
ಹಾಸನ, ಸೆ.12: ಕರ್ತವ್ಯದಲ್ಲಿದ್ದಾಗ ಅನಾರೋಗ್ಯದಿಂದ ಮೃತಪಟ್ಟ ಯೋಧನ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತ ಸೂಕ್ತ ಗೌರವ ಸಲ್ಲಿಸಿಲ್ಲ ಎಂದು ಆರೋಪಿಸಿ, ಯೋಧನ ಪಾರ್ಥಿವ ಶರೀರವನ್ನು ಹಾಸನ ಜಿಲ್ಲಾಧಿಕಾರಿ (DC) ಕಚೇರಿಯ ಮುಂಭಾಗ ತಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಭಾರಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ ಹಂಜೀಹಳ್ಳಿ ಗ್ರಾಮದ ಯೋಧ ಮಧು ಹೆಚ್. ಅವರು ಅನಾರೋಗ್ಯದ ಕಾರಣದಿಂದ ಸೆಪ್ಟೆಂಬರ್ 10ರ ಗುರುವಾರ ಕರ್ತವ್ಯ ನಿರತರಾಗಿದ್ದಾಗಲೇ ಮೃತಪಟ್ಟಿದ್ದರು. ಶನಿವಾರ (ಸೆ.12) ಅವರ ಪಾರ್ಥಿವ ಶರೀರ ಹಾಸನಕ್ಕೆ ಆಗಮಿಸಿತ್ತು.
ಪಾರ್ಥಿವ ಶರೀರ ಹಾಸನಕ್ಕೆ ತಲುಪುತ್ತಿದ್ದಂತೆಯೇ, ಯೋಧನ ಕುಟುಂಬಸ್ಥರು ಹಾಗೂ ನೂರಾರು ಸಾರ್ವಜನಿಕರು ಆಂಬ್ಯುಲೆನ್ಸ್ ಅನ್ನು ನೇರವಾಗಿ ಡಿಸಿ ಕಚೇರಿ ಮುಂಭಾಗಕ್ಕೆ ತಂದಿದ್ದರು. ಆದರೆ, ಈ ವೇಳೆ ಶವಕ್ಕೆ ಅಂತಿಮ ನಮನ ಸಲ್ಲಿಸಲು ಜಿಲ್ಲಾಡಳಿತದ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ಅಕ್ರೋಶಗೊಂಡರು.
ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಯೋಧನ ಪಾರ್ಥಿವ ಶರೀರ ಇದ್ದ ವಾಹನವನ್ನೇ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬಿಎಂ ರಸ್ತೆ ತಡೆದು ದಿಢೀರ್ ಧರಣಿ ನಡೆಸಿದರು. ಸ್ಥಳಕ್ಕೆ ತಕ್ಷಣವೇ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದ ಕಾರಣ ಕೆಲ ಕಾಲ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಮೃತ ಯೋಧ ಮಧು ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಿ ಗೊಂದಲದ ಕುರಿತು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ; ಬಯಲು ಸೀಮೆಯ ಜನರ ದಶಕಗಳ ಕನಸು ನನಸು: ಅಕ್ಟೋಬರ್ ಅಂತ್ಯಕ್ಕೆ ‘ಎತ್ತಿನಹೊಳೆ’ ಟ್ರಯಲ್ ರನ್‌ಗೆ ಮುಹೂರ್ತ
“ಯೋಧನ ಪಾರ್ಥಿವ ಶರೀರವು ನೇರವಾಗಿ ಅವರ ಸ್ವಗ್ರಾಮವಿರುವ ಆಲೂರು ತಾಲೂಕಿಗೆ ತೆರಳಲಿದೆ ಎಂಬ ಮಾಹಿತಿ ನಮಗಿತ್ತು. ಹೀಗಾಗಿ ಆಲೂರಿನಲ್ಲಿಯೇ ಎಲ್ಲಾ ರೀತಿಯ ಸರ್ಕಾರಿ ಗೌರವ ಸಲ್ಲಿಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಪಾರ್ಥಿವ ಶರೀರವನ್ನು ನೇರವಾಗಿ ಡಿಸಿ ಕಚೇರಿಗೆ ತರಲಾಗಿದ್ದರಿಂದ ಈ ರೀತಿಯ ಗೊಂದಲ ಉಂಟಾಗಿದೆ,” ಎಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆದ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಆಲೂರು ತಾಲೂಕಿನ ಹಂಜೀಹಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