೂಡ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಸಂತ್ರಸ್ತ ಯುವಕನ ಮೇಲೂ ಕೂಡ ಐದು ಕೋಟಿಗಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹೆಚ್ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ. ಆದರೆ, ಹಾಸನ ಮತ್ತು ಕೆಆರ್ ನಗರಕ್ಕೆ ತೆರಳದಂತೆ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಹೀಗಾಗಿ ಸದ್ಯ ರೇವಣ್ಣ ಅವರ ಹೊಳೆನರಸೀಪುರದಲ್ಲಿನ ನಿವಾಸ ಹಾಗೂ ಹಾಸನದಲ್ಲಿನ ಕ್ವಾರ್ಟರ್ಸ್ನಲ್ಲಿ ಸಿಬ್ಬಂದಿ ಮಾತ್ರ ಇದ್ದಾರೆ. ನ್ಯಾಯಾಲಯದ ನಿರ್ಬಂಧದ ಕಾರಣ ಊರಿಗೆ ತೆರಳಲಾಗದೆ ಇರುವ ರೇವಣ್ಣ ಹಾಗೂ ಭವಾನಿ ಬೆಂಗಳೂರಿನ ನಿವಾಸದಲ್ಲಿದ್ದಾರೆ. ಮತ್ತೊಂದೆಡೆ, ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಸೂರಜ್ ರೇವಣ್ಣ ಸಹ ಬೆಂಗಳೂರಿಗೆ ತೆರಳಿದ್ದಾರೆ.
ಅರಕಲಗೂಡು ಮೂಲದ ಯುವಕ ನೀಡಿದ 14 ಪುಟದ ದೂರಿನಲ್ಲಿ ಗಂಭೀರವಾದ ಆರೋಪಗಳನ್ನು ಸೂರಜ್ ರೇವಣ್ಣ ಮೇಲೆ ಮಾಡಿದ್ದಾರೆ. ಸೂರಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ, ಗೃಹಸಚಿವರು, ಡಿಐಜಿ ಕಚೇರಿ ಹಾಗೂ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸೂರಜ್ ಹಾಗೂ ನನಗೂ ಪರಿಚಯ ಆಯ್ತು, ಆಗ ನನ್ನ ಮೊಬೈಲ್ ನಂಬರನ್ನು ತೆಗೆದುಕೊಂಡು ವಾಟ್ಸಾಪ್ ನಲ್ಲಿ ಚಾಟಿಂಗ್ ಮಾಡ್ತಾ ಇದ್ರು. ಪ್ರತಿ ಬಾರಿ ಮೆಸೇಜ್ ಮಾಡಿದಾಗಲೂ ಹಾರ್ಟ್ ಸಿಂಬಲ್ ಸೇರಿಸಿ ಸೂರಜ್ ಮೆಸೇಜ್ ಕಳಿಸ್ತಾ ಇದ್ದರು ಅಂತಾ ದೂರಿಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಭಾನುವಾರ ಜೂನ್ 16 ರಂದು ಮಾತನಾಡೋ ಸಲುವಾಗಿ ಗನ್ನಿಕಡ ತೋಟಕ್ಕೆ ಕರೆಸಿಕೊಂಡ ಸೂರಜ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ, ಸುದೀರ್ಘ ದೂರಿನಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರೊ ಸಂತ್ರಸ್ತ, ವೀಡಿಯೋ ಹೇಳಿಕೆ ಬಿಡುಗಡೆ ಮಾಡೋ ಮೂಲಕವೂ ತನ್ನ ಮೇಲೆ ನಡೆದ ಅಮಾನುಷ ದೌರ್ಜನ್ಯ ವಿವರಿಸಿದ್ದಾರೆ.
ಲೋಕಸಭಾ ಚುನಾವಣಾ ವೇಳೆಯಲ್ಲಿ ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದ ಸಂತ್ರಸ್ತನಿಗೆ ಊರಿಗೆ ಸೂರಜ್ ಬಂದಿದ್ದ ವೇಳೆ ಪರಿಚಯ ಆಗಿದ್ದರಂತೆ. ಆ ಸಂದರ್ಭದಲ್ಲಿ ನಂಬರ್ ತೆಗೆದುಕೊಂಡಿದ್ದ ಸೂರಜ್ ಪದೆ ಪದೆ ಮೆಸೇಜ್ ಮಾಡುತ್ತಿದ್ದರು, ಮಾತನಾಡಲು ಕರೆಸಿ ದೌರ್ಜನ್ಯ ನಡೆಸಿದ್ದರು. ಇದನ್ನ ವಿರೋದಿಸಿದಾಗ ನನಗೇ ಬೆದರಿಸಿ ಕೊಲೆ ಮಾಡೊದಾಗಿ ಹೆದರಿಸಿದ್ದರು ಎಂದೂ ಕೂಡ ಆರೋಪಿಸಿದ್ದಾರೆ.
ಶುಕ್ರವಾರ ದೂರು ನೀಡಿದ್ದ ಸಂತ್ರಸ್ತ ಇಂದು ಸಂಜೆ 5 ಗಂಟೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲು ಮಾಡಿದ್ದಾರೆ. ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನ್ಯಾಯಕ್ಕಾಗಿ ಹೋರಾಡಬೇಕು ಅಂತಾ ಬೆಂಗಳೂರಿಗೆ ಬಂದು ದೂರು ನೀಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಯುವಕನ ಮೇಲೆ ಲೈಂಗಿಕ ಅತ್ಯಾಚಾರ ನಡೆದ ಸ್ಥಳ ಎನ್ನಲಾಗುತ್ತಿರುವ ಸೂರಜ್ ರೇವಣ್ಣ ಫಾರ್ಮ್ ಹೌಸ್ ದೃಶ್ಯಗಳು ಲಭ್ಯ
ಈ ಮಧ್ಯೆ, ಶುಕ್ರವಾರ ಸಂಜೆ ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದ ಎಂಎಲ್ಸಿ ಸೂರಜ್ ಆಪ್ತ ಶಿವಕುಮಾರ್, ಸಂತ್ರಸ್ತ ಯುವಕ ಕೆಲಸ ಕೇಳಿಕೊಂಡು ಸೂರಜ್ ಅವರ ತೋಟದ ಮನೆಗೆ ಹೋಗಿ ಕೆಲಸ ಕೊಡಿಸಲಿಲ್ಲ ಎಂದು ಸಿಟ್ಟಾಗಿ ಅವರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡ್ತೇನೆ, ಮಾಡಬಾರದು ಎಂದರೆ ಐದು ಕೋಟಿ ರೂಪಾಯಿ ಹಣ ಕೊಡಿ ಎಂದು ಬ್ಲಾಕ್ ಮೇಲ್ ಮಾಡಿದ ಬಗ್ಗೆ ದೂರು ನೀಡಿದ್ದಾರೆ. ಈ ದೂರು ಆದರಿಸಿ ನೆನ್ನೆಯೇ ಎಫ್ಐಆರ್ ಕೂಡ ದಾಖಲಾಗಿ ಈ ಕೇಸ್ನಲ್ಲಿಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೂರಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು ಅವರು ಶುಕ್ರವಾರವೇ ತಮ್ಮ ತೋಟದ ಮನೆಯಿಂದ ಬೆಂಗಳೂರಿಗೆ ಹೋಗಿದ್ದಾರೆ ಎಂದು ತೋಟದ ಮನೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