ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ; ಒಂದು ಸೂಟ್ಕೇಸ್ ಬಟ್ಟೆ ಮಾತ್ರ ಅವರ ಆಸ್ತಿ: ಶೋಭಾ ಕರಂದ್ಲಾಜೆ
Shobha Karandlaje: ನನಗೂ ಪೆಗಾಸಿಸ್ಗೂ ಯಾವುದೇ ಸಂಬಂಧವಿಲ್ಲ. ಆದರೆ, ಆ ವಿಚಾರವನ್ನಿಟ್ಟುಕೊಂಡು ಸಂಸತ್ತಿನಲ್ಲಿ ಗದ್ದಲ ಎಬ್ಬಿಸಲಾಯಿತು. ಸಂಸತ್ತಿನಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆಗೂ ಅಡ್ಡಿಯಾಯಿತು ಎಂದು ಶೋಭಾ ಕರಂದ್ಲಾಜೆ ವಿಪಕ್ಷಗಳನ್ನು ಆರೋಪಿಸಿದ್ದಾರೆ.
ಹಾಸನ: ನಾವು ರಾಜ್ಯದಲ್ಲಿ 25 ಸಂಸದರಿದ್ದು ನಮ್ಮ ಸರ್ಕಾರ ಬಹುಮತದಿಂದ ನಡೆಯುತ್ತಿದೆ. ಭ್ರಷ್ಟಾಚಾರ ರಹಿತವಾಗಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದ್ದಾರೆ. ವಿಪರೀತ ಅವಮಾನ ಅರೋಪದ ನಡುವೆ ನಮ್ಮ ಪ್ರಧಾನಿ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಪ್ರಧಾನಿ ವೈಯಕ್ತಿಕ ಆಲೋಚನೆಯೂ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ದಿನದ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಕೇವಲ ಒಂದು ಸೂಟ್ ಕೇಸ್ ಬಟ್ಟೆಯೊಂದೇ ಅವರ ಆಸ್ತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು (ಆಗಸ್ಟ್ 17) ಹಾಸನದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಹೊರ ದೇಶಗಳಿಗೆ ಮೋದಿ ಹೋದರೆ ಎದ್ದು ನಿಂತು ನಮಸ್ಕಾರ ಮಾಡುತ್ತಾರೆ. ಮನಮೋಹನ್ ಸಿಂಗ್ಗೆ ಹೊರ ದೇಶದಲ್ಲಿ ಬೆಲೆಯೇ ಇಲ್ಲದಂತಾಗಿತ್ತು. ಮನಮೋಹನ್ ಸಿಂಗ್ ಕಾಂಗ್ರೆಸ್ ಕೈಗೊಂಬೆಯಾಗಿದ್ದರು. ಈಗ ನಮ್ಮ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬೆಲೆ ತಂದುಕೊಟ್ಟಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜನರಿಗೆ ಅನ್ನಿಸಬಹುದು ಬಿಜೆಪಿಯವರು ಚುನಾವಣೆ ಸಂದರ್ಭ ಯಾತ್ರೆ ಮಾಡುತ್ತಾರೆಂದು. ಆದರೆ, ಈಗ ಯಾವುದೇ ಚುನಾವಣೆ ಸಂದರ್ಭವಲ್ಲ. ಈ ಯಾತ್ರೆಯು ಯಾವುದೇ ರಾಜಕೀಯ ಪ್ರೇರಿತವಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕೇಂದ್ರದಲ್ಲಿ ನೂತನವಾಗಿ ಸಚಿವರಾದವರನ್ನ ಪರಿಚಯ ಮಾಡಿಸುವ ಪದ್ದತಿ ಇದೆ. ಆದರೆ ಸಂಸತ್ತಿನಲ್ಲಿ ನೂತನ ಸಚಿವರನ್ನ ಪರಿಚಯಿಸಲು ಕಾಂಗ್ರೆಸ್ ಬಿಡಲಿಲ್ಲ. ಇದು ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕಿ. ಪ್ರಧಾನಿ ಮೋದಿಯವರನ್ನೂ ಸಂಸತ್ತಿನಲ್ಲಿ ಮಾತನಾಡಲು ಬಿಡಲಿಲ್ಲ. ಆ ಸಂದರ್ಭ ನಮ್ಮ ಪಕ್ಷ ಈ ಯಾತ್ರೆ ಬಗ್ಗೆ ತೀರ್ಮಾನಿಸಿತು. ನಮಗೆ ಸಂಸದರ ಮುಂದೆ ಪರಿಚಯ ಆಗದಿದ್ದರೆ ಏನು. ದೇಶದ 135 ಕೋಟಿ ಜನರ ಮುಂದೆ ಪರಿಚಯ ಮಾಡಿಸಲು ತೀರ್ಮಾನಿಸಲಾಯಿತು ಎಂದು ಅವರು ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ.
ನನಗೂ ಪೆಗಾಸಿಸ್ಗೂ ಯಾವುದೇ ಸಂಬಂಧವಿಲ್ಲ. ಆದರೆ, ಆ ವಿಚಾರವನ್ನಿಟ್ಟುಕೊಂಡು ಸಂಸತ್ತಿನಲ್ಲಿ ಗದ್ದಲ ಎಬ್ಬಿಸಲಾಯಿತು. ಸಂಸತ್ತಿನಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆಗೂ ಅಡ್ಡಿಯಾಯಿತು ಎಂದು ಶೋಭಾ ಕರಂದ್ಲಾಜೆ ವಿಪಕ್ಷಗಳನ್ನು ಆರೋಪಿಸಿದ್ದಾರೆ.
