ಬಾನು ಮುಷ್ತಾಕ್ ದಸರಾ ಉದ್ಘಾಟನೆ: ಶಬರಿಮಲೆ ಪ್ರಕರಣದ ಕೋರ್ಟ್ ತೀರ್ಪು ಇಲ್ಲಿಗೂ ಅನ್ವಯಿಸಬೇಕಲ್ಲವೇ?
ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಸುತ್ತ ರಾಜಕೀಯ ಚರ್ಚೆ ಗರಿಗೆದರಿದೆ. ಕರುನಾಡಿಗೆ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ಅಪಸ್ವರ ಎತ್ತಿದೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಮಾಡುವುದಾದರೆ ಅವರು ದೇವರ ಮೇಲಿನ ನಂಬಿಕೆಯನ್ನು ಸಾಬೀತು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಬಿ.ಶ್ರೀಪತಿರಾವ್ ಎನ್ನುವರು ಶಬರಿಮಲೆ ಅರ್ಚಕನ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ಇಲ್ಲಿ ಉಲ್ಲೇಖಿಸಿ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ಜು ಬಿ.ಶ್ರೀಪತಿರಾವ್ ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.

ನಾಡ ಅಧಿದೇವತೆ ಚಾಮುಂಡೇಶ್ವರಿ ದಸರಾ (Mysuru Dasara) ಜಂಬೂ ಸವಾರಿ ಮೆರವಣಿಗೆ ನಾಡಿನ ಮನೆ ಮನಗಳ ಶ್ರಧ್ದೆ ಭಕ್ತಿಯ ಸಂಕೇತ. ಮೈಸೂರು (Mysuru) ಸಂಸ್ಥಾನದ ರಾಜ ಪರಂಪರೆಯ ನಂಬುಗೆ ಆಚರಣೆಯ ಪ್ರತೀಕ. ಪ್ರತಿ ಬಾರಿ ಗಣ್ಯಾತಿ ಗಣ್ಯರು, ಮಹಾನ್ ಸಾಧಕರು, ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ನೆರೆವೇರಿಸುವ ಮೂಲಕ ದಸರಾ ಉದ್ಘಾಟನೆಯನ್ನು (Mysuru Dasara Inauguration) ನೆರವೇರಿಸುತ್ತ ಬಂದಿರುವುದು ಸಂಪ್ರದಾಯ. ಪ್ರತಿ ಬಾರಿಯ ದಸರಾ ಉದ್ಘಾಟನೆಗೆ ಸರ್ಕಾರ ತನ್ನದೇ ವಿವೇಚನೆಯನ್ನು ಬಳಸಿ ಗಣ್ಯರೊಬ್ಬರನ್ನು ಆಯ್ಕೆ ಮಾಡುತ್ತದೆ. ಈ ಬಾರಿಯ ದಸರಾ ಉದ್ಘಾಟಕರ ಆಯ್ಕೆ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಹೌದು, ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಆಯ್ಕೆ ಮಾಡಿದ್ದಾರೆ. ಆದರೆ ಬಾನು ಮುಷ್ತಾಕ್ (Banu Mushtaq) ಆಯ್ಕೆಗೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ. ದೇವರ ಮೇಲೆ ನಂಬಿಕೆ ಇಲ್ಲದವರು ಹೇಗೆ ದಸರಾ ಉದ್ಘಾಟನೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇದರ ನಡುವೆ ಬಿ.ಶ್ರೀಪತಿರಾವ್ ಎನ್ನುವರು ಶಬರಿಮಲೆ ಪ್ರಕರಣದಲ್ಲಿ ಕೋರ್ಟ್ ನೀಡಿದ್ದ ತೀರ್ಪನ್ನು ಇಲ್ಲಿ ಉಲ್ಲೇಖಿಸಿ ಬಾನು ಮುಷ್ತಾಕ್ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದು ನ್ಯಾಯ, ನೀತಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಕೆಲ ವರ್ಷಗಳ ಹಿಂದೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರೊಬ್ಬರು ತನ್ನ ಕೆಲಸ ಮುಗಿದ ಮೇಲೆ, ಮನೆಗೆ ತೆರಳುವ ದಾರಿಯಲ್ಲಿದ್ದ ಪರಿಚಯದವರ ಚರ್ಚ್ ಒಂದಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಚರ್ಚಿನವರು ಇದನ್ನೇ ಒಂದು ದೊಡ್ಡ ಸುದ್ದಿಯಾಗಿ ಮಾಡಿ ಲಾಭ ಪಡೆಯುವ ಪ್ರಯತ್ನ ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿ ಆ ಅರ್ಚಕನಿಗೆ ಶೋಕಾಸ್ ನೋಟಿಸ್ ನೀಡಿತು. ಅದಕ್ಕೆ ಆತ, ‘ನಾನು ನನ್ನ ಕೆಲಸ ನಿಷ್ಠೆಯಿಂದ ಮಾಡುತ್ತಿದ್ದೇನೆ. ಕೆಲಸದ ಅವಧಿ ಮುಗಿದ ಮೇಲೆ ನಾನು ಎಲ್ಲೇ ಹೋದರೂ ಏನೇ ಮಾಡಿದರೂ ಅದು ನನ್ನ ವೈಯಕ್ತಿಕ. ನನ್ನಿಂದ ಯಾವುದೇ ಕರ್ತವ್ಯ ಚ್ಯುತಿ ಆಗಿಲ್ಲ, ಆದ್ದರಿಂದ ಈ ಶೋಕಾಸ್ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಬೇಕು’ ಎಂದರು.
