ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ; ಜೆಡಿಎಸ್​ನಲ್ಲಿ ದೇವೇಗೌಡರ ಕುಟುಂಬದ್ದೇ ದರ್ಬಾರ್

ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ; ಜೆಡಿಎಸ್​ನಲ್ಲಿ ದೇವೇಗೌಡರ ಕುಟುಂಬದ್ದೇ ದರ್ಬಾರ್
ನಾಮಪತ್ರ ಸಲ್ಲಿಸಿದ ಡಾ. ಸೂರಜ್ ರೇವಣ್ಣ

ಸೂರಜ್ ರೇವಣ್ಣ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಹೆಚ್​.ಡಿ. ದೇವೇಗೌಡರ ಮನೆಯ 8 ಜನರು ರಾಜಕಾರಣದಲ್ಲಿ ತೊಡಗಿಸಿಕೊಂಡಂತಾಗಿದೆ. ಜೆಡಿಎಸ್​ ಪಕ್ಷದ ಎಲ್ಲ ವಲಯಗಳಲ್ಲೂ ದೇವೇಗೌಡರ ಕುಟುಂಬದವರು ತಳವೂರಿದ್ದಾರೆ. ಈ ಕುಟುಂಬ ರಾಜಕಾರಣದ ವಿಷಯಕ್ಕಾಗಿಯೇ ಜೆಡಿಎಸ್​ ವಿರುದ್ಧ ಕಾಂಗ್ರೆಸ್, ಬಿಜೆಪಿ ಟೀಕಿಸುತ್ತಲೇ ಇರುತ್ತವೆ.

Sushma Chakre

|

Nov 19, 2021 | 2:46 PM

ಹಾಸನ: ಹಾಸನ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಹೆಚ್​.ಡಿ. ರೇವಣ್ಣನವರ (HD Revanna) ಮಗ ಡಾ. ಸೂರಜ್ ರೇವಣ್ಣ (Suraj Revanna) ಇಂದು ನಾಮಪತ್ರ ಸಲ್ಲಿಸಿದ್ದಾರೆ. ಹಾಸನದ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವ ಮೂಲಕ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ. ದೇವೇಗೌಡರ (HD Deve Gowda) ಮತ್ತೋರ್ವ ಸದಸ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಂತಾಗಿದೆ. ತಂದೆ ಹೆಚ್​.ಡಿ ರೇವಣ್ಣ ತಾಯಿ ಭವಾನಿ ರೇವಣ್ಣ, ಸೋದರ ಪ್ರಜ್ವಲ್ ರೇವಣ್ಣನ (Prajwal Revanna) ಜೊತೆ ತೆರಳಿ ಇಂದು ಹಾಸನ ಜಿಲ್ಲಾಧಿಕಾರಿಗೆ ಸೂರಜ್ ನಾಮಪತ್ರ ಸಲ್ಲಿಸಿದ್ದಾರೆ.

ತಂದೆ ಜೊತೆಗೆ ಒಂದು, ತಾಯಿ ಜೊತೆಗೆ ಇನ್ನೊಂದು ಒಟ್ಟು ಎರಡು ಸೆಟ್ ನಾಮಪತ್ರ ಸಲ್ಲಿಕೆ ಮಾಡಿರುವ ಸೂರಜ್ ರೇವಣ್ಣ ಅವರಿಗೆ ಸೂಚಕರಾಗಿ ಶಾಸಕ ಶಿವಲಿಂಗೇ ಗೌಡ, ಬಾಲಕೃಷ್ಣ, ಲಿಂಗೇಶ್, ಎ.ಟಿ. ರಾಮಸ್ವಾಮಿ ಎಚ್.ಡಿ..ರೇವಣ್ಣ, ಭವಾನಿ ರೇವಣ್ಣ ಸಹಿ ಹಾಕಿದ್ದಾರೆ. ನಾಮಪತ್ರ ಸ್ವೀಕರಿಸಿದ ಚುನಾವಣಾ ಅಧಿಕಾರಿ ಹಾಗೂ ಹಾಸನ ಡಿಸಿ ಆರ್​. ಗಿರೀಶ್ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಇದೇ ಮೊದಲ ಬಾರಿಗೆ ಸೂರಜ್ ರೇವಣ್ಣ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಮೊದಲು ವಿಧಾನ ಪರಿಷತ್ ಚುನಾವಣೆಗೆ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಭವಾನಿ ಬದಲು ಅವರ ಮಗ ಸೂರಜ್ ರೇವಣ್ಣನವರಿಗೆ ಟಿಕೆಟ್ ನೀಡಲಾಗಿತ್ತು.

ಈ ಮೂಲಕ ಹೆಚ್​.ಡಿ. ದೇವೇಗೌಡರ ಮನೆಯ 8 ಜನರು ರಾಜಕಾರಣದಲ್ಲಿ ತೊಡಗಿಸಿಕೊಂಡಂತಾಗಿದೆ. ಕುಟುಂಬ ರಾಜಕಾರಣದ ಬಗ್ಗೆ ದೇವೇಗೌಡರ ವಿರುದ್ಧ ಆಗಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಟೀಕಾಪ್ರಹಾರ ನಡೆಸುತ್ತಲೇ ಇರುತ್ತವೆ. ಆದರೆ, ಜೆಡಿಎಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆಯೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ ಎಂದು ದೇವೇಗೌಡರು ಪ್ರತಿ ಬಾರಿಯೂ ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ.

