ಹಿರಿಯ ಮಲ್ಲಿಕಾರ್ಜುನ ಖರ್ಗೆರನ್ನು ಸಿಎಂ ಮಾಡಲಿ: ಹಾಸನದಲ್ಲಿ ಜೆಡಿಎಸ್ ಶಾಸಕ ಕುಮಾರಸ್ವಾಮಿ ಹೇಳಿಕೆ
ಜಮೀರ್ ಅಹಮದ್ ಒಕ್ಕಲಿಗರ ವಿರುದ್ಧ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಹೆಚ್.ಕೆ. ಕುಮಾರಸ್ವಾಮಿ, ಜಮೀರ್ ಅವರು ದೇವೇಗೌಡರೇ ನಮ್ಮ ಗುರುಗಳು ಅನ್ನುವ ಅಭಿಪ್ರಾಯ ಹೇಳಿದ್ದಾರೆ. ಅದು ನೂರಕ್ಕೆ ನೂರು ಸತ್ಯ ಇದೆ, ಸರಿ ಇದೆ ಎಂದರು
ಹಾಸನ: ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ಅವರನ್ನು (Mallikarjun Kharge) ಸಿಎಂ ಮಾಡಲು ಜೆಡಿಎಸ್ ಶಾಸಕ ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪ್ರತಿಯೊಬ್ಬರೂ ಟವೆಲ್ ಹಾಕ್ತಿದ್ದಾರೆ. ಆದರೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆರನ್ನು ಸಿಎಂ ಮಾಡಲಿ (Karnataka Chief Minister) ಎಂದು ಹಾಸನದಲ್ಲಿ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ (HK Kumaraswamy) ಹೇಳಿದ್ದಾರೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗ್ತಾರೆ:
ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆ ನೆಪದಲ್ಲಿ ಸಿಎಂ ಹುದ್ದೆಗೆ ಪ್ರತಿಯೊಬ್ಬರೂ ಟವಲ್ ಹಾಕಿಕೊಂಡು ಕುಳಿತಿದ್ದಾರೆ. ದಲಿತ ಬಂಧುಗಳು ಬಹಳಷ್ಟು ವರ್ಷದಿಂದ, ಈಗಲೂ ಕೂಡ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಆದರೆ ಇವತ್ತು ನಮ್ಮ ದಲಿತರು ಯಾರೂ ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ, ರೇಸ್‌ಗೆ ಬರಲು ಬಿಡ್ತಾ ಇಲ್ಲ. ಇದನ್ನು ದಲಿತರು ಅರ್ಥಮಾಡಿಕೊಳ್ಳಬೇಕು. ನಮ್ಮ ಪಕ್ಷದವರು ಯಾವಾಗಲೂ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತಾ ಜಗತ್ ಜಾಹಿರಾತಾಗಿದೆ, ನಾವೂ ಬೆಂಬಲಿಸುತ್ತಿದ್ದೇವೆ ಎಂದು ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪರಮೇಶ್ವರರನ್ನು ಡಿಸಿಎಂ ಮಾಡಿದ್ದರು:
