Hangal Byelections: ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ; ಹಾನಗಲ್‌ನಲ್ಲಿ ಭರ್ಜರಿ ಪ್ರಚಾರ
ಕಂಬಳಿ ನೇಯುವವರು ಶ್ರಮ ಜೀವಿಗಳು. ಎಲ್ಲಾ ವೃತ್ತಿ ಬಾಂಧವರು ನನ್ನ ಸಮುದಾಯದವರು. ಯಾರೊಬ್ಬರ ಬಗ್ಗೆಯೂ ಕೀಳರಿಮೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಹಾವೇರಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರಿಂದ ಎಲ್ಲಾ ಸಮುದಾಯ ಒಡೆಯುವ ಕೆಲಸ ಆಗುತ್ತಿದೆ. ಬರೀ ಜಾತಿ, ಮತ, ಪಂಥ ಹೆಸರಿನಲ್ಲಿ ರಾಜಕಾರಣ ಮಾಡ್ತಿದ್ದಾರೆ. ಅಲ್ಪಸಂಖ್ಯಾತರಲ್ಲೂ ಒಳ ಜಾತಿ ಹುಡುಕಿದ್ದಾರೆ ಎಂದು ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ವ್ಯಾಪ್ತಿಯ ಆಡೂರು ಗ್ರಾಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. 5 ವರ್ಷ ಅಧಿಕಾರದಲ್ಲಿ ಇದ್ದರಲ್ಲ ನೀವು ಏನು ಮಾಡಿದ್ದೀರಿ? ಹಾವೇರಿ ಜಿಲ್ಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಬದುಕು ಮೂರು ದಿನದ್ದು, ಏನಾದರೂ ಮಾಡಿ ಹೋಗಬೇಕು. ಫುಡ್ ಕಿಟ್ ಕೊಟ್ಟಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮುಂದೆ ಚುನಾವಣೆ ಬರುತ್ತೆಂದು ಫುಡ್ ಕಿಟ್ ಹಂಚಿದ್ದಾರೆ. ಚಹಾ ಪುಡಿ ರೀತಿ ಕಾಂಗ್ರೆಸ್ ಪಾರ್ಟಿ ಪುಡಿ ಪುಡಿ ಮಾಡಬೇಕು. ನೀವು ಇದನ್ನು ಅ.30ರಂದು ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಕೇಳಿಕೊಂಡಿದ್ದಾರೆ.
ಬಿಜೆಪಿ, ಸಿ.ಎಂ.ಉದಾಸಿ ಏನ್ ಮಾಡಿದ್ದಾರೆಂದು ಕೇಳುತ್ತಾರೆ. ಸಿದ್ದರಾಮಯ್ಯ ಕಣ್ಣು ಮುಚ್ಚಿ ಕೇಳಿದ್ರೆ ಹೇಗೆ, ಕಣ್ತೆರೆದು ನೋಡ್ಲಿ. ನೀವು ಯಾವ ರಸ್ತೆಗೆ ಹೋಗ್ತೀರೋ ಆ ರಸ್ತೆ ಮಾಡಿಸಿದ್ದು ಉದಾಸಿ. ಎಲ್ಲಾ ನೀರಾವರಿ ಯೋಜನೆ ಜಾರಿಗೊಳಿಸಿದ್ದು ದಿ.ಉದಾಸಿರವರು ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನ್ಮಾಡಿದೆ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಅತಿ ಹೆಚ್ಚು ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಓದುವ ಟೈಮಲ್ಲಿ ಮಕ್ಕಳಿಗೆ ಪೆನ್ ಬದಲು ಸ್ಪ್ಯಾನರ್ ಕೊಡ್ತಾರೆ. ಅಂತಹ ಮಕ್ಕಳಿಗೆ ಕಾಂಗ್ರೆಸ್ ಪಕ್ಷ ಸಹಾಯ ಮಾಡಲೇ ಇಲ್ಲ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕಂಬಳಿ ನೇಯುವವರು, ಕುರಿ ಕಾಯುವವರು ನಮ್ಮವರು. ಎಲ್ಲರೂ ನನ್ನ ಸಮುದಾಯದವರು. ಬದುಕನ್ನು ಹಂಚಿಕೊಂಡು ಬಾಳುವವರು ನಮ್ಮ ಸಮುದಾಯ. ಕಂಬಳಿ ನೇಯುವವರು ಶ್ರಮ ಜೀವಿಗಳು. ಎಲ್ಲಾ ವೃತ್ತಿ ಬಾಂಧವರು ನನ್ನ ಸಮುದಾಯದವರು. ಯಾರೊಬ್ಬರ ಬಗ್ಗೆಯೂ ಕೀಳರಿಮೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಸಲೀಂ ವಿರುದ್ಧ ಮಾತ್ರ ಏಕೆ ಕ್ರಮ? ಕೆಎಸ್ ಈಶ್ವರಪ್ಪ ಪ್ರಶ್ನೆ ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಸ್ಪಷ್ಟನೆ ನೀಡಬೇಕು. ಡಿಕೆಶಿ, ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ ಎಂದು ಅಪೇಕ್ಷಿಸುವೆ. ಸಲೀಂ, ಉಗ್ರಪ್ಪ ಪಿಸುಮಾತಿನ ವಿಚಾರದಲ್ಲಿ ಸಲೀಂ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಾವು ಅಲ್ಪಸಂಖ್ಯಾತರ ಉದ್ಧಾರಕರೆಂದು ಹೇಳಿಕೊಳ್ಳುತ್ತಾರೆ. ಆದ್ರೆ ಸಲೀಂ ವಿರುದ್ಧ ಮಾತ್ರ ಯಾಕೆ ಕ್ರಮ ತೆಗೆದುಕೊಂಡ್ರಿ? ಎಂದು ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಜಾತ್ಯತೀತ ಜನತಾ ದಳ ಬಿಜೆಪಿ ಬಿ ಟೀಂ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಯಾವುದೇ ಪಕ್ಷದ ಜೊತೆ ಹೋಗುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲೂ ಸ್ವತಂತ್ರವಾಗಿಯೇ ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಹಳಷ್ಟು ಜನ ಸಿಎಂ ಗಾದಿಗೆ ಟವೆಲ್ ಹಾಕಿ ಕಾಯುತ್ತಿದ್ದಾರೆ: ನಳಿನ್ ಕುಮಾರ್ ಕಟೀಲ್ ಟಾಂಗ್ ಡಿಕೆಶಿ, ಸಿದ್ದರಾಮಯ್ಯಗೆ ಪರೋಕ್ಷವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಟಾಂಗ್ ಕೊಟ್ಟಿದ್ದಾರೆ. ಬಹಳಷ್ಟು ಜನ ಸಿಎಂ ಗಾದಿಗೆ ಟವೆಲ್ ಹಾಕಿ ಕಾಯುತ್ತಿದ್ದಾರೆ. ಬೈಎಲೆಕ್ಷನ್ ಫಲಿತಾಂಶದ ಮೂಲಕ ಅವರಿಗೆ ಗೊತ್ತಾಗಬೇಕು, ಅವರಿಗೆ ಸಿಎಂ ಗಾದಿ ಸಿಗಲ್ಲವೆಂದು ಸ್ಪಷ್ಟವಾಗಿ ತಿಳಿಯಬೇಕು ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕಟೀಲು ಮಾತನಾಡಿದ್ದಾರೆ. ಕಾಂಗ್ರೆಸ್ ಸೋಲಿನ ಭೀತಿಯಿಂದ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲು ಆರೋಪ ಮಾಡಿದ್ದಾರೆ.
ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, 3 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ನಮ್ಮ ವಿಜಯಯಾತ್ರೆಯ ಸಂಕೇತವಾಗಿದೆ. ಉಪಚುನಾವಣೆ ಫಲಿತಾಂಶ ಕೂಡ ಇದೇ ರೀತಿಯಾಗಿರುತ್ತೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ. ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಇದನ್ನೂ ಓದಿ: Sindagi Byelections 2021: ರಾಜಕೀಯ ಪಕ್ಷಗಳಿಂದ ಭರ್ಜರಿ ಮತಬೇಟೆ; ನಾಯಕರ ಹೇಳಿಕೆಗಳೇನು? ಇಲ್ಲಿದೆ ವಿವರ
ಇದನ್ನೂ ಓದಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕದನ; ವಾರ್ಡ್ಗೆ ತಲಾ 10 ಜನ ಬಿಜೆಪಿ ಕಾರ್ಯಕರ್ತರ ನೇಮಕ
Published On - 7:05 pm, Tue, 26 October 21