ಅದು ನವೆಂಬರ್ 2ರ ಗುರುವಾರ ಇಡೀ ರಾಜ್ಯವೇ ಹಾಸನದತ್ತ ನೋಡುತ್ತಿತ್ತು ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನಾಂಬೆಯ ಗರ್ಭಗುಡಿ ಬಾಗಿಲು ಓಪನ್ ಮಾಡಲು ಇಡೀ ಜಿಲ್ಲಾಡಳಿತ ಪೊಲೀಸ್ ಇಲಾಖೆ ( hassan police) ಎಲ್ಲರೂ ಹಾಸನದಲ್ಲಿ ಸಜ್ಜಾಗಿದ್ದರೆ, ನವೆಂಬರ್ 3ರಿಂದ ಆರಂಭವಾಗಲಿದ್ದ ಹಾಸನಾಂಬೆ ದರ್ಶನೋತ್ಸವಕ್ಕೆ ಬಿಗಿ ಭದ್ರತೆ ಮಾಡಿಕೊಂಡು ಇಡೀ ಪೊಲೀಸ್ ಇಲಾಖೆ ಸನ್ನದ್ದವಾಗಿತ್ತು. ಆದ್ರೆ ಅತ್ತ ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಶ್ರೀನಿವಾಸ್ ಎಂಬುವವರ ಕಾಫಿ ತೋಟಕ್ಕೆ ಹೊಂದಿಕೊಂಡಂತೆ ಇದ್ದ ಖರಾಬು ಜಮೀನಿನಲ್ಲಿ ಮನುಷ್ಯನ ಅಸ್ತಿಪಂಜರವೊಂದು (woman) ಪತ್ತೆಯಾಗಿ ಊರಿಗೆ ಊರೇ ಬೆಚ್ಚಿಬಿದ್ದಿತ್ತು. ಸಂಪೂರ್ಣ ಕೊಳೆತು ಹೋಗಿದ್ದ ಆ ಶವದ ಮೂಳೆಗಳು ಮಾತ್ರ ಕಾಣುತ್ತಿತ್ತು. ದನ ಮೇಯಿಸಲು ಹೋಗಿದ್ದ ಅದೇ ಊರಿನ ಜನರು ಅಲ್ಲಿ ಹರಿಯುತ್ತಿದ್ದ ಸಣ್ಣ ತೊರೆಯೊಂದರ ಕಡೆಗೆ ದನವೊಂದು ಓಡಿದಾಗ ಅದನ್ನ ಕರೆತರಲು ಹೋಗಿದ್ದ ವೇಳೆ ನಾಯಿಗಳು ಅಲ್ಲೇ ಎಳೆದಾಡಿ ಬಿಟ್ಟಿದ್ದ ದೊಡ್ಡ ದೊಡ್ಡ ಮೂಳೆಗಳು ಕಂಡಾಗ ಅಲ್ಲೊಂದು ಶವ ಇರುವುದು ಪತ್ತೆಯಾಗಿತ್ತು. ಅದನ್ನ ಗುಂಡಿ ತೆಗೆದು ಯಾರೋ ಹೂತು ಹಾಕಿದ್ದಾರೆ ಎನ್ನೋ ವಿಚಾರ ಬೆಳಕಿಗೆ ಬಂದಿದೆ (woman missing case).
