ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ಒಂದೆಡೆ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿರುವ ಬಿರುಕನ್ನು ಸರಿಪಡಿಸಲು ಕೇಸರಿ ಪಕ್ಷದ ಹೈಕಮಾಂಡ್ ಪ್ರಯತ್ನ ಪಡುತ್ತಿದ್ದರೆ, ಮತ್ತೊಂದೆಡೆ ಹಾಸನದಲ್ಲಿ ಉಭಯ ಪಕ್ಷಗಳ ಮುಖಂಡರ ನಡುವಣ ಕಲಹ ಬೀದಿಗೆ ಬಂದಿದೆ. ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿದ್ದು, ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರೀತಂ ಗೌಡ ತಂಡ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅಂದುಕೊಂಡು ಕಿರಣ್ ಕುಮಾರ್​ನ್ನು ಪ್ರಚಾರದ ಕಣಕ್ಕೆ ಇಳಿಸಿದೆ.

ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ
ಸಾಂದರ್ಭಿಕ ಚಿತ್ರ
Edited By:

Updated on: Mar 23, 2024 | 10:54 AM

ಹಾಸನ, ಮಾರ್ಚ್​ 23: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ (BJP JDS Alliance) ಬಿರುಕು ಮೂಡುವ ಲಕ್ಷಣ ಕಾಣಿಸಿದ ಕೂಡಲೇ ಕಮಲ ಪಾಳಯದ ಹೈಕಮಾಂಡ್ ಕುಮಾರಸ್ವಾಮಿ ಈ ಮುನಿಸನ್ನು ಶಮನಗೊಳಿಸಲು ಮಧ್ಯ ಪ್ರವೇಶಿಸಿದೆ. ಆದರೆ, ಹಾಸನದಲ್ಲಿ (Hassan) ಮೈತ್ರಿಗೆ ಬಂಡಾಯದ ಬಿಸಿ ತಟ್ಟ ತೊಡಗಿದೆ. ಒಂದೆಡೆ, ಮೈತ್ರಿ ಅಭ್ಯರ್ಥಿಯೆಂದು ಜೆಡಿಎಸ್ ಪಕ್ಷದ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಪ್ರಚಾರ ನಡೆಸುತ್ತಿದೆ. ಇನ್ನೂ ಮೈತ್ರಿ ಅಭ್ಯರ್ಥಿ ಅಂತಿಮವಾಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರ ಅತ್ಯಾಪ್ತ ಎಚ್​ಪಿ ಕಿರಣ್ ಕುಮಾರ್ ಸಹ ಪ್ರಚಾರ ಆರಂಭಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವಣ ಅಂತಃ ಕಲಹ ಬೀದಿಗೆ ಬಂದಂತಾಗಿದೆ. ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಸಜ್ಜಾದ ಪ್ರೀತಂಗೌಡ ಟೀಂ, ಜೆಡಿಎಸ್ ಅಭ್ಯರ್ಥಿಗೆ ಪರ್ಯಾಯವಾಗಿ ಬಿಜೆಪಿ ಟಿಕೇಟ್ ಆಕಾಂಕ್ಷಿಯನ್ನು ಅಖಾಡಕ್ಕಿಳಿಸಿದೆ. ಅಧಿಕೃತವಾಗಿ ಜಿಲ್ಲಾಮಟ್ಟದಲ್ಲಿ ಮೈತ್ರಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಪ್ರಚಾರ ಆರಂಭಿಸಲಾಗಿದೆ. ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಕಿರಣ್ ಕುಮಾರ್ ಪ್ರಚಾರ ಆರಂಬಿಸಿದ್ದಾರೆ.

ಕಿರಣ್ ಕುಮಾರ್ ಶನಿವಾರ ಬೆಳಗ್ಗೆ ಬೆಂಬಲಿಗರ ಜೊತೆ ಹಾಸನದ ಸಿದ್ದೇಶ್ವರ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದು ಜೆಡಿಎಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ಪ್ರಬಾವಿ ನಾಯಕ ಪ್ರೀತಂಗೌಡರನ್ನ ವಿಶ್ವಾಸ ಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಸಂಸದ ಪ್ರಜ್ವಲ್ ಪ್ರಚಾರ ಶುರುಮಾಡಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಈ ಮಧ್ಯೆ, ಮೈತ್ರಿ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿ ಪ್ರಚಾರ ಶುರುಮಾಡಿದ್ದಾರೆ. ಬಿಜೆಪಿಯ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಈ ವಿಚಾರದಲ್ಲಿ ಬಿಜೆಪಿ ರಾಜ್ಯ ನಾಯಕರು ಮಧ್ಯಪ್ರವೇಶಿಸಿ ಮೈತ್ರಿ ಮುನಿಸನ್ನು ಶಮನಗೊಳಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಮೈತ್ರಿ ಅಸಮಾಧಾನ ಸರಿಪಡಿಸಲು ಬಿಜೆಪಿ ಹೈಕಮಾಂಡ್ ಕಸರತ್ತು: ಮೈಸೂರಿನಲ್ಲಿ ಮೋದಿ, ದೇವೇಗೌಡ ಬಹಿರಂಗ ಸಭೆಗೆ ಚಿಂತನೆ

ಈ ಮಧ್ಯೆ, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೆನ್ನೈ ಆಸ್ಪತ್ರೆಯಲ್ಲಿರುವ ಹೆಚ್​ಡಿ ಕುಮಾರಸ್ವಾಮಿ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ರಾಜ್ಯಕ್ಕೆ ಮರಳಲಿದ್ದಾರೆ. ಅವರು ವಾಪಸ್ ಬಂದ ಕೂಡಲೇ ಮೈಸೂರು ಮತ್ತು ಹಾಸನದಲ್ಲಿ ಜಂಟಿ ಪ್ರಚಾರ ಸಮಾವೇಶ ಹಮ್ಮಿಕೊಳ್ಳಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಆ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ನಾಯಕರ ಎಲ್ಲ ಮುನಿಸನ್ನು ವರಿಷ್ಠರು ತಣಿಸುವ ನಿರೀಕ್ಷೆ ಇದೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