AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್​ಕಾಯಿನ್ ಪ್ರಕರಣ: ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಕಾಂಗ್ರೆಸ್​ ಆರೋಪಕ್ಕೆ ಆರ್ ಅಶೋಕ್ ಸವಾಲ್

ಧಾನಿ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ರು. ಈಗ ಬಿಟ್ ಕಾಯಿನ್ ಹಗರಣ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಂದಿನ ಚುನಾವಣೆಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬಿಟ್​ಕಾಯಿನ್ ಪ್ರಕರಣ: ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಕಾಂಗ್ರೆಸ್​ ಆರೋಪಕ್ಕೆ ಆರ್ ಅಶೋಕ್ ಸವಾಲ್
ಆರ್ ಅಶೋಕ್, ಸಿದ್ದರಾಮಯ್ಯ
TV9 Web
| Updated By: ganapathi bhat|

Updated on: Nov 15, 2021 | 2:47 PM

Share

ಬೆಂಗಳೂರು: ಕಾಂಗ್ರೆಸ್‌ನವರು ಮುಚ್ಚಿಟ್ಟಿದ್ದ ಹಗರಣ ಹೊರಗೆಳೆದಿದ್ದೇ ಬಿಜೆಪಿ. ಅಪರಾಧ ಆಗಿದ್ಯಾ ಇಲ್ವಾ ಎಂದು ಹೇಳುವುದು ಕಾಂಗ್ರೆಸ್‌ ಅಲ್ಲ. ಕೋರ್ಟ್‌ ಇದನ್ನು ಹೇಳುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ಇಂದು (ನವೆಂಬರ್ 15) ವಾಗ್ದಾಳಿ ನಡೆಸಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಆರೋಪಿ ಶ್ರೀಕಿಗೆ ಜಾಮೀನು ನೀಡಲಾಗಿದೆ. ಬಿಟ್ ಕಾಯಿನ್‌ ವಿಚಾರದಲ್ಲಿ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ಆರ್. ಅಶೋಕ್ ಹೇಳಿದ್ದಾರೆ.

ಕಾಂಗ್ರೆಸ್‌ನವರು ಸುಳ್ಳಿನ ಸರದಾರರು. ಅವರು ಸುಳ್ಳು ಸುದ್ದು ಸೃಷ್ಟಿಸುವುದರಲ್ಲಿ ನಿಸ್ಸೀಮರು. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ರಫೇಲ್ ವಿಚಾರವನ್ನು ಪ್ರಸ್ತಾಪಿಸಿದ್ರು. ಪ್ರಧಾನಿ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ರು. ಈಗ ಬಿಟ್ ಕಾಯಿನ್ ಹಗರಣ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಮುಂದಿನ ಚುನಾವಣೆಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬಿಟ್ ಕಾಯಿನ್ ವಿಚಾರವಾಗಿ ಸಚಿವರಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ಬಗ್ಗೆ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾವಿಲ್ಲದ ಬುಟ್ಟಿಯನ್ನು ಇಟ್ಟುಕೊಂಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ರಾಜ್ಯದಲ್ಲಿ ಅಷ್ಟೋಇಷ್ಟೊ ಕಾಂಗ್ರೆಸ್ ಪಕ್ಷ ಉಳಿದಿದೆ. ಅದನ್ನೂ ಹಾಳು ಮಾಡುವುದಕ್ಕೆ ಹೊರಟಿದ್ದಾರೆ. ಅದ್ಯಾರೋ ಇಬ್ಬರು ಇದ್ದಾರೆಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಸಿದ್ದರಾಮಯ್ಯ ಮೊದಲು ಆ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯಗೆ ಆರ್. ಅಶೋಕ್ ಸವಾಲ್ ಹಾಕಿದ್ದಾರೆ.

ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ ಬಿಟ್ ಕಾಯಿನ್ ವಿಚಾರದ ಬಗ್ಗೆ ಬೈಡನ್ ಹೇಳಿದ್ದರಂತೆ. ಬೈಡನ್ ಹೇಳುವಾಗ ಸುರ್ಜೇವಾಲ ಎಲ್ಲಿದ್ದರೆಂದು ಪ್ರಶ್ನೆ ಮಾಡಿದ್ದಾರೆ. ಯಾರೇ ಆಗಲಿ ಸುಳ್ಳು ಹೇಳುವುದಕ್ಕೆ ಮಿತಿ ಇರಬೇಕು. ಅವರು ಮೋದಿ ಪಕ್ಕದಲ್ಲಿ ಕುಳಿತುಕೊಂಡಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಇಲ್ಲಸಲ್ಲದ ಆರೋಪಗಳು ಮಾಡ್ತಿದ್ದಾರೆ. ದಾಖಲೆ ಇದ್ದರೆ ಕೊಡಲಿ. ಕಾಂಗ್ರೆಸ್‌ನವರು 70 ವರ್ಷದ ಆಡಳಿತದ ಭ್ರಮೆಯಲ್ಲಿದ್ದಾರೆ. ಈಗ ಆಡಳಿತದಲ್ಲಿರುವುದು ದೇಶಭಕ್ತ ಪ್ರಧಾನಿ ಮೋದಿ. ಕಾಂಗ್ರೆಸ್‌ನ ಕೋಲ್ಡ್ ವಾರ್ ಈಗ ಬಹಳ ಹಾಟ್ ಆಗಿದೆ. ಜನವರಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ಆಗಬೇಕಿತ್ತು. ನಲಪಾಡ್ ಗ್ಯಾಂಗ್ ಬೋಗಸ್ ವೋಟ್ ಹಾಕಿದೆ ಎಂದಿತ್ತು. ಬಳಿಕ ಅದು ಕಾಂಪ್ರಮೈಸ್ ಹಾಕಿ ಫಿಫ್ಟಿ ಫಿಫ್ಟಿ ಆಗಿತ್ತು. ಜನವರಿಯಲ್ಲಿ ಈಗ ಅಧ್ಯಕ್ಷ ಸ್ಥಾನ ಬದಲಾಗಬೇಕಾಗಿದೆ. ಅದನ್ನು ತಪ್ಪಿಸಲು ಇದನ್ನು ಬಯಲಿಗೆಳೆದಿರುವ ಮಾಹಿತಿ ಲಭ್ಯವಾಗಿದೆ. ನಾನು ಹೇಳುತ್ತಿಲ್ಲ, ರಾಜ್ಯದ ಜನರು ಮಾತಾಡಿಕೊಳ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ 8 ತಿಂಗಳು ಇಲ್ಲೇ ಇದ್ದರೂ ಶ್ರೀಕಿಯನ್ನು ಯಾಕೆ ಮುಟ್ಟಲಿಲ್ಲ? ವಿದ್ವತ್ ಮೇಲೆ ಹಲ್ಲೆ ಕೇಸ್‌ನಲ್ಲಿ 11 ಜನರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. 2018ರ ಫೆಬ್ರವರಿ 18ರಂದು 11 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗ ಮೊಹಮ್ಮದ್ ನಲಪಾಡ್‌ ಬಂಧಿಸಿ ಜೈಲಿಗೆ ಕಳಿಸಿದ್ದರು. ಆಗ ಮೊಹಮ್ಮದ್ ನಲಪಾಡ್‌ 150 ದಿನ ಜೈಲಿನಲ್ಲಿ ಇದ್ದರು. ಆಗ ಕಾಂಗ್ರೆಸ್‌ನವರು ಶ್ರೀಕಿಯನ್ನ ಏಕೆ ಬಂಧಿಸಿರಲಿಲ್ಲ? ಬಂಧಿಸದಂತೆ ನಿಮಗೆ ಯಾರ ಒತ್ತಡ ಇತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಶ್ರೀಕಿ ಕಾಣೆಯಾಗಿದ್ದಾನೆ ಎಂದು ಬರುತ್ತದೆ. ಮೂರು ತಿಂಗಳಾದ್ರೂ ಸಾಮಾನ್ಯ ಆರೋಪಿಯನ್ನು ಬಂಧಿಸಿಲ್ಲ. ಶ್ರೀಕಿಯನ್ನು ಏಕೆ ಬಂಧಿಸಿರಲಿಲ್ಲ. 8 ತಿಂಗಳು ಇಲ್ಲೇ ಇದ್ದರೂ ಅವನನ್ನು ಏನೂ ಮಾಡಲಿಲ್ಲ. ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಏಕೆ ಮುಟ್ಟಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ.

ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಜಾಮೀನು ಪಡೆಯುತ್ತಾನೆ. ಆಗ ನೀವೇಕೆ ಸಮರ್ಥವಾಗಿ ವಾದ ಮಂಡಿಸಿಲ್ಲ. ಇದನ್ನು ನಾನು ಕೇಳುತ್ತಿಲ್ಲ ರಾಜ್ಯದ ಜನರೇ ಕೇಳುತ್ತಿದ್ದಾರೆ. ಶ್ರೀಕಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ವಿಚಾರಣೆಗೆ ಕರೆದಾಗ ಹೋಗಬೇಕೆಂದು ಶ್ರೀಕಿಗೆ ಷರತ್ತು ಇತ್ತು. ನಂತರ ನೀವ್ಯಾಕೆ ಶ್ರೀಕಿಯನ್ನು ಕರೆದು ವಿಚಾರಣೆ ಮಾಡಿಲ್ಲ. ಶ್ರೀಕಿಯನ್ನು ರಾಜಾರೋಷವಾಗಿ ಬಿಟ್ಟಿದ್ದು ಏಕೆಂದು ಪ್ರಶ್ನೆ ಕೇಳಿದ್ದಾರೆ. 2018ರಿಂದಲೇ ಹ್ಯಾಕ್ ಮಾಡುತ್ತಿರುವುದಾಗಿ ಶ್ರೀಕಿ ಹೇಳಿದ್ದಾನೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಶ್ರೀಕಿ ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ಪರೀಕ್ಷೆ ಬಗ್ಗೆ ಅಶೋಕ್ ಮಾಹಿತಿ ಕ್ರಿಪ್ಟೋ ಕರೆನ್ಸಿ ಸಂಬಂಧ ಶ್ರೀಕಿಯನ್ನು ಬಂಧಿಸಲಾಗಿದೆ. ನಮ್ಮ ಸರ್ಕಾರದಲ್ಲಿ ಶ್ರೀಕೃಷ್ಣನನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಸೈಬರ್ ತಜ್ಞರ ಸಹಕಾರ ಪಡೆದಿದ್ದಾರೆ. ಬಿಟ್ ಕಾಯಿನ್ ಸೀಜ್ ಮಾಡಲು ಅನುಮತಿ ಪಡೆದಿದ್ದಾರೆ. ಪೊಲೀಸರು ಸರ್ಕಾರದ ಅನುಮತಿಯನ್ನು ಪಡೆದಿದ್ದಾರೆ. ಎಲ್ಲ ಪ್ರಕ್ರಿಯೆ ದಾಖಲೆ ಸಮೇತ ಕೋರ್ಟ್‌ಗೆ ಸಲ್ಲಿಸಿದ್ದೇವೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

4,500 ಕೋಟಿ ರೂ. ವರ್ಗಾವಣೆ ಬಗ್ಗೆ ಕಾಂಗ್ರೆಸ್‌ ನಾಯಕ ಸುರ್ಜೇವಾಲ ಆರೋಪ ಮಾಡಿದ್ದಾರೆ. ಯಾವ ದೇಶದಲ್ಲಿ ಬಿಟ್ ಕಾಯಿನ್ ಕಳ್ಳತನ ಮಾಡಿದ್ದಾರೆ. ಬಿಟ್ ಕಾಯಿನ್ ಕಳ್ಳತನವಾಗಿದ್ದರೆ ದೂರು ಕೊಡಬೇಕಲ್ವಾ. ಇಸ್ರೇಲ್‌ನಲ್ಲಿ ಇಬ್ಬರು ಹ್ಯಾಕರ್‌ಗಳನ್ನು ಬಂಧಿಸಲಾಗಿದೆ. ಅವರು ಕೂಡ ಈ ಬಗ್ಗೆ ಎಲ್ಲೂ ಪ್ರಸ್ತಾಪವನ್ನೇ ಮಾಡಿಲ್ಲ. ಯಾರು ಕಾಂಗ್ರೆಸ್‌ನವರಿಗೆ ದೂರು ನೀಡಿದ್ದಾರೆಂದು ಪ್ರಶ್ನೆ. ಸುರ್ಜೇವಾಲ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.

