ರಾಷ್ಟ್ರತಿಗಳ ಅಂಗಳ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು ಕೊಟ್ಟ ಕಾರಣಗಳೇನು ಗೊತ್ತೇ?

Hate Speech Bill: ಕರ್ನಾಟಕ ದ್ವೇಷ ಭಾಷಣ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಮಸೂದೆಯ ವ್ಯಾಖ್ಯಾನ ಅಸ್ಪಷ್ಟ, ದುರುಪಯೋಗದ ಭೀತಿ, ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಇತ್ಯಾದಿ 29 ಪ್ರಮುಖ ಕಾರಣಗಳನ್ನು ರಾಜ್ಯಪಾಲರು ನೀಡಿದ್ದಾರೆ. ಸಹಿ ನಿರಾಕರಿಸಿದ್ದಕ್ಕೆ ರಾಜ್ಯಪಾಲರು ನೀಡಿರುವ ಕಾರಣಗಳು ಇಲ್ಲಿವೆ.

ರಾಷ್ಟ್ರತಿಗಳ ಅಂಗಳ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು ಕೊಟ್ಟ ಕಾರಣಗಳೇನು ಗೊತ್ತೇ?
ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್
Image Credit source: tv9
Edited By:

Updated on: Feb 02, 2026 | 9:53 AM

ಬೆಂಗಳೂರು, ಫೆಬ್ರವರಿ 2: ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆ (Hate Speech Bill) ಇದೀಗ ರಾಷ್ಟ್ರಪತಿಗಳ (President of India) ಅಂಗಳಕ್ಕೆ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ನಿರಾಕರಿಸಿದ್ದು, ತಮ್ಮ ನಿರ್ಧಾರಕ್ಕೆ ಸ್ಪಷ್ಟನೆಯಾಗಿ 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ದ್ವೇಷ ಭಾಷಣ ಮಸೂದೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಒಯ್ದಿದೆ.

ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದ ದ್ವೇಷ ಭಾಷಣ ಮಸೂದೆಗೆ ಸಂಬಂಧಿಸಿ ರಾಜ್ಯಪಾಲರು ಸಹಿ ನಿರಾಕರಿಸಿದ್ದು, ಅದೀಗ ರಾಷ್ಟ್ರಪತಿಗಳಿಗೆ ವರ್ಗಾವಣೆಯಾಗಿದೆ. ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹ.

ದ್ವೇಷ ಭಾಷಣ ಮಸೂದೆಗೆ ಸಹಿ ನಿರಾಕರಿಸಿ ರಾಜ್ಯಪಾಲರು ನೀಡಿದ ಪ್ರಮುಖ ಕಾರಣಗಳು

ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಅಸ್ಪಷ್ಟತೆಯಿಂದಾಗಿ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಮತ್ತು ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸಂವಿಧಾನಾತ್ಮಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಮೂಲಭೂತ ಹಕ್ಕನ್ನು ಕಸಿಯುವ ಭೀತಿ

ಇದಲ್ಲದೆ, ಮಸೂದೆಯಲ್ಲಿ ಹಲವಾರು ಕಾನೂನು ತೊಡಕುಗಳು ಇರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದು ಮಿತಿ ಮೀರಿದ ಭಯಾನಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಭೀತಿ ಇದರಿಂದ ಉಂಟಾಗಬಹುದು ಎಂಬುದೂ ಅವರ ಪ್ರಮುಖ ಆಕ್ಷೇಪವಾಗಿದೆ.

ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಭೀತಿ ಹಾಗೂ ದೇಶದಲ್ಲಿ ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ಜಾರಿಯಲ್ಲಿರುವುದನ್ನೂ ರಾಜ್ಯಪಾಲರು ತಮ್ಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ.

ಬೌದ್ಧಿಕ ಚಿಂತನೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ, ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ರಾಜ್ಯಪಾಲರಿಂದ ವ್ಯಕ್ತವಾಗಿದೆ. ಈ ನಿರಾಕರಣೆಯ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ

ರಾಜ್ಯಪಾಲರ ಸಹಿ ನಿರಾಕರಣೆ ಮತ್ತು ಮಸೂದೆ ರಾಷ್ಟ್ರಪತಿಗಳಿಗೆ ವರ್ಗಾವಣೆಗೊಂಡಿರುವುದರಿಂದ ದ್ವೇಷ ಭಾಷಣ ಮಸೂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us