AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ

ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ ಇನ್ನೂ ರಾಜ್ಯಪಾಲರ ಬಳಿ ಪರಿಶೀಲನಾ ಹಂತದಲ್ಲಿದೆ. ಹೀಗಿರುವಾಗ ಗೃಹ ಇಲಾಖೆ, ಬಿಜೆಪಿ ಮುಖಂಡನ ಮೇಲೆ ದ್ವೇಷ ಭಾಷಣದ ನೋಟಿಸ್ ಅಸ್ತ್ರ ಪ್ರಯೋಗಿಸಿದೆ.

ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ
Suresh Kumar
ರಮೇಶ್ ಬಿ. ಜವಳಗೇರಾ
|

Updated on: Jan 24, 2026 | 10:39 PM

Share

ಬೆಂಗಳೂರು, (ಜನವರಿ 24): ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ (Karnataka Hate Speech And Hate Crimes Bill) ಅಂಗೀಕಾರಗೊಂಡಿದ್ದು, ಇದಕ್ಕೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಆದರೂ ಸಹ ಗೃಹ ಇಲಾಖೆ ದ್ವೇಷ ಭಾಷಣದಡಿಯಲ್ಲಿ ಬಿಜೆಪಿ(BJP) ಮುಖಂಡರಿಗೆ ನೋಟಿಸ್ ನೀಡಿರುವು ಬೆಳಕಿಗೆ ಬಂದಿದೆ. ಹೌದು.. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಮೊದಲೇ ಬಿಜೆಪಿ ಮುಖಂಡ ವಿಕಾಸ ಪುತ್ತೂರ್ ಅವರಿಗೆ ದ್ವೇಷ ಭಾಷಣ ಕಾಯ್ದೆಯ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ.

ಇಂದು (ಜನವರಿ 24) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ವಿಕಾಸ ಪುತ್ತೂರ್ ದಿಕ್ಕೂಚಿ ಭಾಷಣಕಾರರಾಗಿದ್ದರು. ಹೀಗಾಗಿ ಚಿಕ್​ಕಮಗಳೂರು ಪೊಲೀಸ್, ವಿಕಾಸ ಪುತ್ತೂರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ದ್ವೇಷ ಭಾಷಣ ಮಸೂದೆ ಕಾನೂನಾಗಿ ಜಾರಿಗೆ ಬಂದಿಲ್ಲ. ಆಗಲೇ ಪೊಲೀರು ಬಿಜೆಪಿ ಮುಖಂಡನ ಮೇಲೆ ಕ್ರಮದ ಬಗ್ಗೆ ಎಚ್ಚರಿಕೆ ನೋಟಿಸ್ ನೀಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿಳ 22ರಲ್ಲಿ 19 ಮಸೂದೆ ಪಾಸ್, ಎರಡು ವಾಪಸ್: ಕಾಂಗ್ರೆಸ್​​​​ನ ದ್ವೇಷ ಭಾಷಣ ಬಿಲ್ ಆಸೆ​ ಠುಸ್

ಈ ಸಂಬಂಧ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತಿದ್ದು, ಗೃಹ ಇಲಾಖೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣ ಮಸೂದೆ ಕಾಯ್ದೆಯಾಗಿದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ? Anticipatory Bail ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ Anticipatory Notice ನಿಜಕ್ಕೂ ಗೃಹ ಇಲಾಖೆಯ ಹೊಸ ಕಾರ್ಯ ವೈಖರಿ ಎಂದು ಕಿಡಿಕಾರಿದ್ದಾರೆ.

ಸುರೇಶ್ ಕುಮಾರ್ ಪೋಸ್ಟ್​​ ಹೀಗಿದೆ

ವಿಕಾಸ ಪುತ್ತೂರ್ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು. ನನ್ನ ಆತ್ಮೀಯ ಸಹಕಾರಿಗಳೂ ಸಹ. ಪಕ್ಷದಲ್ಲಿನ ಅನ್ಯಾನ್ಯ ಜವಾಬ್ದಾರಿಗಳನ್ನು ಬಹಳ ಶ್ರದ್ದೆಯಿಂದ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಅವರು ಬಂದಾಗ ಅವರಿಗೆ ಪೊಲೀಸರು ನೀಡಿರುವ “ಪ್ರೇಮಪತ್ರ” ಇದು. ಅಂದ ಹಾಗೆ ರಾಜ್ಯದ ಗೃಹ ಸಚಿವರಿಗೆ ಹಾಗೂ ವಿಕಾಸ ಪುತ್ತೂರು ಅವರಿಗೆ ನೋಟಿಸ್ ಕೊಟ್ಟ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಇಬ್ಬರಿಗೂ ನನ್ನದೊಂದು ಪ್ರಶ್ನೆ

  • ದ್ವೇಷ ಭಾಷಣ ಮಸೂದೆ ಕಾಯ್ದೆಯಾಗಿದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ? Anticipatory Bail ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ Anticipatory Notice ನಿಜಕ್ಕೂ ಗೃಹ ಇಲಾಖೆಯ ಹೊಸ ಕಾರ್ಯ ವೈಖರಿ.
  •  ಇಷ್ಟೊಂದು ಎಚ್ಚರಿಕೆಯಿಂದ ಮತ್ತು ಜತನದಿಂದ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರವರನ್ನು ಇನ್ನೂ ಬಂಧಿಸಲು ಏಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು ಪೊಲೀಸರ​ ನೋಟಿಸ್​​ನಲ್ಲೇನಿದೆ?

ಈ ಮೂಲಕ ನಿಮಗೆ (ವಿಕಾಸ ಪುತ್ತೂರು ಅವರಿಗೆ) ತಿಳಿಯಪಡಿಸುವುದೇನೆಂದರೆ, ದಿನಾಂಕ 24-01-2026 ರಂದು ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಬಯಲು ರಂಗಮಂದಿರ ತರೀಕೆರೆಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ದಿಕ್ಕೂಚಿ ಭಾಷಣಕಾರರಾಗಿ ನೀವು ಆಗಮಿಸಿದ್ದು, ನೀವು ಹಿಂದೂ ಭಾಂದವರನ್ನು ಆದೇಶಿಸಿ ಭಾಷಣ ಮಾಡಲಿದ್ದು, ತಾವುಗಳು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರದಲ್ಲಿ ಭಾಷಣವನನು ಮಾಡಲು ಈ ಮೂಲಕ ನಿಮಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿರುತ್ತದೆ.

  • ನೀವುಗಳು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ಅನ್ಯ ಕೋಮಿನ ಸಮುದಾಯದವರ ಭಾವನೆಗಳಿಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು.
  •  ತಾವು ಮಾಡುವ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ ಹಿಂಸೆ ಪ್ರಚೋದನೆಗೆ ಒಳಪಡಬಾರದು.
  •  ಶೋಭಾಯಾತ್ರೆಯ ಸಮಯದಲ್ಲಿ ತಾವುಗಳು ತರೀಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮಮ ಹಮ್ಮಿಕೊಂಡಿದ್ದು ಶಾಂತ ರೀತಿಯಲ್ಲಿ ಸಾರ್ವಜನಿಕರಿಗೆ ಮತ್ತು ಸುಗುಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು.
  •  ಘನ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