ರಾಮನಗರದಿಂದ ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಹಾಸನದಲ್ಲಿ ಪಲ್ಟಿ; 7 ಜನರಿಗೆ ಗಂಭೀರ ಗಾಯ
ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿ 7 ಮಂದಿಗೆ ಗಾಯಗಳಾಗಿದ್ದು, ಕಲಬುರಗಿಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೇ ರೀತಿ ರಾಮನಗರದಲ್ಲಿನ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹಾಸನ: ಶಾಲಾ ಪ್ರವಾಸಕ್ಕೆ (School Trip) ತೆರಳಿದ್ದ ಬಸ್ ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 7 ಮಂದಿಗೆ ಗಂಭೀರ ಗಾಯಗಳಾದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ನಿಡಗೋಡು ಗ್ರಾಮದ ಬಳಿ (Bus Accident In Hassan) ನಡೆದಿದೆ. ರಾಮನಗರ (Ramanagar) ಜಿಲ್ಲೆ ಕನಕಪುರದ ಸರ್ಕಾರಿ ಪ್ರೌಡ ಶಾಲೆಯಿಂದ ಎರಡು ಬಸ್ಗಳಲ್ಲಿ ಒಟ್ಟು 71 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರವಾಸ ಕೈಗೊಂಡಿದ್ದರು. ಈ ಪೈಕಿ ಒಂದು ಬಸ್ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಡಗೋಡು ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಬೇಲೂರು ಹಾಗೂ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಸದಿಂದ ವಾಪಸ್ ಆಗುತ್ತಿದ್ದಾಗ ಅಪಘಾತ, ಇಬ್ಬರು ಸಾವು
ಕಲಬುರಗಿ: ನಿಂತಿದ್ದ ಕಬ್ಬಿನ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ನಡೆದಿದೆ. ಟಿಟಿ ಚಾಲಕ ಅಪ್ಪರಾಯ್ ಬಿರಾದರ್ ಮತ್ತು ಸಂಜುಕುಮಾರ್ ಮೃತ ದುರ್ದೈವಿಗಳಾಗಿದ್ದು, ಘಟನೆಯಲ್ಲಿ ಗಾಯಗೊಂಡ ಐವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ 14 ಜನ ಸೇರಿ 16 ಜನ ಟಿಟಿ ವಾಹನದಲ್ಲಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಇನ್ನೇನು ಅರ್ಧ ಗಂಟೆಯಲ್ಲಿ ಮನೆಗೆ ತಲುಪಲಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಣಿಪುರದ ನೋನಿ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಶಾಲಾ ಬಸ್: 15 ವಿದ್ಯಾರ್ಥಿಗಳು ದುರ್ಮರಣ
ತಿರುಪತಿಯಿಂದ ವಾಪಸ್ ಆಗುತ್ತಿದ್ದಾಗ ಅಪಘಾತ, ಇಬ್ಬರು ಸಾವು
ರಾಮನಗರ: ಇಚರ್ ವಾಹನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗೇಟ್ ಬಳಿ ನಡೆದಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಚರ್ ವಾಹನಕ್ಕೆ ಹಿಂಬದಿಯಿಂದ ಬಂದ ಟಿಟಿ ವಾಹನ ಡಿಕ್ಕಿ ಹೊಡೆದಿದ್ದು, ಟಿಟಿ ವಾಹನದಲ್ಲಿದ್ದ ಕೃಷ್ಣ ಮತ್ತು ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಮೃತರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ನಿವಾಸಿಗಳಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Sat, 24 December 22