ಕಾಂಗ್ರೆಸ್ ಪಕ್ಷ 75 ವರ್ಷದಲ್ಲಿ 55 ವರ್ಷ ಆಡಳಿತ ಮಾಡಿದೆ. ಖರ್ಗೆ, ಕೆ.ಎಚ್. ರಂಗನಾಥ್, ಬಸವಲಿಂಗಪ್ಪ, ಬಿ. ರಾಚಯ್ಯ, ಎನ್. ರಾಚಯ್ಯ ಅವರಂತಹ ಘಟಾನುಘಟಿ ಲೀಡರ್‌ಗಳಿದ್ದರೂ ಅವರಿಗೆ ಅಧಿಕಾರವನ್ನ ಕೊಟ್ಟಿಲ್ಲ. ನಾನು ಬೇರೆ ಪಕ್ಷದ ಶಾಸಕನಾಗಿ ಹೇಳುತ್ತಿದ್ದೇನೆ. ಖರ್ಗೆಯವರಿಗೆ 80 ವರ್ಷ ತುಂಬಿದೆ, ಅವರ ಅನುಭವಕ್ಕಾದರೂ, ಅವರ ಹೆಸರು ಪ್ರಸ್ತಾಪ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಮತ ಕೊಡುವ ದಲಿತರನ್ನು ಖಂಡಿತ ಕಡೆಗಣಿಸಿದೆ. ಅವರ ಬಗ್ಗೆ ಗೌರವ, ಭಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ಮಂತ್ರಿ, ಮುಖ್ಯಮಂತ್ರಿ ಮಾಡ್ತೀವಿ ಅಂಥಾ ಹೇಳಲಿ. ಎಲ್ಲರೂ ನಾನು, ನಾನು ಮುಖ್ಯಮಂತ್ರಿ ಅಂಥ ಹೇಳ್ತಿದ್ದಾರೆ, ಅವರ ಬಗ್ಗೆ ನಮಗೆ ವಿರೋಧವಿಲ್ಲ, ಅದು ಅವರ ಹಕ್ಕು. ಅದೇ ರೀತಿ ಕೇಳದೆ ಇದ್ದರು ಕೂಡ ಕಾಂಗ್ರೆಸ್‌ನವರು ಕನಿಷ್ಠ ಒಂದು ಉಪಮುಖ್ಯಮಂತ್ರಿ ಮಾಡಲಿಲ್ಲ. ನಾವು ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪರಮೇಶ್ವರ್ ಅವರನ್ನು ನಾವು ಉಪಮುಖ್ಯಮಂತ್ರಿ ಮಾಡಿದೆವು. ನಮ್ಮ ಸರ್ಕಾರ ಮಾಡಿದ್ದು ಅದು, ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ ಎಂದು ಹೆಚ್.ಕೆ. ಕುಮಾರಸ್ವಾಮಿ ಹೇಳಿದರು.
ನಾನು ಘೋಷಣೆ ಮಾಡಲಿ ಅಂಥ ಹೇಳಲು ನಾನೇನೂ ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ಹೇಳುತ್ತಿದ್ದೇನಷ್ಟೇ. ಇವತ್ತು ಎಲ್ಲಾ ಕಚ್ಚಾಡುತ್ತಿದ್ದಾರೆ, ನಾನು ನಾನು ಅಂಥ ಹೇಳ್ತಿದ್ದಾರೆ. ನಮ್ಮ ದಲಿತ ಮುಖಂಡರ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ಅವರು ಕೇಳ್ತಾನೂ ಇಲ್ಲ, ಇವರು ಅಂತಹವರೇ, ಓಟು ಕೋಡೋದು ನಮ್ಮ ಕೆಲಸ ಅಷ್ಟೇ ಎಂದು ಅವರು ಹೆಳಿದರು.
ಜಮೀರ್ ಅಹಮದ್ ಒಕ್ಕಲಿಗರ ವಿರುದ್ಧ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಹೆಚ್.ಕೆ. ಕುಮಾರಸ್ವಾಮಿ, ರಾಜಕಾರಣದಲ್ಲಿ ಯಾವಾಗ ಶತ್ರು ಮಿತ್ರ ಆಗ್ತಾನೆ, ಮಿತ್ರ ಶತ್ರು ಆಗ್ತಾನೆ ಹೇಳಲು ಬರಲ್ಲ. ಆದರೆ ಅವರು ದೇವೇಗೌಡರೇ ನಮ್ಮ ಗುರುಗಳು ಅನ್ನುವ ಅಭಿಪ್ರಾಯ ಹೇಳಿದ್ದಾರೆ. ಅದು ನೂರಕ್ಕೆ ನೂರು ಸತ್ಯ ಇದೆ, ಸರಿ ಇದೆ. ಒಕ್ಕಲಿಗರು, ಲಿಂಗಾಯಿತರಿಗಿಂತ ಹೆಚ್ಚು ಎಂದು ಹೇಳಬಾರದು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ.ಎಲ್ಲಾ ಸಮುದಾಯಕ್ಕೂ, ಎಲ್ಲಾ ಮತದಾರರಿಗೂ ಗೌರವವಿದೆ. ಎಲ್ಲಾ ಸಮುದಯದ ಜನರ ಗೌರವ, ಬೆಂಬಲ ಪಡೆದು ನಾವು ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ಮರೆಯಬಾರದು ಎಂದು ಹೆಚ್.ಕೆ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.