ಹಾಸನ,ಸೆ.02: ಕಳೆದ ಲೋಕಸಭಾ ಚುನಾವಣೆಯ(Lok Sabha Election) ಸಂದರ್ಭದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಪ್ರಜ್ವಲ್ ರೇವಣ್ಣ(Prajwal Revanna) ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಹೀಗಾಗಿ ಜೆಡಿಎಸ್(JDS) ಪಾಳಯದಲ್ಲಿ ಕೋರ್ಟ್ ತೀರ್ಪು ತಲ್ಲಣ ಮೂಡಿಸಿದೆ. ಸದ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ತಯಾರಿ ನಡೆಸಿದ್ದಾರೆ.
ಸೆ.04ರ ಸೋಮವಾರವೇ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಮುಂದಾಗಿದ್ದಾರೆ. ಇಂದು ತಾತ ಮಾಜಿ ಪ್ರಧಾನಿ ದೇವೇಗೌಡರು, ತಂದೆ ಮಾಜಿ ಸಚಿವ ರೇವಣ್ಣ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇಂದು ಹೊಳೆನರಸೀಪುರದ ದೇವೇಶ್ವರ ಹಾಗೂ ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಶ್ರಾವಣ ಮಾಸದ ಪೂಜೆಯಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿ ದೇವೇಗೌಡರು ಅವರು ನಿನ್ನೆಯೇ ಹುಟ್ಟೂರಿಗೆ ಆಗಮಿಸಿದ್ದಾರೆ. ಸದ್ಯ ಇಂದು ಪೂಜೆ ಬಳಿಕ ಕೋರ್ಟ್ ತೀರ್ಪಿನ ಬಗ್ಗೆ ಪ್ರಜ್ವಲ್ ಹಾಗೂ ಕುಟುಂಬಸ್ಥರು ಚರ್ಚೆ ನಡೆಸಲಿದ್ದಾರೆ. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ತೀರ್ಪಿಗೆ ತಡೆಯಾಜ್ಞೆ ತರುವ ಬಗ್ಗೆ ಚರ್ಚಿಸಲಿದ್ದಾರೆ.
ಇನ್ನು ಹೈಕೋರ್ಟ್ ತೀರ್ಪಿಗೂ ಮುನ್ನವೇ ತಮ್ಮ ವಿರುದ್ಧ ತೀರ್ಪು ಬಂದರೆ ಏನು ಮಾಡಬೇಕೆಂಬ ಬಗ್ಗೆ ಈ ಹಿಂದೆಯೇ ಚರ್ಚೆ ನಡೆಸಿದ್ದ ರೇವಣ್ಣ ಕುಟುಂಬದವರು ಈಗ ತಮ್ಮ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ತೀರ್ಪಿಗೆ ತಡೆ ತರಲು ಪ್ಲಾನ್ ಮಾಡಿದ್ದಾರೆ. ತಕ್ಷಣಕ್ಕೆ ತಡೆಯಾಜ್ಞೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ದಳ ಪಾಳೆಯದಲ್ಲಿ ಚಿಂತನೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಇಂದು ಮಾಜಿ ಪ್ರಧಾನಿ ದೇವೇಗೌಡರ ಜೊತೆ ಚರ್ಚೆ ಬಳಿಕ ಪ್ರಜ್ವಲ್ ಕುಟುಂಬ ವಕೀಲರನ್ನು ಭೇಟಿ ಮಾಡಲಿದೆ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ತೀರ್ಪು ಬಂದಿರುವ ಹಿನ್ನೆಲೆ ಬೇಗನೇ ತೀರ್ಪಿಗೆ ತಡೆಯಾಜ್ಞೆ ತರುವ ಬಗ್ಗೆ ತಯಾರಿ ನಡೆದಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನರ್ಹ; ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ ಮಂಜು
2019ರ ಲೋಕಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ 4 ವರ್ಷಗಳ ನಂತರ ಪ್ರಜ್ವಲ್ ರೇವಣ್ಣ ಅವರಿಗೆ ಅನರ್ಹತೆ ಶಾಕ್ ಎದುರಾಗಿದೆ. ಚುನಾವಣೆಯಲ್ಲಿ ಆಸ್ತಿ ವಿವರ ಸಲ್ಲಿಸುವಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಪ್ರಕರಣದಲ್ಲಿ ಹೈಕೋರ್ಟ್ ನ್ಯಾ. ಕೆ. ನಟರಾಜನ್ ಪೀಠ ಸಂಸತ್ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಪ್ರಕಟಿಸಿದೆ.
ಹಾಸನ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:05 am, Sat, 2 September 23