ಬಿಟ್ಕಾಯಿನ್ ತನಿಖೆ ಸರಿಯಾಗಿ ನಡೆದರೆ ರಾಜ್ಯಕ್ಕೆ 3ನೇ ಸಿಎಂ ಹೇಳಿಕೆಗೆ ಬದ್ಧ: ಪ್ರಿಯಾಂಕ್ ಖರ್ಗೆ ಸವಾಲು
ನ್ಯಾಯಾಲಯದ ಅನುಮತಿ ಪಡೆದು 31 ಬಿಟ್ಕಾಯಿನ್ಗಳನ್ನು ಪೊಲೀಸ್ ವಾಲೆಟ್ಗೆ ಹಾಕಿದ್ದೀವಿ ಎಂದು ಹೇಳಿದ್ದರು. ಆದರೆ ಈ ಪ್ರಕರಣದಲ್ಲಿ ಇದ್ದುದು 186 ಬಿಟ್ಕಾಯಿನ್ ಎಂದು ತನಿಖೆಯ ಲೋಪಗಳನ್ನು ಪ್ರಿಯಾಂಕ್ ಖರ್ಗೆ ಎತ್ತಿ ತೋರಿಸಿದರು.
ಬೆಂಗಳೂರು: ಬಿಟ್ಕಾಯಿನ್ ಹಗರಣದ ತನಿಖೆ ಸರಿಯಾದ ನಿಟ್ಟಿನಲ್ಲಿ ನಡೆದರೆ ಕರ್ನಾಟಕಕ್ಕೆ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎನ್ನುವ ಹೇಳಿಕೆಗೆ ನಾನು ಇಂದಿಗೂ ಬದ್ಧ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಗಂಭೀರ ವಿಷಯವೇ ಅಲ್ಲ ಎಂದಾದರೆ ರಾತ್ರಿ 9 ಗಂಟೆಗೆ ನಿಮ್ಮ ಸಚಿವರು ಏಕೆ ಪತ್ರಿಕಾಗೋಷ್ಠಿ ಮಾಡುತ್ತಾರೆ? ಜೀವಂತ ಇಲ್ಲದ ಪ್ರಕರಣ ಎಂದು ಹೇಳುವ ಮುಖ್ಯಮಂತ್ರಿ ಜಾರಿ ನಿರ್ದೇಶನಾಲಯದ ತನಿಖೆಯ ಬಗ್ಗೆ ಏಕೆ ಮಾತನಾಡುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಏಕೆ ವಿಶೇಷ ಸಭೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶ್ರೀಕಿ ಬಂಧನವಾದ ಒಂದು ವರ್ಷದ ನಂತರವೂ ಏಕೆ ಆರೋಪಪಟ್ಟಿ ಹಾಕಲಿಲ್ಲ. ಶ್ರೀಕಿಯನ್ನು ರಕ್ಷಿಸುವ ಮೂಲಕ ಸರ್ಕಾರ ಯಾರ ರಕ್ಷಣೆಗೆ ಪ್ರಯತ್ನಿಸುತ್ತಿದೆ ಎಂದು ಕೇಳಿದರು. ನ್ಯಾಯಾಲಯದ ಅನುಮತಿ ಪಡೆದು 31 ಬಿಟ್ಕಾಯಿನ್ಗಳನ್ನು ಪೊಲೀಸ್ ವಾಲೆಟ್ಗೆ ಹಾಕಿದ್ದೀವಿ ಎಂದು ಹೇಳಿದ್ದರು. ಆದರೆ ಈ ಪ್ರಕರಣದಲ್ಲಿ ಇದ್ದುದು 186 ಬಿಟ್ಕಾಯಿನ್. ನಾವು ಹೇಳೋವರೆಗೂ 186 ಕಾಯಿನ್ ವಿಚಾರ ಮುಚ್ಚಿಟ್ಟಿದ್ದುದು ಏಕೆ ಎಂದು ಪ್ರಶ್ನಿಸಿದ ಅವರು, ಈ ತನಿಖೆಯ ದಿಕ್ಕೂ ಸರಿಯಿಲ್ಲ, ಪ್ರಗತಿಯೂ ಇಲ್ಲ ಎಂದರು.
