ಬೇಲೂರು ಚನ್ನಕೇಶವ ಸ್ವಾಮಿ ತೇರು: ಸಂಪ್ರದಾಯದಂತೆ ಕುರಾನ್ ಪಠಣಕ್ಕೆ ಅವಕಾಶ ಕೊಟ್ಟ ಸರ್ಕಾರ

ಸಂಪ್ರದಾಯದಂತೆ ಈ ವರ್ಷವು ತೇರು ಕದಲುವ ಮೊದಲು ಕುರಾನ್ ಪಠಿಸಲು ಮುಜರಾಯಿ ಇಲಾಖೆಯು ಅವಕಾಶ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು.

ಬೇಲೂರು ಚನ್ನಕೇಶವ ಸ್ವಾಮಿ ತೇರು: ಸಂಪ್ರದಾಯದಂತೆ ಕುರಾನ್ ಪಠಣಕ್ಕೆ ಅವಕಾಶ ಕೊಟ್ಟ ಸರ್ಕಾರ
ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವಕ್ಕೂ ಮುನ್ನ ಖಾಜಿ ಸಾಬ್ ಕುರಾನ್ ಪಠಿಸಿದರು.
Edited By:

Updated on: Apr 13, 2022 | 11:16 AM

ಹಾಸನ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು. ಸಂಪ್ರದಾಯದಂತೆ ಈ ವರ್ಷವು ತೇರು ಕದಲುವ ಮೊದಲು ಕುರಾನ್ ಪಠಿಸಲು ಮುಜರಾಯಿ ಇಲಾಖೆಯು ಅವಕಾಶ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು. ಖುರಾನ್ ಪಠಣಕ್ಕೆ ಅವಕಾಶ ನೀಡುವ ಬಗ್ಗೆ ಸೂಕ್ತ ನಿರ್ದೇಶನ ಕೋರಿ ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ನಿನ್ನೆ (ಏಪ್ರಿಲ್ 12) ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಆಯುಕ್ತೆ ರೋಹಿಣಿ ಸಿಂಧೂರಿ ಇಲಾಖೆಯ ನಿರ್ದೇಶನ ಪತ್ರ ಕಳುಹಿಸಿದ್ದಾರೆ. ಹಿಂದೂ ಧಾರ್ಮಿಕ ಕಾಯ್ದೆ 2002ರ ಸೆಕ್ಷನ್ 58ರ ಪ್ರಕಾರ ದೇಗುಲದ ಧಾರ್ಮಿಕ ಆಚರಣೆ, ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡತಕ್ಕುದಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಆಯುಕ್ತರ ಸೂಚನೆಯಂತೆ ಖುರಾನ್ ಪಠಣ ಸಂಪ್ರದಾಯ ಮುಂದುವರಿಸಲು ದೇಗುಲ ಸಮಿತಿ ನಿರ್ಧರಿಸಿತು. ಬೆಳಿಗ್ಗೆ 10:40ಕ್ಕೆ ನಡೆದ ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ವಾಡಿಕೆಯಂತೆ ಖಾಜಿ‌ ಸಾಬ್ ಕುರಾನ್ ಪಠಿಸಿದರು. ಸ್ಥಳೀಯ ಶಾಸಕ ಲಿಂಗೇಶ್, ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಎರಡು ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಬೇಲೂರಿಗೆ ಬಂದಿದ್ದಾರೆ. ಶ್ರೀವೈಷ್ಣವ ಸಂಪ್ರದಾಯದ ಪಾಂಚರಾತ್ರ ಆಗಮ ಪದ್ಧತಿಗಳಿಗೆ ಅನುಗುಣವಾಗಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ಕುರಾನ್ ಪಠಣೆಗೆ ವ್ಯಕ್ತವಾದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ್ದ ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ, ಇದು ನಮ್ಮ ಕೈಪಿಡಿಯಲ್ಲಿಯೇ ಇದೆ. ಪ್ರತಿವರ್ಷದ ಸಂಪ್ರದಾಯ ಅದು. ಈ ವರ್ಷ ಚರ್ಚೆಗೆ ಒಳಪಟ್ಟಿದೆ. ಹೀಗಾಗಿ ಆಯುಕ್ತರ ನಿರ್ದೇಶನ ಕೋರಿದ್ದೇವೆ ಎಂದಿದ್ದರು. ಜಾತ್ರೆಯಲ್ಲಿ ಮುಸ್ಲಿಮರಿಗೆ ಮಳಿಗೆ ಹಾಕಲು ಅವಕಾಶ ಕೊಡುವ ಬಗ್ಗೆಯೂ ಇತ್ತೀಚೆಗೆ ವ್ಯಾಪಕ ಚರ್ಚೆಗಳು ನಡೆದಿದ್ದವು. ಹಿಂದುತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. ದೇಗುಲ ಪರಿಸರದಲ್ಲಿ ಟೆಂಡರ್ ಹಾಕುವ ಹಕ್ಕನ್ನು ಸಿದ್ದೇಶ್ ಎನ್ನುವವರು ಪಡೆದುಕೊಂಡಿದ್ದಾರೆ. ಪುರಸಭೆ ಟೆಂಡರ್ ಕರೆದಿದ್ದು, ಇದು ಮುಜರಾಯಿ ಇಲಾಖೆಗೆ ಸಂಬಂಧಿಸಿಲ್ಲ. 15 ಮುಸ್ಲಿಂ ಕುಟುಂಬಗಳು ಮಳಿಗೆಗೆ ಅವಕಾಶ ಪಡೆದಿವೆ ಎಂದು ಟೆಂಡರ್​ದಾರರು ತಿಳಿಸಿದ್ದರು.

ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಫೋಟೊ ಹಾಗೂ ಕನ್ನಡ ಬಾವುಟ ಹಿಡಿದಿದ್ದ ಅಭಿಮಾನಿಗಳು ‘ಅಪ್ಪು ಅಪ್ಪು’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ಇದನ್ನೂ ಓದಿ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ

ಇದನ್ನೂ ಓದಿ: ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅನ್ಯಧರ್ಮದ ವ್ಯಾಪಾರಸ್ಥರಿಗೆ ನಿರ್ಬಂಧಿಸಲು ಒತ್ತಾಯ

Published On - 11:15 am, Wed, 13 April 22

TV9 Web

TV9 Kannada

Read More
Loading...
Unable to load recommendations.
Follow Us