ಇದನ್ನೂ ಓದಿ: ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ
ದೇವಸ್ಥಾನದ ಆಡಳಿತ ಮಂಡಳಿ ಅರ್ಚಕನ ಹೇಳಿಕೆಯನ್ನು ತಿರಸ್ಕರಿಸಿ ಕೆಲಸದಿಂದ ವಜಾ ಮಾಡಿತು. ಆಗ ಅರ್ಚಕ ಆಡಳಿತ ಮಂಡಳಿ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು. ನಂತರದ ದಿನಗಳಲ್ಲಿ ಈ ಪ್ರಶ್ನೆ ಹೈಕೋರ್ಟ್ ಮೆಟ್ಟಲೇರಿತು. ಹೈಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಬಹಳ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಕೋಟ್ಯಂತರ ಜನರ ನಂಬಿಕೆಗೆ ಅನುಗುಣವಾಗಿ, ಅವರ ಪರ ಪೂಜೆಗೆ ಒಬ್ಬನನ್ನು ನೇಮಿಸಿದರೆ ಆತ ಅದನ್ನು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮತ್ತು ಭಕ್ತರೆಲ್ಲರಿಗೂ ಒಪ್ಪಿಗೆ ಬರುವಂತಹ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಪೂಜೆ ಮಾಡುವುದು ಒಂದು ನಂಬಿಕೆಯ ವಿಚಾರ. ಮಾಡುವ ಕೆಲಸದಲ್ಲಿ ನಂಬಿಕೆ ಇಲ್ಲವೆಂದರೆ ಆ ವ್ಯಕ್ತಿ ಪೂಜೆಗೆ ಅನರ್ಹ. ಆದ್ದರಿಂದ ವಜಾಗೊಳಿಸಿದ ಆದೇಶ ಸಿಂಧುವಾಗುತ್ತದೆ ಎಂದು ತೀರ್ಪು ನೀಡಿತು.
ದಸರಾ ಪ್ರಕರಣದಲ್ಲಿ ಈ ತೀರ್ಪು ಪರಿಗಣಿಸುವುದಾದರೆ, ಬಾನು ಮುಷ್ತಾಕ್ ನಂಬಿಕೆ ಇಲ್ಲದೆ ದಸರಾ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವುದು ನ್ಯಾಯಕ್ಕೆ, ನೀತಿಗೆ ವಿರುದ್ಧವಾಗಿರುತ್ತದೆ. ನಂಬಿಕೆ ಇಲ್ಲದವರಿಗೆ ನಾಟಕೀಯವಾಗಿ ಅಭಿನಯಿಸುವ ರೀತಿಯಲ್ಲಿ ಪೂಜೆಗೆ ಅವಕಾಶ ಕೊಟ್ಟರೆ ಅದರಿಂದ ದಸರಾ ಆಚರಣೆಯ ಪಾವಿತ್ರ್ಯತೆಗೆ ಭಂಗವಾಗುತ್ತದೆ. ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆಯುಂಟಾಗುವುದು ಸಹಜ.
ಇವನೇ ನನ್ನ ತಂದೆ ಅನ್ನುವುದನ್ನು ಒಪ್ಪದಿದ್ದವನೊಬ್ಬ ಎಲ್ಲರೆದುರು ಬೇರೊಬ್ಬನನ್ನು ತಂದೆಯಾಗಿಸಿಕೊಂಡು, ಕೊನೆಗೆ ಒಪ್ಪದ ತಂದೆಯ ಆಸ್ತಿಯಲ್ಲಿ ಪಾಲು ಕೇಳುವುದು ಅನೈತಿಕ ಎನಿಸದೇ?
ಬಿ.ಶ್ರೀಪತಿರಾವ್.