ಕೂಡಲೆ ಊರಿನ ಗ್ರಾಮ ಪಂಚಾಯ್ತಿ ಸದಸ್ಯ ರಾಕೇಶ್ ಅವರು ಜಮೀನಿನ ಮಾಲೀಕ ಶ್ರೀನಿವಾಸ್ ಅವರಿಗೆ ತಿಳಿಸಿದ್ದಾರೆ. ಇಬ್ಬರೂ ಕೂಡ ತಕ್ಷಣ ಸಕಲೇಶಪುರ ನಗರ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು ಕಾರ್ಯಪ್ರವೃತ್ತರಾದ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ಸ್ಥಳ ಪರಿಶೀಲನೆ ನಡೆಸಿ ಶವ ಭೂಮಿಯೊಳಗೆ ಇರೋ ಕಾರಣ ಇದನ್ನ ಮ್ಯಾಜಿಸ್ಟ್ರೇಟ್ ಮೂಲಕ ಮಹಜರ್ ಮಾಡಿಸಿ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿರೊದ್ರಿಂದ ಅದಕ್ಕೆ ಪ್ರಕ್ರಿಯೆ ಕೂಡ ಆರಂಭ ಮಾಡಿದ್ರು, ಕಾನೂನಿನ ಪ್ರಕಾರ ಕ್ರಮ ವಹಿಸಿದ ಪೊಲೀಸ್ ಇಲಾಖೆ ಎಫ್.ಎಸ್.ಎಲ್ ತಜ್ಞರನ್ನು ಕರೆಸಿ ಅಲ್ಲಿ ಪತ್ತೆಯಾದ ಶವ ಯಾರದ್ದು, ಅದು ಸಹಜ ಸಾವೇ ಅಥವಾ ಅಸಹಜ ಸಾವೇ, ಕೊಲೆಯೇ ಹೀಗೆ ಎಲ್ಲಾ ಆಂಗಲ್ ನಲ್ಲೂ ಪರೀಕ್ಷೆ ನಡೆಸೋಕೆ ಶುರುಮಾಡಿದ್ರು,
ನವೆಂಬರ್ 2ರ ಗುರುವಾರ ಬಾಗೆ ಗ್ರಾಮದಲ್ಲಿ ಶವವೊಂದು ಪತ್ತೆಯಾಗಿತ್ತು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮುಂದಾದಾಗ ಗೊತ್ತಾಗಿ ಹೋಗಿತ್ತು ಅದೊಂದು ಮಹಿಳೆಯ ಶವ ಎನ್ನೋದು ಮಹಿಳೆ ಶವ ಎನ್ನೋದು ಖಾತ್ರಿಯಾಗುತ್ತಲೆ ಪೊಲೀಸರು ಎಚ್ಚೆತ್ತುಕೊಂಡಿದ್ರು, ಇತ್ತೀಚೆಗೆ ಈ ಊರಿನ ಸುತ್ತಮುತ್ತ ಅಥವಾ ತಾಲ್ಲೂಕಿನ ಯಾವುದಾದ್ರು ಭಾಗದಲ್ಲಿ ಯಾರಾದ್ರು ಮಹಿಳೆ ಮಿಸ್ಸಿಂಗ್ ಇದ್ದರಾ ಎಂದು ಪರಿಶೀಲನೆ ನಡಸಿದಾಗ ಇದೇ ಗ್ರಾಮದ ಮಹಿಳೆಯೊಬ್ಬರು 2023ರ ಜುಲೈ 2ರಿಂದ ಕಾಣೆಯಾದ ಬಗ್ಗೆ ಜುಲೈ 8ರಂದು ಸಕಲೇಶಪುರ ನಗರ ಠಾಣೆಯಲ್ಲೇ ಒಂದು ಮಿಸ್ಸಿಂಗ್ ಕೇಸ್ ದಾಖಲಾಗಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಹೌದು ಜುಲೈ 2ರಂದು ಇದೇ ಊರಿನ ಶಾಂತಿ (34) ಎಂಬ ಮಹಿಳೆ ರಾತ್ರೋರಾತ್ರಿ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ರು, ಒಂದು ವಾರ ಎಲ್ಲೆಡೆ ಹುಡುಕಾಟ ನಡೆಸಿದ್ದ ಕುಟುಂಬದ ಸದಸ್ಯರು ಆಕೆ ಎಲ್ಲಿಯೂ ಪತ್ತೆ ಆಗದಿದ್ದಾಗ ಜುಲೈ 8ರಂದು ಆಕೆಯ ಗಂಡ ಪವನ್ ಕುಮಾರ್ ಆಲಿಯಾಸ್ ಮೈಲಾರಿ ಖುದ್ದು ತಾನೆ ಬಂದು ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಿದ್ದ, ಆಕೆ ಕಾಣೆಯಾಗಿ ಸರಿಯಾಗಿ ನಾಲ್ಕು ತಿಂಗಳಲ್ಲಿ ಆಕೆಯ ಮನೆಯಿಂದ 200 ಮೀಟರ್ ದೂರದ ನಿರ್ಜನ ಪ್ರದೇಶವೊಂದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು, ಇದರ ಹಿಂದೆಬಿದ್ದ ಪೊಲೀಸರಿಗೆ ಅಲ್ಲಿ ಕೊಲೆಯ ರಹಸ್ಯವೊಂದು ಬಯಲಾಗಿತ್ತು.
