ನೀರವ್ ಮೋದಿ ಜೊತೆಗೆ ನರೇಂದ್ರ ಮೋದಿ ಇರುವ ಚಿತ್ರ ಟ್ವೀಟ್ ಮಾಡಿ ಇದಕ್ಕೇನರ್ಥ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
2018ರಲ್ಲಿ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣ ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ತೆಗೆದುಕೊಳ್ಳುತ್ತಿದೆ. ಇದೇ ವಿಚಾರವಾಗಿ ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ವಾರ್ ನಡೆದಿದೆ. ಬಿಜೆಪಿ ಪ್ರಸ್ತಾಪಿಸಿದ ವಿಷಯಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ನೀರವ್ ಮೋದಿ ಜೊತೆಗೆ ನರೇಂದ್ರ ಮೋದಿ ಇರುವ ಗ್ರೂಪ್ ಫೋಟೊ ಒಂದನ್ನು ಟ್ವೀಟ್ ಮಾಡಿ ಇದಕ್ಕೇನು ಅರ್ಥ ಎಂದು ಪ್ರಶ್ನಿಸಿದ್ದಾರೆ. ಬಿಟ್‌ಕಾಯಿನ್ ಹಗರಣದ ಮುಖ್ಯ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ನನ್ನ ಮಗನೊಂದಿಗೆ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಬಿಜೆಪಿ ಎಳೆದು ತಂದಿದೆ. ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್‌ಕಾಯಿನ್ ಹಗರಣದ ಬಗ್ಗೆ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ನನ್ನ ಮಗ ರಾಕೇಶ್ ನಮ್ಮನ್ನಗಲಿ ಐದು ವರ್ಷಗಳಾಗಿವೆ. ಪುತ್ರಶೋಕ ನಿರಂತರವಾದುದು. ನಮ್ಮ ಜೊತೆಗೆ ಅವನಿಲ್ಲ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ. ಇಂಥ ಸಮಯದಲ್ಲಿ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು ಅತ್ಯಂತ ವೈಯಕ್ತಿಕ ಮತ್ತು ಕ್ಷುಲಕತನದ ರಾಜಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದಾರೆ. ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್‌ಕಾಯಿನ್ ಪಡೆದಿದ್ದ ಎಂಬ ಆರೋಪವೂ ಇದೆ. ಆ ನಾಯಕ ಯಾರೆಂದು ನಳಿನ್ಕುಮಾರ್ ಕಟೀಲ್ ಅವರಿಗೆ ಗೊತ್ತಿರಬಹುದೇನೋ? ನನ್ನ ಬಳಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ. ಈವರೆಗಿನ ಪೊಲೀಸರ ತನಿಖೆಯು ಯಾರೋ ಪ್ರಭಾವಿಗಳನ್ನು ರಕ್ಷಿಸಲು ನಡೆಸಿರುವ ನಾಟಕದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ? ಯಾಕೆ ಸರತಿ ಸಾಲಲ್ಲಿ ನಿಂತು ಹೆಗಲು ಮುಟ್ಟಿ ನೋಡಿಕೊಂಡು ‘ಸರ್ಕಾರ ತಪ್ಪು ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು’ ಎಂದು ಎದೆ ಬಡಿದುಕೊಳ್ಳುತ್ತಿದ್ದಾರೆ? ಬಿಟ್‌ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ. ಪುರಾವೆಗಳಿಲ್ಲದೆ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲಾ ಕಚ್ಚಲಿದೆಯೋ ಗೊತ್ತಿಲ್ಲ ಎಂದು ನಿಗೂಢವಾಗಿ ಸಂದೇಶ ರವಾನಿಸಿದ್ದಾರೆ.
.@BJP4Karnataka has alleged that my son Rakesh was seen with Sri Krishna’s friend Hemant Muddappa.
Then how can we interpret the photo of @narendramodi with Nirav Modi during 2018 World Economic Forum? pic.twitter.com/Gps8q52rxY
— Siddaramaiah (@siddaramaiah) November 18, 2021
ಇದನ್ನೂ ಓದಿ: ಬಿಟ್‌ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಮಾಹಿತಿ ಕೊಟ್ಟರೆ ಅದನ್ನೇ ಆಧರಿಸಿ ತನಿಖೆ: ಯಡಿಯೂರಪ್ಪ ಭರವಸೆ ಇದನ್ನೂ ಓದಿ: ಬಿಟ್‌ಕಾಯಿನ್ ತನಿಖೆ ಸರಿಯಾಗಿ ನಡೆದರೆ ರಾಜ್ಯಕ್ಕೆ 3ನೇ ಸಿಎಂ ಹೇಳಿಕೆಗೆ ಬದ್ಧ: ಪ್ರಿಯಾಂಕ್ ಖರ್ಗೆ ಸವಾಲು