ಹಾಸನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಇಂದು ಸಕಲೇಶಪುರ ತಾಲೂಕಿನ ಅಂಗನವಾಡಿ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಜೈಕುಮಾರ್ ಆದೇಶ ಹೊರಡಿಸಲಾಗಿದೆ. ಮುಂಜಾಗ್ರತೆಯಿಂದ ತಾಲೂಕು ಆಡಳಿತ ರಜೆ ಘೋಷಿಸಿದೆ. ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಖಾನಾಪುರ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಧಾರಾಕಾರ ಮಳೆಗೆ ಬೆಳಗಾವಿ ನಗರದಲ್ಲಿ ಮತ್ತೊಂದು ಮನೆ ಕುಸಿತವಾಗಿರುವಂತಹ ಘಟನೆ ಬೆಳಗಾವಿಯ ವಡಗಾವಿಯಲ್ಲಿರುವ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ. ರಂಜಿತ್ ಚವ್ಹಾಣ ಎಂಬುವವರಿಗೆ ಸೇರಿದ ಮನೆ ಕುಸಿತವಾಗಿದೆ. ಮನೆ ಗೋಡೆ ಕುಸಿಯುವಾಗಲೇ ಓಡಿ ಬಂದು ನಾಲ್ವರು ಜೀವ ಉಳಿಸಿಕೊಂಡಿದ್ದಾರೆ. ಮಣ್ಣಿನಡಿಯಲ್ಲಿ ಪಾತ್ರೆ, ಬಟ್ಟೆ, ಆಹಾರ ಸಾಮಾಗ್ರಿಗಳು ಸಿಲುಕಿವೆ. ಎಲ್ಲವನ್ನೂ ಕಳೆದುಕೊಂಡು ಕುಟುಂಬ ಬೀದಿಗೆ ಬಂದಿದ್ದು, ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಮಳೆ ಅವಾಂತರ: ಎದೆಮಟ್ಟದ ನೀರಿನಲ್ಲಿ ಸಂಸ್ಕಾರಕ್ಕೆ ಶವ ಹೊತ್ತೈದ ಗ್ರಾಮಸ್ಥರು
ಬಾಗಲಕೋಟೆಯಲ್ಲಿ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಮನೆ ಬಿಟ್ಟು ಜನರು ಹೊರಬರುತ್ತಿಲ್ಲ. ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಸೇರಿದಂತೆ ಮನೆ ಕಾಂಪೌಂಡ್ ಒಳಗೂ ನೀರು ನುಗ್ಗಿದ್ದು, ರಸ್ತೆಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ: ಭೂ ಕುಸಿತದ ಆತಂಕ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ, ಭೂ ಕುಸಿತದ ಆತಂಕ ಉಂಟಾಗಿರುವಂತಹ ಘಟನೆ ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ನಡೆದಿದೆ. ಸ್ಥಳಕ್ಕೆ ಗಣಿ ಇಲಾಖೆ, ಕಂದಾಯ, ನೋಡೆಲ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದರು. ಭೂ ಕುಸಿತದ ಪ್ರದೇಶದಲ್ಲಿದ್ದ ಕುಟುಂಬಸ್ಥರನ್ನ ಕಾಳಜಿ ಕೇಂದ್ರಕ್ಕೆ ಶಿಪ್ಟ್ ಮಾಡಲಾಗಿದೆ. 12 ಜನರನ್ನು ಕಾಳಜಿ ಕೇಂದ್ರಕ್ಕೆ ಶಿಪ್ಟ್ ಮಾಡಿದ್ದು, 3 ದಿನಗಳ ಕಾಲ ಕಾಳಜಿ ಕೇಂದ್ರದಲ್ಲಿರುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಮುಂದುವರೆದ ಡೋಣಿ ನದಿ ಪ್ರವಾಹ: ನೂರಾರು ಎಕರೆ ಕೃಷಿ ಭೂಮಿ ಜಲಾವೃತ, ಸಂಚಾರ ಬಂದ್
1 ಲಕ್ಷ 10ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ವಿಜಯನಗರ: ತುಂಗಭದ್ರಾ ಜಲಾಶಯದಿಂದ ಮತ್ತೆ ನೀರು ಹೊರಕ್ಕೆ ಬಿಟ್ಟಿದ್ದು, ಜಲಾಶಯದಿಂದ 1 ಲಕ್ಷ 10ಸಾವಿರ ಕ್ಯೂಸೆಕ್ ನೀರನ್ನು ಟಿಬಿ ಬೋರ್ಡ್ ನದಿಗೆ ಹರಿಸಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ, ನದಿಗೆ ನೀರು ಹರಿಸಲಾಗುತ್ತಿದೆ. 20 ಗೇಟ್ಗಳನ್ನು 2.50. ಅಡಿ ಎತ್ತರಿಸಿ, 10 ಗೇಟ್ಗಳನ್ನು 1.50 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗಿದ್ದ, ಮತ್ತೊಮ್ಮೆ ಹಂಪಿಯ ಹಲವು ಸ್ಮಾರಕಗಳು ಜಲಾವೃತವಾಗಿವೆ. ಪುರಂದರ ದಾಸರ ಮಂಟಪ, ಸಾಲು ಮಂಟಪ, ಧಾರ್ಮಿಕ ವಿಧಿವಿಧಾನಗಳ ಮಂಟಪ ಜಲಾವೃತವಾಗಿವೆ. ಕಂಪ್ಲಿ ಮತ್ತು ಗಂಗಾನದಿ ಮಧ್ಯೆ ಇರೋ ಸೇತುವೆ ಜಲಾವೃತವಾಗಲು ಕ್ಷಣಗಣನೆ ಶುರುವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Mon, 8 August 22