ಬಾಗೆ ಗ್ರಾಮದ ಶಾಂತಿ ನರ್ಸಿಂಗ್ ಓದಿಕೊಂಡು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ಲು, ಇದೇ ಊರಿನ ಬಾಡಿ ಬಿಲ್ಡರ್, ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಜೊತೆಗೆ ಸ್ನೇಹವಾಗಿತ್ತು, ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮನೆಬಿಟ್ಟು ಓಡಿ ಹೋಗಿದ್ದರು. 12 ವರ್ಷಗಳ ಹಿಂದೆ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದ ಜೋಡಿ, ಕೆಲ ತಿಂಗಳ ಬಳಿಕ ಊರಿಗೆ ಬಂದಿದ್ರು. ಇಬ್ಬರದ್ದು ಕೂಲಿ ಮಾಡಿ ಬದುಕು ನಡೆಸೋ ಕುಟುಂಬವಾಗಿದ್ದರಿಂದ ಊರಿನಲ್ಲೇ ಇದ್ದ ಮನೆಯಲ್ಲಿ ಜೀವನ ನಡಸುತ್ತಿದ್ದ ಈ ಪ್ರೇಮದ ಜೋಡಿ ಚೆನ್ನಾಗಿಯೇ ಇದ್ದರು.
ಇವರ ಪ್ರೀತಿಯ ಸಂಕೇತವಾಗಿ ಇಬ್ಬರು ಮುದ್ದಾದ ಮಕ್ಕಳು ಹುಟ್ಟಿದ್ರು, ಇವರ ಕುಟುಂಬ ಸದಸ್ಯರೇ ಹೇಳೊ ಪ್ರಕಾರ ಇಬ್ಬರೂ ಅನ್ಯೋನ್ಯವಾಗಿದ್ರಂತೆ. ಆದ್ರೆ ನಾಲ್ಕು ತಿಂಗಳ ಹಿಂದೆ ಏನಾಯ್ತೋ ಏನೋ ಗೊತ್ತಿಲ್ಲ ಶಾಂತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ರು, ಎಲ್ಲೆಡೆ ಹುಡುಕಾಟ ನಡೆಸಿದ್ದ ಪತಿ ಹಾಗು ಕುಟುಂಬ ಸದಸ್ಯರು ಬೇರೆ ದಾರಿ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಶಾಂತಿಯ ತಾಯಿ ಮನೆಯವರು ಪೊಲೀಸರಿಗೆ ದೂರು ಕೊಡೋಕೆ ಹೋಗೋ ಮೊದಲೇ ಪತಿ ಪವನ್ ದೂರು ಕೊಟ್ಟಿದ್ದರಿಂದ ಅವರ ದೂರು ಸ್ವೀಕಾರ ಮಾಡದೆ ಪತಿ ಕೊಟ್ಟ ಕೇಸ್ ನಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ಶುರುಮಾಡಿದ್ರು.
ಆದ್ರೆ ಎಲ್ಲಿ ಶೋಧ ನಡೆಸಿದ್ರು ಶಾಂತಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ, ಇತ್ತ ಪತಿ ಪವನ್ ಕೂಡ ಪತ್ನಿ ಕಾಣೆಯಾದ ನೋವಿನಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲವಂತೆ, ಅರೋಗ್ಯವೂ ಕೈಕೊಟ್ಟು ಆತ ಸೊರಗಿ ಹೋಗಿದ್ದನಂತೆ, ಏನಾಯ್ತೋ ಏನೋ ಅನ್ನೋ ನಿಗೂಢತೆ ಇರುವಾಗಲೇ ನಾಲ್ಕು ತಿಂಗಳ ಬಳಿಕ ಊರಿನ ಕಾಫಿ ತೋಟದ ಬಳಿ ಶಾಂತಿಯ ಕಳೇಬರ ಪತ್ತೆಯಾಗಿತ್ತು. ಏನಾಯ್ತು ಏನು ಎಂದು ಮಿಸ್ಸಿಂಗ್ ಕೇಸ್ ಕೊಟ್ಟ ಪತಿಯನ್ನೇ ವಿಚಾರ ಮಾಡಿದಾಗ ಅಲ್ಲಿ ಕೊಲೆ ರಹಸ್ಯ ಬಯಲಾಗಿ ಹೋಗಿತ್ತು.