ವಿಧಾನ ಪರಿಷತ್ ಚುನಾವಣೆ ವಿಷಯದಲ್ಲಿ ಕೆಲವು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡರು, ನಮ್ಮ ಕುಟುಂಬದಿಂದ ಎಂಎಲ್​ಸಿ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ನಮ್ಮ ಕುಟುಂಬದಿಂದ ಇದುವರೆಗೂ ಯಾರೂ ಎಂಎಲ್​ಸಿ ಆಗಿಲ್ಲ. ಗ್ರಾಮ ಮಟ್ಟದಿಂದ ಹಿಡಿದು ಎಲ್ಲ ನಾಯಕರ ಸಲಹೆಗಳನ್ನು ಪಡೆದು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುವುದು. ನಮ್ಮ ಪಕ್ಷ ನಮ್ಮ ಮನೆತನಕ್ಕೆ ಸೇರಿದ್ದಲ್ಲ. ಇಲ್ಲಿ ಎಲ್ಲರ ಸಲಹೆಯೂ ಮುಖ್ಯ ಎಂದಿದ್ದರು.

ಇದರ ಬೆನ್ನಲ್ಲೇ ಭವಾನಿ ರೇವಣ್ಣ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ನಿನ್ನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಭವಾನಿ ರೇವಣ್ಣ, ನನಗೆ ಎಂಎಲ್​ಸಿ ಟಿಕೆಟ್ ನೀಡುವಂತೆ ಕಾರ್ಯಕರ್ತರಿಂದ ಒತ್ತಾಯಗಳು ಬಂದಿದ್ದವು. ಆದರೆ, ವರಿಷ್ಠರು ನನ್ನ ಬದಲಾಗಿ ನನ್ನ ಮಗನಿಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ನೀಡಿದ್ದಾರೆ. ಇದರಿಂದ ನನಗೆ ಬಹಳ ಖುಷಿಯಾಗಿದೆ ಎಂದಿದ್ದರು. ಈ ಮೂಲಕ ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ತೇಪೆ ಹಚ್ಚಿದ್ದರು.

ಯಾರು ಈ ಸೂರಜ್ ರೇವಣ್ಣ?: ಮಾಜಿ ಪ್ರಧಾನಮಂತ್ರಿ ಹೆಚ್​ಡಿ ದೇವೇಗೌಡರ ಮೊಮ್ಮಗ ಹಾಗೂ ಹೆಚ್​ಡಿ ರೇವಣ್ಣ- ಭವಾನಿ ದಂಪತಿಯ ಮಗನಾಗಿರುವ ಸೂರಜ್ ರೇವಣ್ಣ 2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಇದುವರೆಗೂ ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸೂರಜ್ ರೇವಣ್ಣ ಇದೀಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಜೆಡಿಎಸ್ ಪಕ್ಷದಲ್ಲಿ ದೊಡ್ಡ ಗೌಡರ ಕುಟುಂಬಸ್ಥರದ್ದೇ ದರ್ಬಾರ್: ಹೆಚ್​ಡಿ ದೇವೇಗೌಡರ ಮಾಜಿ ಪ್ರಧಾನಿಯಾಗಿದ್ದವರು. ಇದೀಗ ರಾಜ್ಯಸಭಾ ಸದಸ್ಯರೂ ಹೌದು. ದೇವೇಗೌಡರ 4 ಗಂಡುಮಕ್ಕಳ ಪೈಕಿ ಇಬ್ಬರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಸೊಸೆ, ಮೊಮ್ಮಕ್ಕಳು ಕೂಡ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ದೇವೇಗೌಡರ ಮಗ ಹೆಚ್​ಡಿ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ದೇವೇಗೌಡರ ಇನ್ನೋರ್ವ ಮಗ ಹೆಚ್​ಡಿ ರೇವಣ್ಣ ಹೊಳೆನರಸೀಪುರದ ಶಾಸಕ ಹೆಚ್​ಡಿ ರೇವಣ್ಣ ಮಾಜಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದವರು.

ಹೆಚ್​ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಸ್ತುತ ರಾಮನಗರದ ಜೆಡಿಎಸ್​ ಶಾಸಕಿಯಾಗಿದ್ದಾರೆ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಎದುರು ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಹೀಗಾಗಿ, ಸಾಂವಿಧಾನಿಕವಾಗಿ ಅವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೆಚ್​ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಇನ್ನೂ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಆದರೆ, ಅವರು ಹೊಳೆನರಸೀಪುರದ ಹಳೇಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ಅವರ ಮಗ ಪ್ರಜ್ವಲ್ ರೇವಣ್ಣ 2019ರಲ್ಲಿ ಹಾಸನ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು. ಅವರೀಗ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್​ಡಿ ರೇವಣ್ಣ ಅವರ ಇನ್ನೋರ್ವ ಮಗ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯರಾಗಿದ್ದು, ಇದೀಗ ವಿಧಾನ ಪರಿಷತ್ ಚುನಾವಣೆ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ದೇವೇಗೌಡರ ಕುಟುಂಬದ 8 ಜನರು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಸೂರಜ್ ರೇವಣ್ಣ ಜೆಡಿಎಸ್​ನ ಎಂಎಲ್​ಸಿ ಅಭ್ಯರ್ಥಿ: ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶ

HR Suraj Revanna: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯ ಅಖಾಡಕ್ಕೆ ಎಂಟ್ರಿ ಅಂತಿಮ?

Follow us on

Related Stories

Most Read Stories

Click on your DTH Provider to Add TV9 Kannada