ವೇಲ್ ಅಲರ್ಟ್ ಬಗ್ಗೆ ಪೊಲೀಸರಿಗೆ ಸರಿಯಾಗಿ ಗೊತ್ತಿಲ್ಲ, ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವೇಲ್ ಅಲರ್ಟ್ ಎನ್ನುವುದು ಕ್ರಿಪ್ಟೊಕರೆನ್ಸಿಯ ಪಾರದರ್ಶಕ ಮಾಹಿತಿದಾರ ಎಂಬ ಮಾಹಿತಿ ಹಾಗೂ ವರದಿಗಳಿವೆ. ಬಿಟ್ಕಾಯಿನ್ ಬ್ಲಾಕ್ ಚೈನ್ ಎಕ್ಸಪ್ಲೋರರ್ ಪ್ರಕಾರ 5000 ಕಾಯಿನ್ಗಳು ಹ್ಯಾಕ್ ಆಗಿವೆ. ಅದೇ ಬಿಟ್ಕಾಯಿನ್ ಬ್ಲಾಕ್ಚೈನ್ 186 ಕಾಯಿನ್ ಇಲ್ಲವೇ ಇಲ್ಲ ಎಂದು ಹೇಳಿದರೆ ಒಪ್ಪಿಕೊಳ್ಳುತ್ತಾರೆ. ಈ ದ್ವಂದ್ವ ನೀತಿ ಏಕೆ ಎಂದು ಪ್ರಶ್ನಿಸಿದರು. ಪೊಲೀಸ್ ಕಮಿಷನರ್ ಅವರು ಇಂಟರ್ಪೋಲ್ಗೆ ಬರೆದಿರುವ ಪತ್ರದಲ್ಲಿ ಕ್ರೈಮ್ ನಂಬರ್ 03/2020 ಎಂದು ಉಲ್ಲೇಖಿಸಿದ್ದಾರೆ. ಆದರೆ ಆ ಕ್ರೈಮ್ ನಂಬರ್ನ ಎಫ್ಐಆರ್ನಲ್ಲಿ ಅಪರಾಧದ ಮಾಹಿತಿ ಇಲ್ಲ. ಕೇವಲ 23 ಸಾವಿರ ರೂಪಾಯಿ ಮೊತ್ತದ ಅಪರಾಧ ಎಂದು ಪೊಲೀಸರು ಹೇಳುತ್ತಾರೆ. ಕೇವಲ 23 ಸಾವಿರ ಮೊತ್ತದ ಅಪರಾಧಕ್ಕೆ ಇಂಟರ್ಪೋಲ್ಗೆ ದೂರು ಕೊಡ್ತಾರಾ? ಈಗ ಪೊಲೀಸ್ ಇಲಾಖೆ ಹೊಸ ಸ್ಪಷ್ಟನೆ ನೀಡಿದೆ. ಪೊಲೀಸ್ ಇಲಾಖೆಯ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದರು.
ಪೊಲೀಸರು ಮತ್ತೊಂದೆಡೆ 31.5 ಬಿಟ್ಕಾಯಿನ್ ಬಗ್ಗೆ ಪ್ರಸ್ತಾಪಿಸುತ್ತಾರೆ. ಅದನ್ನು ರಕ್ಷಿಸಿಕೊಳ್ಳಲು ಪೊಲೀಸ್ ವ್ಯಾಲೆಟ್ಗೆ ಹಾಕಲು ಅನುಮತಿ ಪಡೆದಿದ್ದಾರೆ. ಎಫ್ಐಆರ್ ನಂಬರ್ 123/2020 ಗಮನಿಸಿದರೆ ತನಿಖಾಧಿಕಾರಿಯು 2018ರಿಂದಲೇ ಬೆಂಗಳೂರಿನ ಇತರರ ಜೊತೆ ಸೇರಿಕೊಂಡು ಐಷಾರಾಮಿ ಹೊಟೆಲ್ನಲ್ಲಿ ಉಳಿದು ಅಕ್ರಮವಾಗಿ ಲಾಭಗಳಿಸಲು ಯತ್ನಿಸಿದ್ದಾರೆ. ಮಾತ್ರವಲ್ಲ ಬಿಟ್ಕಾಯಿನ್ ಅಕ್ರಮವಾಗಿ ಪಡೆಯುವ ಕೆಲಸ ಮಾಡಿದ್ದಾರೆ. ಊನೋ ಕಾಯಿನ್ ಕೂಡ ಹ್ಯಾಕ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಪ್ರಕರಣ ಬೆಳಕಿಗೆ ಬಂದ ನಂತರವೇ ಊನೋ ಕಾಯಿನ್ನಲ್ಲಿ ಪೋಲಿಸ್ ವ್ಯಾಲೆಟ್ ಆರಂಭಿಸಲು ಪ್ರಯತ್ನಿಸಿದ್ದಾರೆ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಅಕ್ರಮಗಳು ನಡೆದಿರುವ ಅನುಮಾನಗಳು ಬರುತ್ತವೆ ಎಂದು ತಿಳಿಸಿದರು.