ಗಂಡ ಹೆಂಡಿರ ನಡುವೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಪತ್ನಿಯನ್ನ ಕೊಂದೆ ಬಿಟ್ಟಿದ್ದನಂತೆ, ಕೊಲೆ ಮಾಡಿದ ಬಳಿಕ ರಾತ್ರೊರಾತ್ರಿ ಶವವನ್ನು ಹೊತ್ತು ತಂದು ಶ್ರೀನಿವಾಸ್ ಅವರ ಕಾಫಿ ತೋಟದ ಸಮೀಪವೇ ಇದ್ದ ಪಾಳು ಬಿದ್ದ ಜಾಗದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದಾನೆ. ನಾಲ್ಕು ತಿಂಗಳಿಂದ ಆಕೆ ಎಲ್ಲೊ ಕಾಣೆಯಾಗಿದ್ದಾಳೆ ಎಂದು ಕತೆ ಕಟ್ಟಿಕೊಂಡು ಮಕ್ಕಳ ಜೊತೆಗೆ ತನ್ನ ಪಾಡಿಗೆ ತಾನು ಇದ್ದುಬಿಟ್ಟಿದ್ದ.
ಇಷ್ಟಾಗಿದ್ದರೆ ಬಹುಶಃ ಈ ಕೊಲೆ ರಹಸ್ಯ ಈ ಮಣ್ಣಿನಡಿಯಲ್ಲೇ ಮುಚ್ಚಿಹೋಗ್ತಿತ್ತೋ ಏನೊ, ಆದ್ರೆ ಊರಿನ ನಾಯಿಗಳು ಶವದ ಮೂಳೆಗಳನ್ನ ಎಳೆದಾಡಿವೆ, ಇದನ್ನ ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ ಅಲ್ಲೊಂದು ಶವ ಇರೋದು ಖಾತ್ರಿಯಾಗಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ, ತನಿಖೆ ನಡೆಸಿದ ಪೊಲೀಸರಿಗೆ ನಾಲ್ಕು ತಿಂಗಳ ಹಿಂದೆ ನಡೆದ ಕೊಲೆಯೊಂದು ಬಯಲಾಗಿದೆ.
12 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಚೆನ್ನಾಗಿಯೇ ಇದ್ದರು. ಮುದ್ದಾದ ಮಕ್ಕಳು, ವಾಸಕ್ಕೆ ಸ್ವಂತ ಮನೆ ಇನ್ನೇನು ಬೇಕು ಎಲ್ಲವೂ ಚೆನ್ನಾಗಿಯೇ ಇತ್ತಂತೆ. ಆದ್ರೆ ಪ್ರೀತಿಸಿ ಮದುವೆಯಾದ ಈ ಜೋಡಿಯ ನಡುವೆ ಬಂದಿದ್ದು ಮತ್ತೊಬ್ಬ ಹುಡುಗಿ ಎನ್ನೋದು ಶಾಂತಿ ಮನೆಯವರ ಆರೋಪ. ತನ್ನ ಸಂಬಂಧಿ ಮಹಿಳೆಯೊಬ್ಬಳ ಜೊತೆಗೆ ಪವನ್ ಪ್ರೀತಿ ಪ್ರೇಮ ಅಂತಾ ಶುರು ಮಾಡಿಕೊಂಡಿದ್ದನಂತೆ. ಆಕೆಯನ್ನ ತನ್ನ ಮನೆಯಲ್ಲೇ ಇಟ್ಟುಕೊಂಡು, ತಾಳಿ ಕಟ್ಟಿದ ಮಡದಿ ಮನೆಯಲ್ಲಿಯೇ ಇರುವಾಗ ಆಕೆಯ ಜೊತೆಗೆ ಸಂಸಾರ ಶುರು ಮಾಡಿದ್ದನಂತೆ!
