
ಹಾಸನ, (ಆಗಸ್ಟ್ 26): ನಾಡಹಬ್ಬ ಮೈಸೂರು ದಸರಾಗೆ (Mysuru Dasara ) ದಿನಗಣನೆ ಶುರುವಾಗಿದೆ. ಮೈಸೂರಿನಲ್ಲಿ ದಸರಾಗೆ ಸಿದ್ಧತೆಗಳು ನಡೀತಿವೆ. ಈ ನುಡವೆ ರಾಜ್ಯ ರಾಜಕೀಯದಲ್ಲಿ ದಸರಾ ಉದ್ಘಾಟಕರ (Mysuru Dasara Inauguration Row) ಆಯ್ಕೆ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಹೌದು…ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Banu Mushtaq) ಅವರನ್ನು ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಪರ-ವಿರೋಧ ಚರ್ಚೆಗಳ ನಡುವೆ ಇದಕ್ಕೆ ಸ್ವತಃ ಬಾನು ಮುಷ್ತಾಕ್ ಪ್ರತಿಕ್ರಿಯಿಸಿದ್ದು, ಕೋಟ್ಯಾಂತರ ಕನ್ನಡಿಗರು ಎಷ್ಟೊಂದು ಪ್ರೀತಿ ಅಭಿಮಾನ ಕೊಡುತ್ತಿದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು ಎಂದು ಪರೋಕ್ಷವಾಗಿ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.
ದಸರಾ ಉದ್ಘಾಟನೆ ಗೆ ತಮ್ಮ ಹೆಸರು ಆಯ್ಕೆ ನಂತರ ಅಪಸ್ವರದ ಬಗ್ಗೆ ಹಾಸನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಬಾನು ಮುಷ್ತಾಕ್, ಈ ಬಗ್ಗೆ ನಾನು ಏನು ಮಾತನಾಡಲ್ಲ. ಕೋಟ್ಯಾಂತರ ಕನ್ನಡಿಗರು ಎಷ್ಟೊಂದು ಪ್ರೀತಿ ಅಭಿಮಾನ ಕೊಡುತ್ತಿದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು. ಅದರ ಅಗತ್ಯ ಇಲ್ಲ ಎನ್ನಿಸುತ್ತೆ. ವಿರೋದ ಪಕ್ಷ ಆಡಳಿತ ಪಕ್ಷ ಇರಬೇಕು. ರಾಜಕೀಯ ಮಾಡಬೇಕು. ಆದರೆ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು ಯಾವುದರಲ್ಲಿ ಮಾಡಬಾರದು ಎನ್ನುವ ಪ್ರಜ್ಞೆ ಸಕ್ರಿಯ ರಾಜಕಾರಣಿ ಗಳಿಗೆ ಇರಬೇಕಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ . ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಪ್ರಶಸ್ತಿ ಸಿಗೋದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಬಹಳ ಕೇವಲವಾಗಿ ಮಾತನಾಡುತ್ತಾರೆ. ಅದರ ಬಗ್ಗೆ ನನಗೆ ಬೇಜಾರಿಲ್ಲ. ಅವರವರ ಮಟ್ಟಕ್ಕೆ ತಕ್ಕಹಾಗೆ ಮಾತಾಡ್ತಾರೆ ಮಾತಾಡಲಿ ಎಂದು ಟಾಂಗ್ ಕೊಟ್ಟರು.
ಕನ್ನಡ ಬಾವುಟದ ಬಗ್ಗೆ ಮಾತನಾಡಿದ ಬಾನು ಮುಷ್ತಾಕ್, ಕನ್ನಡವನ್ನು ನನ್ನಷ್ಟು ಪ್ರೀತಿಸಿ. ಕನ್ನಡವನ್ನ ನನ್ನಷ್ಟು ಬಳಕೆ ಮಾಡಿ. ಕನ್ನಡವನ್ನು ನನ್ನಷ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ.ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಒಂದೊಂದು ಪುಟ ಓದುತ್ತಿದ್ದೇನೆ. ಅವರೂ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ನನ್ನಂತೆ ನೀವು ಸಾಧನೆ ಮಾಡಿದ್ರೆ ಟೀಕೆ ಮಾಡಲು ಅರ್ಹತೆ ಸಿಗುತ್ತೆ. ಇಲ್ಲದೆ ಹೋದರೆ ನಿಮ್ಮ ಯಾವುದೇ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ. ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲ, ಇದಕ್ಕೆ ನಾನೇ ಸಾಕ್ಷಿ ಎಂದು ಹೇಳುವ ಮೂಲಕ ಟೀಕಿಸಿದವರಿಗೆ ಚಾಟಿ ಬೀಸಿದರು.