ಬಿಟ್ಕಾಯಿನ್ ಕಾಪಾಡಬೇಕಾದ್ದ ಪೊಲೀಸರ ಜವಾಬ್ದಾರಿ. ಆದರೆ ಏಕೆ ಅದರ ವಹಿವಾಟು ನಡೆಸಿದರು. ಬಳಿಕ ಖಾತೆಯಲ್ಲಿ ಕಾಯಿನ್ ಇಲ್ಲವೇ ಇಲ್ಲ ಎಂದಿದ್ದು ಏಕೆ. ಬಿಟ್ಕಾಯಿನ್ ಹಗರಣದ ಆರೋಪಿಯು ಟೆಂಡರ್ ಹಗರಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾನೆ. ಟೆಂಡರ್ ಹಗಣರಣದ ಬಗ್ಗೆ ಯಾಕೆ ಇವರು ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾನೂನು ಹೋರಾಟ ಬಿಟ್ಕಾಯಿನ್ ಪ್ರಕರಣದ ಬಗ್ಗೆ ನಾನು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ನಂತರ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜತೆ ನನ್ನ ಹೆಸರನ್ನೂ ಸೇರಿಸಿ ಕೆಲವರು ಮಾತನಾಡುತ್ತಿದ್ದಾರೆ. ನಮ್ಮ ಕುಟುಂಬದ ಆಸ್ತಿ ₹ 50,000 ಕೋಟಿಗೂ ಹೆಚ್ಚಿದೆ ಎಂದೆಲ್ಲಾ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರೆಲ್ಲರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ. ಲಾಯರ್ ನೊಟೀಸ್ ಕಳಿಸುತ್ತೇನೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ ಕಾತ್ಯಾಯಿನಿ ಮಫ್ತಿಯಲ್ಲಿ ಬಂದು ಕುಳಿತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸ್ ಅಧಿಕಾರಿಯನ್ನು ಹೊರಗೆ ಕಳಿಸಿದರು.
ಸರ್ಕಾರದ ದ್ವಂದ್ವ ನೀತಿ: ರಾಮಲಿಂಗಾರೆಡ್ಡಿ ಆರೋಪ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಮಾತನಾಡಿ, ಬಿಟ್ಕಾಯಿನ್ ಹಗರಣದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಈ ಅವ್ಯವಹಾರದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳಿದ್ದಾರೆ ಎಂದು ಹೇಳುತ್ತಿದ್ದಾರೆ. 2018ರಲ್ಲಿ ತನಿಖೆ ಮಾಡಿದ್ರೆ ಎಲ್ಲಾ ಆಚೆ ಬರುತ್ತಿತ್ತು ಎನ್ನುತ್ತಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದಿದ್ದು 2020ರ ನವೆಂಬರ್‌ನಲ್ಲಿ. ಈಗ ತನಿಖೆ ನಡೆಸಬೇಕಲ್ವಾ? ಶ್ರೀಕೃಷ್ಣ ಹುಟ್ಟಿದಾಗಲೇ ತನಿಖೆ ಮಾಡಬೇಕಿತ್ತು ಎನ್ನುವ ಮಾತಿನಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು. 2018ರಲ್ಲಿ ಗಲಾಟೆ ಆಗಿದ್ದು ನಿಜ, ಆಗ ನಲಪಾಡ್‌ನನ್ನ ಬಂಧಿಸಲಾಗಿತ್ತು. ಶ್ರೀಕೃಷ್ಣ ಕೂಡ ಆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಪ್ರಕರಣ ಸಂಬಂಧ ಚಾರ್ಜ್‌ಶೀಟ್ ಸಹ ದಾಖಲಿಸಲಾಗಿತ್ತು. ಅದು ವಿದ್ವತ್ ಮೇಲಿನ ಹಲ್ಲೆಗೆ ಸಂಬಂಧಿಸಿದ ಕೇಸ್ ಆಗಿತ್ತು. ಅಂದು ಬಿಟ್ ಕಾಯಿನ್ ವಿಚಾರ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಟ್ಕಾಯಿನ್ ಹಗರಣವೇ ಆಗಿಲ್ಲ ಎನ್ನುವ ಸರ್ಕಾರ ತನಿಖೆ ಮಾಡಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ದ್ವಂದ್ವನೀತಿ ಅನುಸರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಣ್ಣಪುಟ್ಟ ವಿಚಾರಗಳಿಗೂ ಮಾತನಾಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಯಾಕೆ ಒಮ್ಮೆಯೂ ಮಾತನಾಡಿಲ್ಲ. ಹಗರಣ ಆಗಿಲ್ಲ ಎನ್ನುವ ಬಿಜೆಪಿ ನಾಯಕರು ನಲಪಾಡ್, ಲಮಾಣಿ ಮಗನ ಹೆಸರು ತಳುಕು ಹಾಕ್ತಿರುವುದೇಕೆ ಎಂದು ಕೇಳಿದರು. ಬಿಟ್ಕಾಯಿನ್ ಅವ್ಯವಹಾರವನ್ನು ಸಿಬಿಐ, ಇಡಿ ತನಿಖೆಗೆ ಕೊಟ್ಟಿದ್ದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಅವರು ಸಿಬಿಐಗೆ ಕೊಟ್ಟಿಲ್ಲವೆಂಬುದು ನನಗಿರುವ ಮಾಹಿತಿ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಟ್ಕಾಯಿನ್ ಅಂದ್ರೆ ಕನ್ನಡಿಯೊಳಗಿನ ಗಂಟು: ಗೃಹ ಸಚಿವ ಆರಗ ಜ್ಞಾನೇಂದ್ರ ಇದನ್ನೂ ಓದಿ: ಬಿಟ್ಕಾಯಿನ್ ಪ್ರಕರಣ: ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಕಾಂಗ್ರೆಸ್ ಆರೋಪಕ್ಕೆ ಆರ್ ಅಶೋಕ್ ಸವಾಲ್