ತನ್ನ ಹಾಗೂ ಗಂಡನ ನಡುವೆ ನಡೆಯುತ್ತಿರೋ ಈ ಸಾಂಸಾರಿಕ ಕಲಹವನ್ನು ತಾಯಿ ಜೊತೆ ಹೇಳಿಕೊಂಡಿದ್ದ ಶಾಂತಿ, ತನ್ನ ಮತ್ತು ತನ್ನ ಗಂಡನ ನಡುವೆ ಏನೂ ಸಂಬಂಧ ಇಲ್ಲ ಎಂದು ನೋವು ತೋಡಿಕೊಂಡಿದ್ಲಂತೆ. ಆದ್ರೆ ತಾಯಿ ಎಣ್ಣೆ ಕುಡಿತಾರೆ ಎನ್ನೋ ವಿಚಾರಕ್ಕೆ ತಾಯಿ ಜೊತೆ ಶಾಂತಿ ಮಾತು ಬಿಟ್ಟಿದ್ದಳು. ನಾಲ್ಕು ತಿಂಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದಳು. ಗಂಡನೇ ಆಕೆಯನ್ನ ಹೀಗೆ ಕೊಲೆ ಮಾಡಿರಬಹುದು ಎಂದು ಯಾರಿಗೂ ಅನುಮಾನ ಕೂಡ ಇರ್ಲಿಲ್ಲ. ಆದ್ರೆ ಈಗ ಶವ ಸಿಕ್ಕ ಬಳಿಕ ನಡೆದ ಘಟನೆಯನ್ನ ಪತಿಯೇ ಒಪ್ಪಿಕೊಂಡಿದ್ದಾನಂತೆ. ಜಗಳದ ಸಿಟ್ಟಿನಲ್ಲಿ ಹೊಡೆದ ಏಟು ಆಕೆಯ ಪ್ರಾಣ ತೆಗೆದಿದೆ ಎಂದು ಹೇಳಿದ್ದಾನಂತೆ. ಆದ್ರ ಈ ಕೊಲೆ ಹಿಂದೆ ಅವನೊಬ್ಬನೇ ಇಲ್ಲ, ಬೇರೆ ಯಾರೋ ಸಹಾಯದಿಂದ ಈ ಕೊಲೆ ಆಗಿದೆ, ಮಗಳ ಸಾವಿಗೆ ನ್ಯಾಯ ಬೇಕು ಅನ್ನೋದು ಹೆತ್ತವರ ಕಣ್ಣೀರು.
ಗ್ರಾಮದಲ್ಲಿ ಶವವವೊಂದು ಪತ್ತೆಯಾಗಿದೆ ಎನ್ನೋ ಮಾಹಿತಿ ಸಿಗುತ್ತಲೆ ಕಾರ್ಯಪ್ರವೃತ್ತವಾದ ಪೊಲೀಸರು ಸಕಲೇಶಪುರ ನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ, ಶವ ಸಂಪೂರ್ಣ ಕೊಳೆತು ಯಾವುದೇ ಗುರುತು ಪತ್ತೆಯಾಗದ ಕಾರಣ ಅಲ್ಲಿ ಪತ್ತೆಯಾದ ಶವ ನಾಲ್ಕು ತಿಂಗಳ ಹಿಂದೆ ಕಾಣೆಯಾದ ಮಹಿಳೇ ಶಾಂತಿಯದ್ದೇ ಇರಬಹುದು ಎನ್ನೋ ಶಂಕೆ ಮೇರೆಗೆ ತನಿಖೆ ಕೈಕೊಂಡಿದ್ದಾರೆ.
ಆರೋಪಿ ಪತಿಯನ್ನು ವಶಕ್ಕೆ ಪಡೆದು ಜೈಲಿಗೂ ಕಳಿಸಲಾಗಿದೆ. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿ, ಎಫ್.ಎಸ್.ಎಲ್, ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದೆ. ಅಲ್ಲಿ ಸಿಕ್ಕ ಶವ ಶಾಂತಿಯದ್ದೇ ಆಗಿದೆಯಾ, ಆಕೆಯನ್ನ ಕೊಲೆ ಮಾಡಲಾಗಿದೆಯಾ, ಕೊಲೆ ಮಾಡಿದ್ರೆ ಕೊಲೆ ನಡೆದಿದ್ದುಹೇಗೆ?… ಹೀಗೆ ಹಲವು ಆಯಾಮಗಳಲ್ಲಿ ಪ್ರಶ್ನೆಗಳಿದ್ದು ಎಲ್ಲದಕ್ಕೂ ಎಫ್.ಎಸ್.ಎಲ್ ವರದಿ ಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Fri, 17 November 23