ಹಾಸನ: ದಕ್ಷಿಣದ ಕಾಶಿ ಎಂದೇ ಕರೆಸಿಕೊಳ್ಳುವ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯಕ್ಕೆ ನಿನ್ನೆ ( ಸೆಪ್ಟೆಂಬರ್, 20) 9 ಅಡಿ ಎತ್ತರದ ಬೆಳ್ಳಿರಥ ಸಮರ್ಪಣೆ ಮಾಡಲಾಯಿತು. ಪ್ಲವನಾಮ ಸಂವತ್ಸರದ ಬಾದ್ರಪದ ಮಾಸದ ಪೌರ್ಣಿಮೆಯ ದಿನವಾದ ಸೋಮವಾರದಂದು ಕುಕ್ಕೇ ಸುಬ್ರಹ್ಮಣ್ಯ ಮಠದ ಶ್ರೀಗಳಾಧ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮಿಜಿ ಕಳಶಾಭಿಷೇಕ ಪೂಜೆ ನೆರವೇರಿಸುವ ಮೂಲಕ ದಶಕಗಳಿಂದ ಭಕ್ತರ ಕೋರಿಕೆಯಾಗಿದ್ದ ಬೆಳ್ಳಿ ರಥವನ್ನು ಕ್ಷೇತ್ರಕ್ಕೆ ಸಮರ್ಪಣೆ ಮಾಡಿದರು.
ಸುಬ್ರಹ್ಮಣ್ಯ ಹಾಗೂ ನಾಗದೇವರ ಮೂಲ ನೆಲೆಯಾದ ರಾಮನಾಥಪುರದಲ್ಲಿ ದೇವರಿಗೆ ಬೆಳ್ಳಿ ರಥ ಬೇಕು, ದೇವರನ್ನು ರಜತ ರಥದಲ್ಲಿ ನೋಡಿ ಸಂತಸಪಡಬೇಕು ಎಂದು ಸಾವಿರಾರು ಭಕ್ತರ ಆಸೆಯಾಗಿತ್ತು. ಹಾಗಾಗಿಯೇ ಸಾಕಷ್ಟು ಪ್ರಯತ್ನದ ಮೂಲಕ ಇಂದು 64 ಕೆಜಿ, 9 ಅಡಿ ಎತ್ತರದ ರಥವನ್ನು ದೇವರಿಗೆ ಸಮರ್ಪಿಸಲಾಯಿತು. 56 ಲಕ್ಷ ಮೌಲ್ಯದಲ್ಲಿ ಈ ಬೆಳ್ಳಿ ರಥವನ್ನು ನಿರ್ಮಿಸಲಾಗಿದೆ.
ನಿನ್ನೆ ಬೆಳಿಗ್ಗೆ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ, ರಥಕ್ಕೆ ಅಭಿಷೇಕ ಮಾಡಿ, ಪೂಜೆ ಸಲ್ಲಿಸಿ ರಥ ಸಮರ್ಪಣೆ ಮಾಡಲಾಯಿತು. ಬಳಿಕ ರಥದ ಮೇಲೆ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಆವರಣದಲ್ಲಿ ರಥೋತ್ಸವ ನೆರವೇರಿಸಿದ ಭಕ್ತರು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು ಸುಬ್ರಹ್ಮಣ್ಯ ಹಾಗೂ ನಾಗ ದೇವರ ಪ್ರಧಾನ ದೇವಾಲಯ ಇದು. ಮನುಷ್ಯನ ಮೂಲಭೂತ ಅವಶ್ಯಕತೆಯನ್ನು ಪೂರೈಸುವ ಉಭಯ ದೇವರ ಸನ್ನಿಧಾನ ಇದು. ಹಾಗಾಗಿ ದೇವಾಲಯದ ಮೇಲಿನ ಶ್ರದ್ಧೆಯಿಂದ ಇಲ್ಲಿನ ಭಕ್ತರು ದೇವರನ್ನು ಬೆಳ್ಳಿಯ ರಥದಲ್ಲಿ ನೋಡಬೇಕೆಂದು ಬಯಸಿದ್ದರು. ಅದು ಇಂದು ಈಡೇರಿದೆ. ಕಾವೇರಿ ತೀರದ ಸುಂದರವಾದ ಈ ದೇಗುಲದಲ್ಲಿ ಬೆಳ್ಳಿಯ ರಥ ಸಪರ್ಪಣೆ ಆಗಿದ್ದು, ಇನ್ನು ಮುಂದೆ ದೇವರ ಉತ್ಸವ ಪೂಜೆಯಲ್ಲಿ ಬೆಳ್ಳಿ ರಥದಲ್ಲಿ ದೇವರನ್ನು ಕೂರಿಸಿ ಉತ್ಸವ ಮಾಡಬಹುದು ಎಂದು ಹೇಳಿದ್ದಾರೆ.
ವರದಿ: ಮಂಜುನಾಥ್ ಕೆ.ಬಿ
ಇದನ್ನೂ ಓದಿ:
ರಾಯರ ಬೃಂದಾವನಕ್ಕೆ 20 ಕೋಟಿ ರೂ. ಮೌಲ್ಯದ 2 ಚಿನ್ನದ ಪಾತ್ರೆ ಸಮರ್ಪಣೆ ಮಾಡಿದ ದಾನಿಗಳು
ಮಾದಪ್ಪನ ರಥಕ್ಕಾಗಿ ಬೆಳ್ಳಿ ಕರಗಿಸುವ ಕಾರ್ಯ ಆರಂಭ; 40 ವರ್ಷಗಳಿಂದ ಸಂಗ್ರಹವಾಗಿದ್ದ 400 ಕೆಜಿ ಬೆಳ್ಳಿ ಬಳಕೆ
Published On - 8:14 am, Tue, 21 September 21