ಹಾಸನ, ಮಾ.17: ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಬಂಡಾಯದ ಬಿಸಿ ಬಿಜೆಪಿಯನ್ನು ಸುಡುತ್ತಿದೆ. ಈ ನಡುವೆ, ಹಾಸನದಲ್ಲಿ (Hassan) ಕಾಂಗ್ರೆಸ್ನಲ್ಲಿ ಭಿನ್ನಮತ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಸನ ಕ್ಷೇತ್ರದಲ್ಲಿ ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ (Shreyas Patel) ಅವರಿಗೆ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡಿರುವ ಪುಟ್ಟಸ್ವಾಮಿಗೌಡ ಪುತ್ರಿ ಪಿ ರಾಜೇಶ್ವರಿ (P Rajeshwari) ಅವರು ಸೋದರಳಿಯ ಶ್ರೇಯಸ್ ವಿರುದ್ಧವೇ ಬಂಡಾಯವೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜೇಶ್ವರಿ ಅವರು ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಸಿದ್ದರೂ ಕೈತಪ್ಪಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲೂ ಹಾಸನ ಕ್ಷೇತ್ರದ ಟಿಕೆಟ್ಗಾಗಿ ಲಾಭಿ ನಡೆಸಿದ್ದರು. ಇನ್ನೊಂದೆಡೆ, ಇವರ ಸೋದರಳಿ ಶ್ರೇಯಸ್ ಪಟೇಲ್ ಕೂಡ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಶ್ರೇಯಸ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಹಾಸನ ಕ್ಷೇತ್ರದ ಗೆಲುವಿಗೆ ನಿರ್ಣಾಯಕವಾಗಿರುವ ಕಡೂರಿನಲ್ಲಿ ದಳಪತಿ ದೇವೇಗೌಡ ರಣತಂತ್ರ
ಪದೇ ಪದೇ ಕಾಂಗ್ರೆಸ್ ಹೈ ಕಮಾಂಡ್ನಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶಗೊಂಡಿರುವ ರಾಜೇಶ್ವರಿ ಅವರು ಹಾಸನದಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಆ ಮೂಲಕ ಸೋದರಳಿಯನ ವಿರುದ್ದವೇ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ರಾಜೇಶ್ವರಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಬೆಂಬಲಿಗರ ಸಭೆ ಕರೆದು ತೀರ್ಮಾನ ಮಾಡಲು ರಾಜೇಶ್ವರಿ ಮತ್ತು ಕುಟುಂಬಸ್ಥರು ಮುಂದಾಗಿದ್ದಾರೆ. ಇದು ಸಹಜವಾಗಿ ಜಿಲ್ಲಾ ಕಾಂಗ್ರೆಸ್, ರಾಜ್ಯ ಹಾಗೂ ಹೈಕಮಾಂಡ್ ನಾಯಕರಿಗೆ ತಲೆಬಿಸಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