ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ: ಪ್ರಾಣಕಳೆದುಕೊಂಡ ಪ್ರಿಯಕರ

ಜೀವನದಲ್ಲಿ ಹತ್ತಾರು ಕನಸ್ಸು ಕಂಡು ಕೂಲಿ ಕೆಲಸಮಾಡಿ ಹೆತ್ತವರನ್ನು ಸಾಕುತ್ತಿದ್ದ ಯುವಕ ಮಾಯಾಂಗಿಯೋಬ್ಬಳ ಮೋಸದಾಟಕ್ಕೆ ಬಲಿಯಾಗಿ. ನೀನೇ ಜೀವ, ನೀನೇ ಪ್ರಾಣ ಎಂದು ಗಲ್ಲಿ ಗಲ್ಲಿ ಸುತ್ತಿ ಸುತ್ತಾಡಿ ಇದೀಗ ಕೈ ಕೊಟ್ಟಿದ್ದು, ಇದೀಗ ನಿಯತ್ತಾಗಿ ಲವ್​ ಮಾಡುತ್ತಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡು ತಂದೆ- ತಾಯಿ ಈಗ ಅನಾಥರಾಗಿದ್ದು, ಮನೆಗೆ ಆಧಾರವಾಗಿದ್ದ ಮಗ ಪ್ರೀತಿ ಹಿಂದೆ ಬಿದ್ದು ಸಾವಿಗೆ ಶರಣಾಗಿದ್ದಾನೆ.

ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ: ಪ್ರಾಣಕಳೆದುಕೊಂಡ ಪ್ರಿಯಕರ
Haveri Love Story
Updated By: ರಮೇಶ್ ಬಿ. ಜವಳಗೇರಾ

Updated on: Mar 05, 2025 | 9:26 PM

ಹಾವೇರಿ, (ಮಾರ್ಚ್​ 05): ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ. ಯುವತಿಯ ಹೆಸರು ಚಂದ್ರಕಲಾ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಿವಾಸಿ. ಇವಳ ಪ್ರೀತಿಯ ಬಲೆಗೆ ಬಿದ್ದು ಸಾವಿನ ಮನೆ ಸೇರಿದ ಈ ಯುವಕ ಹೆಸರು ಶಶೀಧರ್ ಬ್ಯಾಡಗಿ ಪಟ್ಟಣ ನಿವಾಸಿ. ಇವರಿಬ್ಬರು ಹಲವು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಾರ್ಕ್, ದೇವಸ್ಥಾನ ಅಂತ ಗಲ್ಲಿ ಗಲ್ಲಿ ಸುತ್ತಾಡಿ ಕೊನೆಗೆ ಜಾತಿ ಬೇರೆ ಎಂದು ಕೈಕೊಟ್ಟಿದ್ದಾಳೆ. ಪ್ರಿಯಕರ ಎಷ್ಟೇ ಗೋಗರಿದರು ಪ್ರೀತಿ ನಿರಾಕರಿಸಿದಕ್ಕೆ ಕೊನೆಗೆ ನೇಣಿಗೆ ಶರಣಾಗಿದ್ದಾನೆ.

ಚಂದ್ರಕಲಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಶಶಿಧರ್ ಹಲವು ದಿನಗಳಿಂದ ಬಿಂದಾಸ್ ಆಗಿ ಓಡಾಡಿಕೊಂಡಿದ್ದ.ಬ್ಯಾಡಗಿ ತಾಲೂಕಿನ ಯುವತಿ ಚಂದ್ರಕಲಾ ಹಾಗೂ ಶಶಿಧರ್ ಲವ್ ಬರ್ಡ್ಸ್ ಆಗಿ ಸುತ್ತಾಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಳಿಕ ಲವ್ ಬ್ರೇಕಪ್ ಮಾಡಿಕೊಳ್ಳಲು ಚಂದ್ರಕಲಾ‌‌ ಮುಂದಾಗಿದ್ದಾಳೆ . ಇದರಿಂದ ನೊಂದು ಶಶಿಧರ್ ನೇಣಿಗೆ ಶರಣಾಗಿದ್ದಾನೆ. ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಳ್ಳಲು ಚಂದ್ರಕಲಾ ಕಾರಣ ಎಂದು ಶಶಿಧರ್ ಪೋಷಕರು ಆರೋಪಿಸಿದ್ದು, ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೃತ ಶಶಿಧರ್ ತಾಯಿ ಹುಲಿಗೆಮ್ಮ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ 

ಕಳೆದ ಜನೆವರಿ 26 ರಂದು ಕೆಲಸಕ್ಕೆ ಹೋಗಿ ಬರೋದಾಗಿ ಮನೆಯವರಿಗೆ ಹೇಳಿ ಶಶಿಧರ್ ಮನೆ ಬಿಟ್ಟು ಹೋಗಿದ್ದ. ಮಾರನೇ ದಿನ ಬ್ಯಾಡಗಿ ಬಳಿ ಕದರಮಂಡಲಿ ರೋಡ್ ಹತ್ತಿರ ಶಶಿಧರ್ ಶವ ಪತ್ತೆಯಾಗಿತ್ತು. ರೋಡ್ ಬಳಿಯ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮೊದಲಿಗೆ ಶಶಿಧರ್ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು UDR ದಾಖಲು ಮಾಡಲಾಗಿತ್ತು. ಬಳಿಕ ಮೃತ ಶಶಿಧರ್ ಮೊಬೈಲ್ ಪರಿಶೀಲಿಸಿದ್ದ ಪೋಷಕರಿಗೆ ಶಾಕ್ ಕಾದಿತ್ತು.

ಇದನ್ನೂ ಓದಿ
ಪ್ರಿಯಕರ ಮನೆ ಬರದಿದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳೇ?
ಪ್ರೇಯಸಿಯ ಕತ್ತು ಸೀಳಿ ಬಳಿಕ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡ ಪ್ರಿಯಕರ
ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಯುವಕ ಆತ್ಮಹತ್ಯೆ
ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮೊಬೈಲ್ ನಲ್ಲಿ ಶಶಿಧರ್ ಯುವತಿಯೊಬ್ಬಳ ಜೊತೆಗಿದ್ದ ಫೊಟೋಗಳು, ಕಾಲ್ ರೆಕಾರ್ಡ್ಸ್ ,ಕೆಲ ವಿಡಿಯೋಗಳು ಪತ್ತೆಯಾಗಿವೆ. ಇನ್ನು ಯುವಕ ಸಾಯ್ತೀನಿ ಅಂದ್ರೂ, ‘ನೀನ್ ಸತ್ರೆ ನನಗೇನೂ ಲಾಭ ಇಲ್ಲ. ನನ್ಗೇ ಕೆಟ್ಟ ಹೆಸರು ಬರುತ್ತೆ ಎಂದು ಯುವತಿ ಕಠೋರವಾಗಿ ಹೇಳಿರುವ ಆಡಿಯೋ ಕೂಡ ಸಿಕ್ಕಿದೆ. ಈ ಬಗ್ಗೆ ಶಶಿಧರ್ ಸ್ನೇಹಿತರ ಬಳಿ ವಿಚಾರಸಿದ್ದ ಪೋಷಕರಿಗೆ ಲವ್​ ವಿಚಾರ ಗೊತ್ತಾಗಿದ್ದು, ಬಳಿಕ ಚಂದ್ರಕಲಾ ಯುವತಿ ವಿರುದ್ದ ಕೇಸ್ ದಾಖಲು ಮಾಡಿದ್ದಾರೆ.

ಕಳೆದ ಫೆಬ್ರವರಿ 25 ರಂದು ಚಂದ್ರಕಲಾ ವಿರುದ್ಧ ಮೃತ ಶಶಿಧರ್ ತಾಯಿ ಹುಲಿಗೆಮ್ಮ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದಾರೆ. ತಮ್ಮ ಪುತ್ರ ಶಶಿಧರ್ ಕೆಳಜಾತಿಯವನು ಎಂದು ಹೇಳಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಳೆ. ಶಶಿಧರ್ ಆತ್ಮಹತ್ಯೆಗೆ ಚಂದ್ರಕಲಾ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಹುಲಿಗೆಮ್ಮ, ಇದುವರೆಗೂ ಆರೋಪಿ ಚಂದ್ರಕಲಾಳ ವಿರುದ್ಧ ಪೋಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಒಬ್ಬನೇ ಮಗನನ್ನು ಕಳೆದುಕೊಂಡು ತಂದೆ- ತಾಯಿ ಈಗ ಅನಾಥರಾಗಿದ್ದು, ಮನೆಗೆ ಆಧಾರವಾಗಿದ್ದ ಮಗ ಪ್ರೀತಿ ಹಿಂದೆ ಬಿದ್ದು ಸಾವಿಗೆ ಶರಣಾಗಿದ್ದಾನೆ.

ವರದಿ: ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

Published On - 7:47 pm, Wed, 5 March 25