AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವಾನಿ, ಹೆಚ್​​ಡಿ ರೇವಣ್ಣ, ಪ್ರಜ್ವಲ್ ಪಾಲಿಗೆ ಮಹತ್ವದ ದಿನ: ಜಾಮೀನಾ ಬಂಧನವಾ? ಇಂದು ನಿರ್ಧಾರ

ಇಂದು ಭವಾನಿ, ಹೆಚ್​​ಡಿ ರೇವಣ್ಣ ಹಾಗೂ ಪ್ರಜ್ವಲ್ ಪಾಲಿಗೆ ಮಹತ್ವದ ದಿನ. ಮೂವರಿಗೆ ಸಂಬಂಧಿಸಿ ಅರ್ಜಿಗಳ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಗೂ ಹೈಕೋರ್ಟ್​ನಲ್ಲಿ ನಡೆಯಲಿದೆ. ಅಷ್ಟಕ್ಕೂ ಆ ಅರ್ಜಿಗಳು ಯಾವುವು? ಅವುಗಳ ಮಹತ್ವವೇನು ಎಂಬ ವಿವರಗಳಿಗೆ ಮುಂದೆ ಓದಿ.

ಭವಾನಿ, ಹೆಚ್​​ಡಿ ರೇವಣ್ಣ, ಪ್ರಜ್ವಲ್ ಪಾಲಿಗೆ ಮಹತ್ವದ ದಿನ: ಜಾಮೀನಾ ಬಂಧನವಾ? ಇಂದು ನಿರ್ಧಾರ
ರೇವಣ್ಣ ಮೈಸೂರು ಜಿಲ್ಲೆಯ ಕೆ ಆರ್ ನಗರಕ್ಕೆ ಹೋಗುವಂತಿಲ್ಲ ಎನ್ನುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ಇನ್ನು ಭವಾನಿಗೆ ಕೆ ಆರ್ ನಗರ ಸೇರಿ ಹಾಸನ ಜಿಲ್ಲೆಗೂ ಬಾರದಂತೆ ಷರತ್ತು ವಿಧಿಸಿ ಅವರಿಗೆ ಜಾಮೀನು ನೀಡಿದೆ.
Ramesha M
| Edited By: |

Updated on:May 31, 2024 | 9:17 AM

Share

ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಹಾಗೂ ಕಿಡ್ನ್ಯಾಪ್ ಪ್ರಕರಣಗಳನ್ನು ಎದುರಿಸುತ್ತಿರುವ ಜೆಡಿಎಸ್ ನಾಯಕರಾದ ಹೆಚ್​ಡಿ ರೇವಣ್ಣ (HD Revanna), ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಗೂ ಪುತ್ರ ಪ್ರಜ್ವಲ್ ರೇವಣ್ಣಗೆ (Prajwal Revanna) ಇಂದು ಮಹತ್ವದ ದಿನ. ಮೂವರಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಗೂ ಹೈಕೋರ್ಟ್​ನಲ್ಲಿ ನಡೆಯಲಿದೆ. ಒಂದೆಡೆ ಅತ್ಯಾಚಾರ ಕೇಸ್​​ನಲ್ಲಿ ಬಂಧಿತನಾಗಿರುವ ಪ್ರಜ್ವಲ್, ಮತ್ತೊಂದೆಡೆ ಬಂಧನದ ಭೀತಿಯಲ್ಲಿರೋ ಭವಾನಿ, ಮಗದೊಂದೆಡೆ ಸಿಕ್ಕಿರುವ ಜಾಮೀನು ರದ್ದುಗೊಳ್ಳುತ್ತದೆಯಾ ಎಂಬ ಆತಂಕದಲ್ಲಿರುವ ಹೆಚ್​ಡಿ ರೇವಣ್ಣ. ಹೀಗೆ ರೇವಣ್ಣ ಕುಟುಂಬದ ಮೂವರು ಪಾಲಿಗೆ ಇಂದು ತೀರಾ ಆತಂಕದ ದಿನ. ಇವತ್ತಿನ ಕೋರ್ಟ್ ನೀಡಬಹುದಾದ ಆದೇಶ ಇವರ ಭವಿಷ್ಯ ನಿರ್ಧರಿಸಲಿರುವುದೇ ಇದಕ್ಕೆ ಕಾರಣ.