ಗಡಿ ಸಮಸ್ಯೆಗಳಂತ ಮುಖ್ಯ ಸಮಸ್ಯೆಗಳು ಈಗ ನಿವಾರಣೆಯಾಗುತ್ತಿವೆ. ನಾವು ಕೃಷಿ ಉತ್ಪನ್ನಗಳ ರಫ್ತಿನಲ್ಲಿ 9 ನೇ ಸ್ಥಾನಕ್ಕೆ ಬಂದಿದ್ದೇವೆ. ಇದರ ಹಿಂದೆ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ರಾಷ್ಟ್ರದ ಜಿಡಿಪಿಯು ಕೇವಲ ಆರೇಳು ವರ್ಷದಲ್ಲಿ 20 ಕ್ಕೆ ತಲುಪಿದೆ. ರೈತರು ನಷ್ಟ ಅನುಭವಿಸಿದಾಗ ಅಧಿಕಾರಿಗಳಿಗೆ ದುಂಬಾಲು ಬೀಳಬೇಕಿತ್ತು. ಆದರೆ ಈಗ ಒಬ್ಬ ರೈತ ತನ್ನ ಹೊಲದಿಂದ ಒಂದು ಫೋಟೋ ಅಪ್ಲೋಡ್ ಮಾಡಿದರೆ ನೆರವು ಸಿಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ 6 ಮತ್ತು ರಾಜ್ಯ 4 ಸಾವಿರ ರೂಪಾಯಿ ರೈತರಿಗೆ ನೀಡುತ್ತಿದೆ. 1.57 ಲಕ್ಷ ಕೋಟಿ ಹಣವನ್ನ ಇದುವರೆಗೆ ರೈತರಿಗೆ ಈ ಯೋಜನೆಯಡಿ ನೀಡಿದ್ದೇವೆ ಎಂದು ಶೋಭಾ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕತೆಯನ್ನು ಎದುರಿಸುವ ಅಗತ್ಯವಿದೆ ಅಫ್ಘಾನಿಸ್ತಾನಲ್ಲಿರೋ ಭಾರತೀಯರ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ಗಮನ ಕೊಡುತ್ತೆ. ಬಹಳ ಹಿಂದೆಯೇ ಕೇಂದ್ರ ಸರ್ಕಾರ ಯಾರ್ಯಾರು ಅಫ್ಘಾನಿಸ್ತಾನದಲ್ಲಿದ್ದಾರೋ ಅವರು ವಾಪಸ್ಸು ಬರಬೇಕು ಅಂತಾ ಹೇಳಿತ್ತು. ಅಲ್ಲಿ ತಾಲಿಬಾನಿಗಳ ಅಟ್ಟಹಾಸ ಜಾಸ್ತಿ ಆಗ್ತಿದೆ, ಅದಕ್ಕಾಗಿ ವಾಪಸ್ಸು ಕರೆಸಬೇಕು ಅಂತಾ ಹೇಳಿತ್ತು. ಇನ್ನೂ ಅಫ್ಘಾನಿಸ್ತಾನದಲ್ಲಿ ಭಾರತೀಯರು ಉಳಿದುಕೊಂಡಿದ್ದರೆ ಅವರನ್ನು ವಾಪಸ್ಸು ಕರೆಸಲು ಕೇಂದ್ರ ಪ್ರಯತ್ನಿಸುತ್ತದೆ. ತಾಲಿಬಾನ್ ಕೃತ್ಯ ಇಡೀ ಪ್ರಪಂಚಕ್ಕೆ ಒಳ್ಳೆಯ ವಿಚಾರ ಅಲ್ಲ. ಇದು ಇಡೀ ಪ್ರಪಂಚಕ್ಕೆ ಮಾರಕ. ಇಡೀ ಪ್ರಪಂಚ ಒಟ್ಟಾಗಿ, ವಿಶ್ವಸಂಸ್ಥೆಯೂ ಸೇರಿ ಭಯೋತ್ಪಾದಕತೆಯನ್ನು ಎದುರಿಸುವ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿಯಲ್ಲಿ ತಾಲಿಬಾನ್ಗಳಿದ್ದಾರೆ ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆ ಹಿನ್ನೆಲೆ ಹಾಸನದಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಎಲುಬಿಲ್ಲದೇ ನಾಲಗೆಗೆ ಏನೂ ಹೇಳೋಕೆ ಬರೋದಿಲ್ಲ. ಇದು ಅವರ ಮಾನಸಿಕತೆ ಹಾಗೂ ಕಾಂಗ್ರೆಸ್ ಮಾನಸಿಕತೆ. ಕಾಂಗ್ರೆಸ್ ಮಾನಸಿಕತೆ ಏನು ಎನ್ನುವುದನ್ನು ಹರಿಪ್ರಸಾದ್ ಬಾಯಲ್ಲಿ ಹೇಳಿದ್ದಾರೆ. ಅವರ ಮುಖಂಡರ ಹೃದಯದಲ್ಲಿ ಇರುವುದನ್ನು ಹರಿಪ್ರಸಾದ್ ಬಾಯಲ್ಲಿ ಹೇಳಿದ್ದಾರೆ ಎಂದು ಶೋಭಾ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ‘542 ಸದಸ್ಯರ ಮುಂದೆ ಸಚಿವರ ಪರಿಚಯ ಮಾಡಲು ಕಾಂಗ್ರೆಸ್ ಬಿಡಲಿಲ್ಲ; ದೇಶದ 135 ಕೋಟಿ ಜನರ ಮುಂದೆ ನಾವು ಹೋಗುತ್ತೇವೆ’
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ: ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
(Shobha Karandlaje comments on PM Narendra Modi BJP Janashirvad Yatra Pegasus Afghanistan Congress Party)