ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ: ಮುಂದೇನು?
Panchamasali 2A Reservation: ಮೀಸಲಾತಿ ಕೊಡದಿದ್ದರೆ ನರಗುಂದ ಬಂಡಾಯದ ಹೋರಾಟದ ಮಾದರಿಯಲ್ಲಿ ಐದನೇ ಹೋರಾಟವಾದ್ರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕೆ ಅವಕಾಶ ಕೊಡಬೇಡಿ. ನಾವು ಶಾಂತಿ ಪ್ರಿಯರು, ನಿಮ್ಮನ್ನ ಬಹಳ ನಂಬಿದ್ದೇವೆ. ಹಿಂದೆ ನಮ್ಮ ನಿಜಲಿಂಗಪ್ಪನವರು, ಜೆ.ಎಚ್.ಪಟೇಲ್ ರನ್ನು ನಂಬಿರಲಿಲ್ಲ, ಬೊಮ್ಮಾಯಿಯವರನ್ನು ಅಷ್ಟು ನಂಬಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ನೀಡುವ ವಿಚಾರವಾಗಿ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji ) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ (Panchamasali 2A Reservation issue) ನೀಡುವಂತೆ ಆಗ್ರಹಿಸಿ ನಡೆದ ಎಲ್ಲ ಹೋರಾಟಕ್ಕೂ ಸಿಎಂ ಬಸವರಾಜ ಬೊಮ್ಮಾಯಿಯವರು ಸ್ಪಂದಿಸಿದ್ದಾರೆ. ಡಿಸೆಂಬರ್ 16ರಂದು ಕಾಲು ನೋವಿದ್ದರೂ ಬೆಳಗಾವಿಯಲ್ಲಿ ನಡೆದ ನಮ್ಮ ಸಮಾಜದ ಎಲ್ಲ ಪಕ್ಷಗಳ ಶಾಸಕರ ಸಭೆಗೂ ಬೊಮ್ಮಾಯಿ ಅವರು ಬಂದು ಭರವಸೆ ಕೊಟ್ಟಿದ್ದರು. ಬಜೆಟ್ ಅಧಿವೇಶನದ ಒಳಗಾಗಿ ಸಮಾಜಕ್ಕೆ ಮೀಸಲಾತಿ ಕೊಡುತ್ತೇನೆ ಎಂದೂ ನಮ್ಮ ಸಮಾಜದ ಶಾಸಕರು, ಸಚಿವರಿಗೆ ಸಿಎಂ ಬೊಮ್ಮಯಿ ಮಾತು ಕೊಟ್ಟಿದ್ದರು.
ಆದಾಗ್ಯೂ ಮೀಸಲಾತಿ ವಿಚಾರದಲ್ಲಿ ಕಳೆದೆರಡು ತಿಂಗಳಿಂದ ಸಿಎಂ ಬೊಮ್ಮಾಯಿಯವರು ಸ್ಪಷ್ಟತೆ ತೋರಿಸುತ್ತಿಲ್ಲ. ಕೆಲವೇ ಕೆಲವು ದಿನಗಳ ಹಿಂದೆ ನಡೆದ ರಾಜ್ಯ ಸರಕಾರ ಮೀಸಲಾತಿ ಸಭೆಯಲ್ಲಿ ಹಾಲುಮತ ಸಮಾಜ, ವಾಲ್ಮೀಕಿ ಸಮಾಜ ಸೇರಿದಂತೆ ಹಲವರಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಪಂಚಮಸಾಲಿ ಸಮಾಜ ಒಂದೂವರೆ ವರ್ಷದಿಂದ ಹೋರಾಟ ಮಾಡುತ್ತಿದೆ. ಆದರೆ ಸಿಎಂ ಇದರ ಬಗ್ಗೆ ಮೌನವಾಗಿದ್ದಾರೆ. ಇದನ್ನು ನೋಡಿ ನಮಗೆಲ್ಲ ನಿರಾಶೆಯಾಗಿದೆ. ಬೇರೆಯವರಿಗೆ ಮಾತು ಕೊಟ್ಟಿದ್ದರೆ ನಾವು ಸುಮ್ಮನಿರುತ್ತಿದ್ದೆವು. ಯತ್ನಾಳ ಗೌಡರಿಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿಯವರು ಮಾತು ಕೊಟ್ಟಂತೆ ನಡೆದುಕೊಳ್ಳಲೇಬೇಕಾಗಿದೆ. ಈ ಸಮಾಜವನ್ನ ಕೈಬಿಡೋದಿಲ್ಲ. ಹೊಸ ಇತಿಹಾಸ ಸೃಷ್ಟಿ ಮಾಡುತ್ತೇನೆ. ಯಡಿಯೂರಪ್ಪನವರು ಕೊಡಬೇಕಿತ್ತು, ಕೊಟ್ಟಿಲ್ಲ. ನಾನು ಮೀಸಲಾತಿ ಕೊಟ್ಟು ಹೊಸ ಕ್ರಾಂತಿ ಮಾಡುತ್ತೇನೆಂದು ಯತ್ನಾಳರಿಗೆ ಸಿಎಂ ಬೊಮ್ಮಾಯಿ ಮಾತು ಕೊಟ್ಟಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರೇ 12ನೇ ಶತಮಾನದಲ್ಲಿ ಬಸವಣ್ಣನವರ ಮೇಲೆ ಲಿಂಗಾಯತರು ನಂಬಿಕೆ ಇಟ್ಟಂತೆ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ; ಕಳಂಕ ತರಬೇಡಿ: ಆದರೆ ಇನ್ನು ಮೂರು ದಿನಗಳು ಮಾತ್ರ ಅವಕಾಶ ಇದೆ. ಮಾರ್ಚ್ 30ರ ಒಳಗಾಗಿ ಆಯೋಗದ ವರದಿ ಪಡೆದುಕೊಳ್ಳಬೇಕು. ಏಪ್ರಿಲ್ 14ರ ಅಂಬೇಡ್ಕರ ಜಯಂತಿ ಒಳಗೆ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಮಾರ್ಚ್ 30ರ ಒಳಗಾಗಿ ಆಯೋಗದ ವರದಿ ಪಡೆದುಕೊಳ್ಳದಿದ್ದರೆ ಅದೆ ದಿನ ಬೆಳಿಗ್ಗೆ ಮುಂದಿನ ಹೋರಾಟದ ಬಗ್ಗೆ ಬೆಂಗಳೂರಿನಲ್ಲಿ ಸಮಾಜದ ಸಭೆ ನಡೆಸುತ್ತೇವೆ. ಅದಕ್ಕೂ ಸ್ಪಂದಿಸದಿದ್ದರೆ ಏಪ್ರಿಲ್ 14 ಅಂತಿಮ ಗಡುವು. ಏಪ್ರಿಲ್ 14ರಂದು ಕೂಡಲಸಂಗಮದಲ್ಲಿ ಸಭೆ ಕರೆದು ಅಂತಿಮ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುಡುಗಿದರು.
ಚುನಾವಣೆ ಹತ್ತಿರ ಬರುತ್ತಿದೆ, ಅದರ ಒಳಗಾಗಿ ಸಮಾಜಕ್ಕೆ ಮೀಸಲಾತಿ ಸಿಗಬೇಕು. ನಾವು ಜೋರಾಗಿ ಹಕ್ಕೊತ್ತಾಯ ಮಾಡದಿದ್ದರೆ ನಮ್ಮ ಹೋರಾಟ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ. ಮೀಸಲಾತಿಗಾಗಿ ಈಗಾಗಲೆ ನಾಲ್ಕು ಹೋರಾಟ ಮಾಡಿದ್ದೇವೆ. ಮೀಸಲಾತಿ ಕೊಡದಿದ್ದರೆ ನರಗುಂದ ಬಂಡಾಯದ ಹೋರಾಟದ ಮಾದರಿಯಲ್ಲಿ ಐದನೇ ಹೋರಾಟವಾದ್ರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕೆ ಅವಕಾಶ ಕೊಡಬೇಡಿ. ನಾವು ಶಾಂತಿ ಪ್ರಿಯರು, ನಿಮ್ಮನ್ನ ಬಹಳ ನಂಬಿದ್ದೇವೆ. ಹಿಂದೆ ನಮ್ಮ ನಿಜಲಿಂಗಪ್ಪನವರು, ಜೆ.ಎಚ್.ಪಟೇಲ್ ರನ್ನು ನಂಬಿರಲಿಲ್ಲ, ಬೊಮ್ಮಾಯಿಯವರನ್ನು ಅಷ್ಟು ನಂಬಿದ್ದೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೆ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಮೇಲೆ ಲಿಂಗಾಯತರು ನಂಬಿಕೆ ಇಟ್ಟಷ್ಟು ನಂಬಿಕೆ ಇಟ್ಟಿದ್ದೇವೆ. ನಂಬಿಕೆ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಕಳಂಕ ತರಬೇಡಿ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವುದರಿಂದ ನಿಮಗೆ ಏನಾದರೂ ತೊಂದರೆ ಆಗುವುದಾದರೆ, ಯಾರದಾದ್ರೂ ಒತ್ತಡವಿದ್ದರೆ ಬಹಿರಂಗವಾಗಿ ಹೇಳಿಬಿಡಿ. ಹಿಂದೆ ಯಡಿಯೂರಪ್ಪನವರು ಕೈಕೊಟ್ಟರು, ಈಗ ಬೊಮ್ಮಾಯಿಯವರು ಕೈಕೊಟ್ಟರು ಅನ್ನುತ್ತೇವೆ. ಮುಂದಿನ ದಿನಗಳಲ್ಲಿ ಭಗವಂತ ಶಕ್ತಿಕೊಟ್ಟರೆ ಹೋರಾಟ ಮಾಡುತ್ತೇವೆ. ನಿಮ್ಮ ತಂದೆ ಸಿಎಂ ಆಗುವುದಕ್ಕೆ, ನೀವು ಸಿಎಂ ಆಗುವುದಕ್ಕೆ ನಮ್ಮ ಸಮಾಜದ ದೊಡ್ಡ ಆಶೀರ್ವಾದವಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಮೀಸಲಾತಿ ವಿಚಾರದಲ್ಲಿ ಸರಕಾರದ ವಿಳಂಬ ಧೋರಣೆ ನಾವು ಸಹಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಮ್ಮತೀವ್ರ ಅಸಮಾಧಾನ ಹೊರಹಾಕಿದರು.