2023ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಆಡಿದ ಮಾತಿನ ತುಣುಕು ಹಾಕಿ ನನ್ನ ವಿರುದ್ದ ಕೆಲವರು ಆರೋಪ ಮಾಡಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನ ದೂರ ಇಟ್ಟಿದ್ದಕ್ಕೆ ಆಯೋಜನೆಗೊಂಡಿದ್ದ ಸಮ್ಮೇಳನ ಅದು. ಅದರ ಅಧ್ಯಕ್ಷತೆ ವಹಿಸಿ ನಾನು ಮಾತಾಡಿದ್ದೇನೆ. ನನಗೆ ನೇರವಾಗಿ ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಬಗ್ಗೆ ಮುಸ್ಲಿಂ ಅಲ್ಪ ಸಂಖ್ಯಾತರು, ದಲಿತರು, ಮಹಿಳೆಯರು ದನಿಯಾಗಿ ಮಾತಾಡಿದ್ದೇನೆ. ಅದರಲ್ಲಿ ಹೇಳಿರುವ ವಿಚಾರ ಎಲ್ಲರಿಗೂ ಅರ್ಥ ಆಗಿದೆ. ಕೆಲವು ಸಂಗತಿಗಳನ್ನು ನಾನು ಹೇಳಿದ್ದೇನೆ/ ಕನ್ನಡವನ್ನು ಭಾಷೆಯಾಗಿ ಬಳಸಲು ಬದಲಾಗಿ ಭಾವುಕವಾಗಿ ಪರಿಗಣಿಸಿದ್ದೀರಿ. ದೇವತೆಯಾಗಿ ಮಾಡಿ ಮಂದಾಸನದಲ್ಲಿ ಇದ್ದಾಗ ಅದಕ್ಕೆ ಕೈಮುಗಿದು ಬಂದರೆ ಮುಗಿತು. ಭಾಷೆಯನ್ನು ಭಾಷೆಯಾಗಿ ಪರಿಗಣಿಸಿದಾಗ ನಾನು ನೀವು ಎಲ್ಲರು ಓದಬೇಕಾಗುತ್ತೆ. ಈ ರೀತಿ ಭಾಷೆಯನ್ನು ಪ್ರಶ್ನೆ ಮಾಡಬೇಡಿ. ಅದನ್ನ ನಮ್ಮ ಭಾಷೆಯನ್ನಾಗಿ ನಾವು ಬಳಸೊಣ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಗೋಕಾಕ್ ಸಮಿತಿ ವರದಿ ಬಂದಾಗ ಹಾಸನದಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಸಾಮಾನ್ಯ ಮಹಿಳೆಯಾಗಿ ಹೋಗಿದ್ದ ನಾನು. ಅಲ್ಲಿ ಮಾತನಾಡಲು ಯಾರು ತಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳಿಸುತ್ತಿದ್ದೀರೊ ಅವರು ಮಾತ್ರ ಮಾತನಾಡಿ ಎಂದಿದ್ದರು.ಆಗ ಮಾತನಾಡಿದ ಏಕೈಕ ಮಹಿಳೆ ನಾನು. ವೇದಿಕೆಗೆ ಬಂದವಳು ನಾನೊಬ್ಬಳೆ. ಯಾಕೆಂದರೆ ನನ್ನ ಮೂವರು ಹೆಣ್ಣು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿದ್ದರು. ಹಾಗಾಗಿ ನಾನು ಅಂದಿನ ಸಭೆಯಲ್ಲಿ ಮಾತನಾಡಿದ್ದು ನಾನು ಮಾತ್ರ. ನಾನು ಹೇಳಿದ ಮಾತು ತಿರುಚುವ ಅಗತ್ಯ ಇಲ್ಲ. ಮಾತನ್ನ ಸಹೃದಯದಿಂದ ಅರ್ಥ ಮಾಡಿಕೊಳ್ಳಬೇಕು ಎಂದರು.