ಭವಾನಿಗೆ ಶುರುವಾಯ್ತು ಬಂಧನ ಭೀತಿ

ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಎಸ್ಐಟಿ ಭವಾನಿ ರೇವಣ್ಣರನ್ನ ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕೆಂದು ಹೇಳುತ್ತಿದೆ. ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಇಂದು ಹೊರಬೀಳಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್​​ ಅವರು ನೀಡುವ ಆದೇಶ ಭವಾನಿ ಭವಿಷ್ಯ ನಿರ್ಧರಿಸಲಿದೆ. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡ್ರೆ ಎಸ್ಐಟಿಯಿಂದ ಭವಾನಿ ಬಂಧನಕ್ಕೊಳಗಾಗೋ ಸಾಧ್ಯತೆ ಹೆಚ್ಚು. ನಿರೀಕ್ಷಣಾ ಜಾಮೀನು ಸಿಕ್ಕರೆ ಬಂಧನದ ಭೀತಿಯಿಂದ ಭವಾನಿಗೆ ಮುಕ್ತಿ ಸಿಗಬಹುದು.

ರೇವಣ್ಣಗೆ ಜಾಮೀನು ರದ್ದಾಗುವ ಭಯ

ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣಗೆ ಜಾಮೀನು ಸಿಕ್ಕಿದರೂ ಅದನ್ನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಈ ತನಿಖೆ ಮುಗಿಯುವವರೆಗೆ ರೇವಣ್ಣ ಬಂಧನದಲ್ಲೇ ಮುಂದುವರಿಯಬೇಕು. ಹೀಗಾಗಿ ಜಾಮೀನು ರದ್ದುಪಡಿಸುವಂತೆ ಎಸ್ಐಟಿ ಹೈಕೋರ್ಟ್ ಮೊರೆ ಹೋಗಿದೆ. ಈ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಇರುವ ಹೈಕೋರ್ಟ್ ಪೀಠದಲ್ಲಿ ನಡೆಯಲಿದೆ. ಹೈಕೋರ್ಟ್ ಹೆಚ್​ಡಿ ರೇವಣ್ಣ ಜಾಮೀನು ರದ್ದುಪಡಿಸಿದರೆ ಮತ್ತೆ ಜೈಲುಪಾಲಾಗಬಹುದು. ಜಾಮೀನು ರದ್ದತಿಗೆ ನಿರಾಕರಿಸಿದರೆ ರಿಲೀಫ್ ಸಿಕ್ಕಂತೆ. ಇನ್ನು ಈ ಕೇಸನ್ನೇ ರದ್ದುಪಡಿಸಬೇಕೆಂದು ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯೂ ಇಂದು ಹೈಕೋರ್ಟ್​ನಲ್ಲಿ‌ ನಡೆಯಲಿದೆ.

ಪ್ರಜ್ವಲ್ ರೇವಣ್ಣ ಕಸ್ಟಡಿ ಇಂದು‌ ನಿರ್ಧಾರ

ಈಗಾಗಲೇ ಬಂಧಿತನಾಗಿರುವುದರಿಂದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಅನೂರ್ಜಿತಗೊಳ್ಳಲಿದೆ. ಹೀಗಾಗಿ ಪ್ರಜ್ವಲ್ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ‌ ಹಿಂಪಡೆಯಬಹುದು. ಹಾಗೆಯೇ ಬಂಧನದ 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಪ್ರಜ್ವಲ್ ಹಾಜರುಪಡಿಸಲಾಗುವುದು. ಪ್ರಜ್ವಲ್​ರನ್ನ ಕಸ್ಟಡಿಗೆ ಒಪ್ಪಿಸುವಂತೆ ಎಸ್ಐಟಿ ನ್ಯಾಯಾಲಯಕ್ಕೆ ಕೋರಬಹುದು. ನ್ಯಾಯಾಂಗ ಬಂಧನ ವಹಿಸಿದರೆ ಜೈಲು ಸೇರಬೇಕಾಗಬಹುದು. ಹೀಗಾಗಿ ಇವತ್ತು ಎಸ್ಐಟಿ ಕಸ್ಟಡಿಯೋ, ಜೈಲೋ ಎಂಬುದಷ್ಟೇ ಪ್ರಜ್ವಲ್ ಪ್ರಕರಣದಲ್ಲಿ ಇರುವ ಕುತೂಹಲವಾಗಿದೆ.

ಇದನ್ನೂ ಓದಿ: ಮ್ಯೂನಿಕ್​ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ

ಹೀಗೆ ಹೆಚ್​​ಡಿ ರೇವಣ್ಣ ಕುಟುಂಬದ ಮೂವರ ಭವಿಷ್ಯವನ್ನು ಇಂದು ಬೆಂಗಳೂರಿನ‌ ಕೋರ್ಟ್​ಗಳು ನಿರ್ಧರಿಸಲಿವೆ. ರೇವಣ್ಣ ಹಾಗೂ ಕುಟುಂಬದವರಿಗೆ ಸಂಕಷ್ಟವೋ, ಪರಿಹಾರವೋ ಕೋರ್ಟ್ ನಿರ್ಧರಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 am, Fri, 31 May 24