ಶ್ರೀಕಿಗೆ ಪೊಲೀಸರೇ ಡ್ರಗ್ಸ್ ಕೊಟ್ಟಿದ್ದಾರೆಂದು ಆರೋಪ ಕೇಳಿತ್ತು. ಶ್ರೀಕಿ ಕೋರ್ಟ್‌ನಲ್ಲಿ ಇದನ್ನು ಒಪ್ಪಿಕೊಂಡಿರಲಿಲ್ಲ. ಅವರ ವಕೀಲರು ಹೇಳಿದಾಗ ಶ್ರೀಕಿ ಒಪ್ಪಿಕೊಂಡಿದ್ದಾನೆ. ಕೋರ್ಟ್ ಪರೀಕ್ಷೆ ಮಾಡಿಸುವಂತೆ ಆದೇಶ ಮಾಡಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿತ್ತು. ಶ್ರೀಕಿ ಡ್ರಗ್ಸ್ ಪಡೆದಿಲ್ಲವೆಂದು ವರದಿ ಕೂಡ ಬಂದಿದೆ. ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಟೆಸ್ಟ್ ಮಾಡಿಸಲು ವಿಕ್ಟೋರಿಯಾಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಟೆಸ್ಟ್ ಮಾಡಲು ವ್ಯವಸ್ಥೆ ಇಲ್ಲ ಎಂದು ಹೇಳಿದ್ರು. ಹೀಗಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಗಿದೆ. ಶ್ರೀಕಿಗೆ ಟಾರ್ಚರ್ ಮಾಡಲಾಗಿದೆ ಎಂದು ಅರ್ಜಿ ಹಾಕಿದ್ದಾರೆ. ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಕಡೆಯವರು ಅರ್ಜಿ ಹಾಕಿದ್ದರು. ಕೋರ್ಟ್ ಈ ಆದೇಶವನ್ನು ರದ್ದು ಮಾಡಿ ದಂಡ ವಿಧಿಸಿತ್ತು ಎಂದು ತಿಳಿಸಿದ್ದಾರೆ.

ದಾಖಲೆ ಬಿಡುಗಡೆ ಮಾಡಿ. ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ 2017-18ರಲ್ಲೇ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹ್ಯಾಕ್ ಮಾಡಿದ್ದ. ಆಗಲೇ ಶ್ರೀಕೃಷ್ಣನನ್ನು ಕಾಂಗ್ರೆಸ್‌ನವರು ಬಂಧಿಸಬೇಕಿತ್ತು. ಆಗ ಅವನನ್ನು ಬಂಧಿಸಿದ್ದರೆ ಇಷ್ಟೆಲ್ಲಾ ಆಗುತ್ತಲೇ ಇರಲಿಲ್ಲ. ಈಗ ಸುಮ್ಮನೆ ಹಾವು ಬಿಡ್ತೀನಿ ಎಂದು ಹೇಳಬೇಡಿ. ಇಲ್ಲಸಲ್ಲದ ಆಪಾದನೆಗಳನ್ನು ಮಾಡಬೇಡಿ. ದಾಖಲೆ ಬಿಡುಗಡೆ ಮಾಡಿ. ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬಿಟ್ ಕಾಯಿನ್ ವಿಚಾರದಲ್ಲಿ ಎಲ್ಲ ದಾಖಲೆ ಸಲ್ಲಿಸಿದ್ದೇವೆ. ನಾವು ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ

ಇದನ್ನೂ ಓದಿ: ಬಿಟ್​ಕಾಯಿನ್​ ಪ್ರಕರಣ 2018ರಿಂದಲೂ ಇದೆ ಅಂತಾರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಸುರ್ಜೇವಾಲ ಕೇಳಲಿ; ಸಿಎಂ ಬೊಮ್ಮಾಯಿ