ಬೂಕರ್ ಬಂದ ನಂತರ ಅನೇಕ ಸಾಮಾಜಿಕ ಸ್ಥಿತ್ಯಂತರ ನೋಡಿದ್ದೇನೆ. ಬೂಕರ್ ಬಗ್ಗೆ ಕನ್ನಡಿಗರು ಅಪಾರ ಸಂತಸಪಡುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಬಂದಂತೆ ಸಂಭ್ರಮಿಸಿದ್ದಾರೆ. ಬೂಕರ್ ತಾನಾಗಿಯೇ ಒಲಿದು ಬಂದ ಪ್ರಶಸ್ತಿ. ಅದರ ನಂತರ ಕರ್ನಾಟಕ ಸರ್ಕಾರ ಹಾಗು ಜನರಿಂದ ಹಲವು ಗೌರವ ಸಿಕ್ಕಿದೆ. ಅದರ ಬಗ್ಗೆ ಅತ್ಯಂತ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ದಸರಾ ಉದ್ಘಾಟನೆ ಗೆ ಸರ್ಕಾರ ಪ್ರೀತಿಯಿಂದ ಗೌರವದಿಂದ ಸ್ವಾಗತ ಮಾಡಿದಾರೆ. ಅವರ ಮಮತೆಯ ಕರೆಯೋಲೆಗೆ ಧನ್ಯವಾದಗಳು, ಸಿದ್ದರಾಮಯ್ಯ ಅವರು ನನ್ನ ಹೆಸರು ಘೋಷಣೆ ಮಾಡಿದಾಗ ನಾನು ಹೊರ ದೇಶದಲ್ಲಿ ಇದ್ದೆ. ಸ್ನೇಹಿತರಿಂದ ವಿಚಾರ ತಿಳಿದು ಅಪಾರ ಸಂತೋಷವಾಗಿದೆ ಎಂದರು.
ನನ್ನ ಗೆಳತಿ ಲೇಖಕಿ ಮೈಸೂರಿನ ಮೀನಾ ಮೈಸೂರು ನನಗೆ ಬೂಕರ್ ಅವಾರ್ಡ್ ಬರಲಿ ಎಂದು ಚಾಮುಂಡೇಶ್ವರಿ ಗೆ ಹರಕೆ ಹೊತ್ತಿದ್ದರಂತೆ. ನನ್ನ ಕೃತಿ ಲಿಸ್ಟ್ ನಲ್ಲಿ ಬಂದಾಗ ಹರಕೆ ಹೊತ್ತಿದ್ದರಂತೆ. ಈ ವಿಚಾರ ಕೇಳಿ ನಾನು ಸಂತೋಷ ಪಟ್ಟಿದ್ದೆ. ಬೂಕರ್ ಅವಾರ್ಡ್ ಬಳಿಕ ಲಿಡ್ ಫೆಸ್ಟಿವಲ್ ಸಂದರ್ಭದಲ್ಲಿ ಮೈಸೂರಿಗೆ ಹೋಗಿದ್ದೆ. ಆಗ ಅಲ್ಲಿ ಸಿಕ್ಕಿದ್ದ ಗೆಳತಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರುಸೋಣ ಎಂದಿದ್ದರು. ಆಗಲೂ ಸಮಯದ ಕೊರತೆಯಿಂದ ಹೋಗಲು ಆಗಿರಲಿಲ್ಲ. ಮತ್ತೆ ಸದ್ಯದಲ್ಲಿ ಬರುವುದಾಗಿ ಹೇಳಿ ಬಂದಿದ್ದೆ. ಆದರೆ ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Tue, 26 August 25