Crime News: ಪ್ರೇಮಿಗಳ ಆತ್ಮಹತ್ಯೆ, ಮರಳು ಅಡ್ಡೆ ಮೇಲೆ ದಾಳಿ, ಪಿಯು ವಿದ್ಯಾರ್ಥಿ ನಿಗೂಢ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 23, 2022 | 9:23 AM

ಅಕ್ರಮ ಮರಳು ಅಡ್ಡೆ ಮೇಲೆ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿ, 2 ಟಿಪ್ಪರ್, 1 ಪಿಕಪ್ ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

Crime News: ಪ್ರೇಮಿಗಳ ಆತ್ಮಹತ್ಯೆ, ಮರಳು ಅಡ್ಡೆ ಮೇಲೆ ದಾಳಿ, ಪಿಯು ವಿದ್ಯಾರ್ಥಿ ನಿಗೂಢ ಸಾವು
ಪ್ರಾತಿನಿಧಿಕ ಚಿತ್ರ
Follow us on

ರಾಯಚೂರು: ಸೀರೆಯಲ್ಲಿ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಂಧನೂರು ತಾಲೂಕಿನ ಆರ್​ಹೆಚ್​3 ಕ್ಯಾಂಪ್​ ಬಳಿ ನಡೆದಿದೆ. ಕ್ಯಾಂಪ್ ಬಳಿಯಿದ್ದ ಜಮೀನಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲವ ಸರ್ಕಾರ್, ಕರೀನಾ ಮೃತರು. ಎರಡು ತಿಂಗಳ ಹಿಂದೆ ಬೇರೊಬ್ಬ ಯುವತಿಯ ಜತೆ ಲವ್ ಸರ್ಕಾರ್ ಮದುವೆಯಾಗಿದ್ದ. ಮದುವೆ ನಂತರ ಕರೀನಾ ಆಘಾತಕ್ಕೊಳಗಾಗಿದ್ದರು. ಮದುವೆಯಾದ ನಂತರವೂ ಪ್ರೇಯಸಿಯನ್ನು ಬಿಟ್ಟಿರಲು ಲವ್ ಸರ್ಕಾರ್​ಗೆ ಸಾಧ್ಯವಾಗಿರಲಿಲ್ಲ. ಒಂದೇ ಸೀರೆಯ ಎರಡು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

ಹಾಸನ: ಅಕ್ರಮ ಮರಳು ಅಡ್ಡೆ ಮೇಲೆ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿ, 2 ಟಿಪ್ಪರ್, 1 ಪಿಕಪ್ ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಕಲೇಶಪುರದ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಕ್ರಮ ಮರಳು ಸಾಗಿಸುತ್ತಿದ್ದ ವಾಹನಗಳು, ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 B ಮತ್ತು 379 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯಸಳೂರು ಹೋಬಳಿಯ ಕುಂಬಾರಗೆರೆ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಸಂಗ್ರಹ ಮತ್ತು ಸಾಗಣೆ ನಡೆಯುತ್ತಿತ್ತು. ತಹಶೀಲ್ದಾರ್ ಜಯಕುಮಾರ್, ಯಸಳೂರು ಪಿಎಸ್​ಐ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೀಗ ಒಡೆದು ಹಣ ಕಳ್ಳತನ

ಬೆಂಗಳೂರು: ಪೀಣ್ಯದ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಚೇರಿ ಬೀಗ ಒಡೆದು ಸೇಫ್​ ಬಾಕ್ಸ್​ನಲ್ಲಿ ಇಟ್ಟಿದ್ದ ₹ 35 ಸಾವಿರ ಕಳುವು ಮಾಡಲಾಗಿದೆ. ವಿಭಾಗೀಯ ಪ್ರಬಂಧಕ ಉದಯ್ ಕುಮಾರ್ ಈ ಕುರಿತು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಿಯು ವಿದ್ಯಾರ್ಥಿ ನಿಗೂಢ ಸಾವು

ದಾವಣಗೆರೆ: ಪಿಸಾಳೆ ಕಾಂಪೌಂಡ್​ನಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಎರಡನೇ ಮಹಡಿಯಿಂದ ಕೆಳಗೆ ಬಿದ್ದಿರುವ ವಿದ್ಯಾರ್ಥಿ ಮಿಥುನ್ (18) ದೇಹದ ಬಹುತೇಕ ಭಾಗಗಳಿಗೆ ಗಾಯಗಳಾಗಿವೆ. ಸತೀಶ್ ಪಿಸಾಳೆ ಪುತ್ರ ಮಿಥುನ್ ಖಾಸಗಿ ಶಾಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇಂದು ಗಣಿತ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಬಡಾವಣೆ ಪೊಲೀಸ್ ಠಾಣೆ‌ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಶಂಕಿತ ಮಾಸ್ಟರ್​ಮೈಂಡ್ 5 ದಿನ ಪೊಲೀಸರ ವಶಕ್ಕೆ, ಬೆಂಗಳೂರಿನಲ್ಲಿ ಇನ್ನೂ ಇಬ್ಬರ ಬಂಧನ

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಕಾರ್​ ಸೈಲೆನ್ಸರ್ ಕಳ್ಳತನ: ರಸ್ತೆಯಲ್ಲಿ ಕಾರ್ ನಿಂತಿದ್ರೆ ಸೈಲೆನ್ಸರ್ ನಾಪತ್ತೆ