ಹಾಸನದಲ್ಲಿ ಸೂರಜ್ ರೇವಣ್ಣ ಜೆಡಿಎಸ್​ನ ಎಂಎಲ್​ಸಿ ಅಭ್ಯರ್ಥಿ: ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 18, 2021 | 5:30 PM

ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ರೇವಣ್ಣ ಎಂಎಲ್​ಸಿ ಚುನಾವಣೆ ಅಭ್ಯರ್ಥಿಯಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಲಿದ್ದಾರೆ.

ಹಾಸನದಲ್ಲಿ ಸೂರಜ್ ರೇವಣ್ಣ ಜೆಡಿಎಸ್​ನ ಎಂಎಲ್​ಸಿ ಅಭ್ಯರ್ಥಿ: ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶ
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ

ಹಾಸನ: ಜಾತ್ಯತೀತ ಜನತಾದಳ (ಜೆಡಿಎಸ್​) ಪಕ್ಷವು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಡಾ.ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ. ಹಾಸನದಲ್ಲಿ ಶುಕ್ರವಾರ (ನ.19) ಮಧ್ಯಾಹ್ನ 12.15ಕ್ಕೆ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆ ಶಾಸಕರ ಸಭೆಯಲ್ಲಿ ಎಚ್​.ಡಿ.ರೇವಣ್ಣ ಅವರ ಪುತ್ರ ಸೂರಜ್ ಅವರಿಗೆ ಟಿಕೆಟ್ ನೀಡಲು ಒಮ್ಮತದ ನಿರ್ಣಯ ಅಂಗೀಕರಿಸಲಾಗಿತ್ತು. ವೃತ್ತಿಯಲ್ಲಿ ವೈದ್ಯರಾಗಿರುವ ಸೂರಜ್ ರೇವಣ್ಣ ಎಂಎಲ್​ಸಿ ಚುನಾವಣೆ ಅಭ್ಯರ್ಥಿಯಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಲಿದ್ದಾರೆ.

ಸೂರಜ್ ರೇವಣ್ಣ ಅವರಿಗೆ ಟಿಕೆಟ್ ಕೊಡುವ ಜೆಡಿಎಸ್ ನಿರ್ಧಾರವು ಪಕ್ಷದ ಬಗ್ಗೆ ಬಹುಕಾಲದಿಂದ ಇರುವ ಆಕ್ಷೇಪವಾದ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬದ ಬಹುತೇಕರು ಈಗಾಗಲೇ ರಾಜಕೀಯದಲ್ಲಿ ಪ್ರಭಾವಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೀಗ ಇದೇ ಕುಟುಂಬದ ಮತ್ತೊಂದು ಕುಡಿಗೆ ಅವಕಾಶ ನೀಡುವ ಬದಲು, ಕಾರ್ಯಕರ್ತರನ್ನು ಮೇಲೆತ್ತಲು ಪ್ರಯತ್ನಿಸಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ದೇವೇಗೌಡರ ಮಗ ಎಚ್‌.ಡಿ.ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು, ಮತ್ತೊಬ್ಬ ಮಗ ರೇವಣ್ಣ ಪ್ರಭಾವಿ ಇಲಾಖೆಗಳನ್ನು ನಿರ್ವಹಿಸಿದ ಸಚಿವರಾಗಿದ್ದವರು. ಪ್ರಸ್ತುತ ಇವರಿಬ್ಬರೂ ಶಾಸಕರಾಗಿ ವಿಧಾನಸಭೆಯಲ್ಲಿದ್ದಾರೆ.

ದೇವೇಗೌಡರ ಒಬ್ಬ ಮೊಮ್ಮಗ ಪ್ರಜ್ವಲ್‌ ರೇವಣ್ಣ ಹಾಸನ ಕ್ಷೇತ್ರದ ಸಂಸದ, ಸೊಸೆ ಅನಿತಾ ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿದ್ದರೆ, ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು. ಗೌಡರ ಮತ್ತೊಬ್ಬ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಲೋಕಸಭೆ ಚುನಾವಣೆ ವೇಳೆ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದ ಗೌಡರು, ತುಮಕೂರಿನಲ್ಲಿ ನಿಂತು ಸೋತ ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಒಂದೇ ಕುಟುಂಬದ ಅಪ್ಪ, ಇಬ್ಬರು ಮಕ್ಕಳು, ಇಬ್ಬರು ಸೊಸೆಯಂದಿರು ಮತ್ತು ಮೂವರು ಮೊಮ್ಮಕ್ಕಳು ಅಂದರೆ ಒಟ್ಟು 8 ಮಂದಿ ಪ್ರಭಾವಿ ಸ್ಥಾನಗಳನ್ನು ಅಲಂಕರಿಸಿರುವುದು ಅಥವಾ ಅಂಥ ಅವಕಾಶಗಳನ್ನು ದಕ್ಕಿಸಿಕೊಳ್ಳಲು ಮುಂದಾಗಿರುವುದು ಜೆಡಿಎಸ್​ ಬಗ್ಗೆ ಈ ಮೊದಲಿನಿಂದಲೇ ಕೇಳಿಬರುತ್ತಿದ್ದ ಕುಟುಂಬ ರಾಜಕಾರಣದ ಚರ್ಚೆಗೆ ಇನ್ನಷ್ಟು ಇಂಬುನಿಡಿದೆ.

ಡಾ.ಸೂರಜ್ ರೇವಣ್ಣ ಸ್ಪರ್ಧೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ. ‘ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಗೆರೆ ಎಳೆಯಲಾಗಿದೆಯೇ?’ ಎಂದು ಕೇಳಿರುವ ಎಚ್.ಡಿ.ಕುಮಾರಸ್ವಾಮಿ ಕುಟುಂಬ ರಾಜಕಾರಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೂರಜ್ ರೇವಣ್ಣ ಅವರಿಗೆ ಟಿಕೆಟ್ ಅಂತಿಮಗೊಳ್ಳುವ ಮೊದಲು ದೇವೇಗೌಡರ ಹಿರಿಹೊಸೆ ಭವಾನಿ ರೇವಣ್ಣ ಹೆಸರು ಪ್ರಬಲವಾಗಿ ಕೇಳಿಬರುತ್ತಿತ್ತು. ಆದರೆ ಪರಿಷತ್‌ ಚುನಾವಣೆ ಮೂಲಕ ಸೂರಜ್ ಅವರಿಗೆ ನೆಲೆ ಕಲ್ಪಿಸಲು ದೇವೇಗೌಡರ ಕುಟುಂಬ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂದು ವಿದ್ಯಮಾನಗಳ ಬಗ್ಗೆ ಮಾಹಿತಿ ಇರುವವರು ಹೇಳುತ್ತಿದ್ದಾರೆ. ಪ್ರಸ್ತುತ ಎಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿರುವ ಸೂರಜ್ ಅವರಿಗೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅಭಿಮಾನಿಗಳ ಸಂಘವೂ ಇದೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ; ಐವರು ಹಾಲಿ ಎಂಎಲ್​ಸಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಾರ ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada