ಹಾವೇರಿ: ಸಿದ್ದರಾಮಯ್ಯ ಆರೋಪಕ್ಕೆ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದು, ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ. ಬಿ.ಎಲ್.ಸಂತೋಷ್ ಬಲವಂತವಾಗಿ ಪ್ರಚಾರಕ್ಕೆ ಕರೆ ತರುತ್ತಿದ್ದಾರೆ. ಸಿದ್ದರಾಮಯ್ಯಗೆ ಸಂತೋಷ್ ಫೋನ್ ಮಾಡಿ ಹೇಳಿದ್ರಾ? ಬಿಎಸ್ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನೂ ಬೇಕಾಗಿಲ್ಲ ಎಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಉಪಚುನಾವಣೆಯ ಪ್ರಚಾರದ ವೇಳೆ ಹೇಳಿದ್ದಾರೆ.
ಸಿದ್ದರಾಮಯ್ಯ ಕೇಳಿಕೊಂಡು ಯಡಿಯೂರಪ್ಪ ಬರಬೇಕಾ? ಇವರ ಊಹೆಗೆ ನಾವು ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರು ಪಕ್ಷದ ಋಣ ತೀರಿಸುವುದಾಗಿ ಹೇಳಿದ್ದಾರೆ. ಉಪಚುನಾವಣೆ ಪ್ರಚಾರಕ್ಕೆ ಬಿಎಸ್ವೈ ಬಂದೇ ಬರುತ್ತಾರೆ ಎಂದು ಚೀರನಹಳ್ಳಿ ಗ್ರಾಮದಲ್ಲಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಆಡಳಿತ ಪಕ್ಷ ಬಿಜೆಪಿಯಲ್ಲಿ ವಿಸಿಟಿಂಗ್ ಪ್ರೊಫೆಸರ್ಗಳಂತಾದ ಸಚಿವರು!
ಹಾನಗಲ್ ಉಪಚುನಾವಣೆ ಹಿನ್ನೆಲೆ ಚುನಾವಣಾ ಜವಾಬ್ದಾರಿ ವಹಿಸಿದ್ದರೂ ಕ್ಷೇತ್ರದಲ್ಲಿ ಇನ್ನೂ ಪೂರ್ತಿಯಾಗಿ ಸಚಿವರು ತೊಡಗಿಸಿಕೊಂಡಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಸಚಿವರಾದ ಮುರುಗೇಶ್ ನಿರಾಣಿ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಿವರಾಮ ಹೆಬ್ಬಾರ್, ಸುನೀಲ್ ಕುಮಾರ್, ಮುನಿರತ್ನ ಅವರಿಗೆ ಪೂರ್ತಿ ಜವಾಬ್ದಾರಿ ನೀಡಲಾಗಿದೆ. ಆದರೆ ಇಂದು (ಅಕ್ಟೋಬರ್ 16) ದುಬೈಗೆ ತೆರಳಿರುವ ಹಾನಗಲ್ ಚುನಾವಣಾ ಉಸ್ತುವಾರಿ ಮುರುಗೇಶ್ ನಿರಾಣಿ, ಅಕ್ಟೋಬರ್ 19 ರಂದು ರಾತ್ರಿ ದುಬೈನಿಂದ ವಾಪಾಸಾಗಲಿದ್ದಾರೆ.
ಸಚಿವರಾದ ಜೆ.ಸಿ. ಮಾಧುಸ್ವಾಮಿ, ಸುನೀಲ್ ಕುಮಾರ್, ಮುನಿರತ್ನ ಇನ್ನೂ ಹಾನಗಲ್ ನತ್ತ ತೆರಳಿಲ್ಲ. ಎರಡು ಬಾರಿ ಸಚಿವ ನಿರಾಣಿ, ಬಿ.ಸಿ. ಪಾಟೀಲ್ ಮತ್ತು ಒಂದು ಬಾರಿ ಸಚಿವ ಶಿವರಾಮ ಹೆಬ್ಬಾರ್ ಈವರೆಗೆ ಭೇಟಿ ನೀಡಿದ್ದಾರೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತ್ರ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇನ್ನೂ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ ವೇಳೆ ಮಾತ್ರ ತೆರಳಿದ್ದು, ಮತ್ತೆ ಅತ್ತ ಮುಖ ಮಾಡಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಇದನ್ನೂ ಓದಿ:
ರೈತರ ಮೇಲೆ ಬಿ.ಎಸ್.ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ
ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸಿಎಂ ಬೊಮ್ಮಾಯಿ; ಉಪಚುನಾವಣಾ ಪ್ರಚಾರದ ವಿಚಾರವಾಗಿ ಚರ್ಚೆ
Published On - 7:20 pm, Sat, 16 October 21