ಪ್ರಜ್ವಲ್ ಬಂದಾಯ್ತು ಈಗ ಭವಾನಿ ಎಲ್ಲಿ? ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ರೇವಣ್ಣ ಪತ್ನಿ

| Updated By: ಗಣಪತಿ ಶರ್ಮ

Updated on: May 31, 2024 | 11:40 AM

ಕೊನೆಗೂ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಅತ್ತ ಪ್ರಜ್ವಲ್, ಹೆಚ್​ಡಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಜಾಮೀನು ಅರ್ಜಿ ಇಂದು ವಿಚಾರಣೆ ನಡೆಯಲಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಭವಾನಿ ಕಳೆದ 15 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ನಿಗೂಢ ಸ್ಥಳದಲ್ಲಿರುವುದು ಗೊತ್ತಾಗಿದೆ. ಸದ್ಯ ಅವರಿಗೆ ಎಸ್​ಐಟಿ ನೋಟಿಸ್ ನೀಡಿದ್ದು, ಜೂನ್ 1ರಂದು ಮನೆಯಲ್ಲಿರುವಂತೆ ಕಡ್ಡಾಯ ಸೂಚನೆ ನೀಡಿದೆ. ಆದರೆ ಅವರು ಬರುತ್ತಾರಾ? ತಿಳಿಯಲು ಮುಂದೆ ಓದಿ.

ಪ್ರಜ್ವಲ್ ಬಂದಾಯ್ತು ಈಗ ಭವಾನಿ ಎಲ್ಲಿ? ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ರೇವಣ್ಣ ಪತ್ನಿ
ಭವಾನಿ ರೇವಣ್ಣ
Follow us on

ಹಾಸನ, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ (HD Revanna) ಕುಟುಂಬದ ಸದಸ್ಯರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಮಧ್ಯೆ, ಪ್ರಮುಖ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯಿಂದ ಬಂದು ಬೆಂಗಳೂರಿನಲ್ಲಿ ಎಸ್​​ಐಟಿ ವಶವಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಸಿಲುಕಿರುವ ಭವಾನಿ ರೇವಣ್ಣ (Bhavani Revanna) ಕಳೆದ 15 ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿರುವುಸು ಎಸ್​ಐಟಿ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ಈ ಮಧ್ಯೆ, ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್​​ಐಟಿ ನೊಟೀಸ್ ನೀಡಿದೆ. ಆದರೆ, ಈ ನೊಟೀಸ್​​ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಅಲ್ಲದೆ, ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು. ಆ ನಂತರ ಮೇ 6 ರಂದು ಹೊಳೆನರಸೀಪುರದ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭವಾನಿಯನ್ನು ಬೇಟಿಯಾಗಿದ್ದರು. ಶಾಸಕರನ್ನು ಬೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಭವಾನಿ ರೇವಣ್ಣ ಹೊರ ಹೋಗಿದ್ದರು.

ಜೈಲಿನಿಂದ ಬಿಡುಗಡೆಯಾದ ರೇವಣ್ಣ ಭೇಟಿಗೂ ಬಂದಿಲ್ಲ!

ಆ ನಂತರ, ಅಂದರೆ ಮೇ 8 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಜೈಲುಪಾಲಾಗಿದ್ದ ಪತಿ ರೇವಣ್ಣರನ್ನು ಬೇಟಿಯಾಗಲೂ ಬಂದಿಲ್ಲ. ಆ ಬಳಿಕ ರೇವಣ್ಣ ಜೈಲಿನಿಂದ ಬಿಡುಗಡೆ ಆದರೂ ಅವರನ್ನು ಬೇಟಿಯಾಗಲು ಭವಾನಿ ಬಂದಿಲ್ಲ. ಸದ್ಯ ಅವರು ನಿಗೂಢ ಸ್ಥಳದಲ್ಲಿ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭವಾನಿ, ಹೆಚ್​​ಡಿ ರೇವಣ್ಣ, ಪ್ರಜ್ವಲ್ ಪಾಲಿಗೆ ಮಹತ್ವದ ದಿನ: ಜಾಮೀನಾ ಬಂಧನವಾ? ಇಂದು ನಿರ್ಧಾರ

ಮತ್ತೊಂದೆಡೆ, ಭವಾನಿ ರೇವಣ್ಣ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ಕಲೆ ಹಾಕಲು ಎಸ್​ಐಟಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದರೆ ಭವಾನಿ ರೇವಣ್ಣ ಬಂಧನ ಸಾದ್ಯತೆ ಇದೆ. ಹೀಗಾಗಿಯೇ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಭವಾನಿಗೆ ಎಸ್​ಐಟಿ ಮೊದಲ‌ ನೊಟೀಸ್ ನೀಡಿದ್ದು, ಜೂನ್ 1 ರಂದು ಖುದ್ದು ಮನೆಯಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