ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ: ಸಂತ್ರಸ್ತ ಮಹಿಳೆಯ ನೆರವಿಗೆ ಧಾವಿಸದ ಕಾಂಗ್ರೆಸ್ ಸರ್ಕಾರ
ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯದ ವೇಳೆ ಸ್ಥಳಕ್ಕೆ ದೌಡಾಯಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಿ ಪರಿಹಾರ ನೀಡಿತ್ತು. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ಮುಸ್ಲಿಂ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದು ಐದು ದಿನ ಕಳೆದರೂ ಇದುವರೆಗೆ ಸರ್ಕಾರ ಸಂತ್ರಸ್ತೆಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಮೌನಕ್ಕೆ ಜಾರಿದ್ದಾರೆ.
ಹಾವೇರಿ, ಜ.13: ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯದ ವೇಳೆ ಸ್ಥಳಕ್ಕೆ ದೌಡಾಯಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಿ ಪರಿಹಾರ ನೀಡಿತ್ತು. ಆದರೆ, ಹಾವೇರಿ (Haveri) ಜಿಲ್ಲೆಯ ಹಾನಗಲ್ನಲ್ಲಿ ಗ್ಯಾಂಗ್ ರೇಪ್ ನಡೆದು ಐದು ದಿನಗಳು ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸೇರಿದಂತೆ ಯಾವೊಬ್ಬ ನಾಯಕರೂ ಸಂತ್ರಸ್ತೆಯನ್ನು ಭೇಟಿಯಾಗಿಲ್ಲ.
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಐದು ದಿನಗಳು ಕಳೆದರೂ ರಾಜ್ಯ ಸರ್ಕಾರ ಸಂತ್ರಸ್ತೆಯ ನೆರವಿಗೆ ದಾವಿಸದೆ ಕ್ರಮದ ಭರವಸೆ ನೀಡಿ ಸುಮ್ಮನಾಗಿಬಿಟ್ಟಿದೆ. ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸವೂ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಿಲ್ಲ, ಪ್ರಕಣದ ಬಗ್ಗೆ ಮಾತೇ ಆಡುತ್ತಿಲ್ಲ.
ಇದನ್ನೂ ಓದಿ: ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಬೆನ್ನಲ್ಲೇ ಮುಸ್ಲಿಂ ಯುವಕನಿಂದ ಹಿಂದೂ ಯುವತಿಯ ಕಿಡ್ನಾಪ್!
ಜಿಲ್ಲೆಯ ಯಾವೊಬ್ಬ ಶಾಸಕರು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣು ಮುಚ್ಚಿ ಕುಳಿತಿದ್ದಾರೆ. ಬೆಳಗಾವಿಯಲ್ಲಿ ಸಂತ್ರಸ್ತೆಗೆ ಪರಿಹಾರ ನೀಡಿದ್ದ ಸರಕಾರ, ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇದುವರೆಗೂ ಪರಿಹಾರ ಘೋಷಿಸಿಲ್ಲ. ಕೃತ್ಯದ ನಂತರ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಸಂತ್ರಸ್ತೆಗೆ ಧೈರ್ಯ ತುಂಬಿದ ಬಿಜೆಪಿ ನಾಯಕರು
ಗ್ಯಾಂಗ್ರೇಪ್ಗೆ ಒಳಗಾದ ಸಂತ್ರಸ್ತ ಮಹಿಳೆಯನ್ನು ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಕೇಂದ್ರಕ್ಕೆ ಭೇಟಿ ನೀಡಿದ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಅನಿಲ್ ಥಾಮಸ್, ಪ್ರಕರಣದಲ್ಲಿ ಭಾಗಿಯಾದ ಏಳು ಆರೋಪಿಗಳನ್ನು ಬಂಧಿಸಬೇಕು. ಒಂದು ಸಮುದಾಯದ ಓಲೈಕೆ ರಾಜ್ಯ ಸರ್ಕಾರ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕದೆ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು. ಏಳು ಆರೋಪಿಗಳು ಜೀವನಪೂರ್ತಿ ಜೈಲಿನಲ್ಲೇ ಕೊಳೆಯಬೇಕು. ಕೆಲ ಕೇಸ್ ವಿಡ್ರಾ ಮಾಡುವುದನ್ನ ನಾವು ನೋಡಿದ್ದೇವೆ. ಹಾಗೆ ಈ ಗ್ಯಾಂಗ್ ರೇಪ್ ಪ್ರಕರಣ ಆಗಬಾರದು ಎಂದರು.
ನಾಳೆ ಸಂತ್ರಸ್ತೆಯನ್ನು ಭೇಟಿ ಮಾಡಲಿರುವ ಬಿಜೆಪಿ ನಿಯೋಗ
ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಸಂತ್ರಸ್ತೆಯನ್ನು ನಾಳೆ ಬಿಜೆಪಿ ನಿಯೋಗ ಭೇಟಿಯಾಗಲಿದೆ. ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಕೆ.ಮಂಜುಳಾ ನೇತೃತ್ವದ ನಿಯೋಗ ಭೇಟಿ ನೀಡಲಿದ್ದು, ಭಾರತಿ ಶೆಟ್ಟಿ ಹಾಗೂ ಮಾಳವಿಕಾ ಕೂಡ ಜೊತೆಗಿರಲಿದ್ದಾರೆ. ಚಿಕ್ಕಬಾಸೂರಿನಲ್ಲಿ ನಡೆಯಲಿರುವ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ನಾಳೆ ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೆಎಸ್ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ಸಂತ್ರಸ್ತೆಯನ್ನು ಭೇಟಿಯಾಗುವ ಸಾಧ್ಯತೆ ಇದೆ.
ಬಲಿಷ್ಠವಾದ ಸೆಕ್ಷನ್ ಹಾಕಿ ಈ ಕೇಸ್ ಪೊಲೀಸರು ಮುಂದುವರೆಸಬೇಕು. ಸ್ಥಳೀಯ ಪೋಲೀಸರಿಗೆ ಪ್ರಕರಣ ಬೇದಿಸಲು ಆಗದಿದ್ದರೆ CBIಗೆ ಹಸ್ತಾಂತರಿಸಿ ಪ್ರಕರಣ ಭೇದಿಸಬೇಕು. ರಾಜ್ಯದಲ್ಲಿ ಪಿಎಫ್ಐ ಸಂಘಟನೆ ಬ್ಯಾನ್ ಆಗಿದೆ. ಅವರು ಬೇರೆ ಮೂಲದಿಂದ ಕೆಲಸ ಮಾಡುತ್ತಿರಬಹುದು. ಕಾಂಗ್ರೆಸ್ ಸರ್ಕಾರ ಉಳಿಸುತ್ತದೆ ಎಂಬ ನಂಬಿಕೆ ಇಂತಹವರಿಗೆ ಇದೆ. ಹೀಗಾಗಿ ಇಂತಹ ಪ್ರಕರಣ ಮಾಡಲು ಮುಂದಾಗುತ್ತಾರೆ. ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಅಮಾಯಕರು ಅಂತ ಬಿಟ್ಟರು. ಈ ಸರ್ಕಾರ ಒಂದು ಸಮಾಜದ ಓಲೈಕೆ ಮಾಡುತ್ತಿರುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.
ಏನಿದು ಪ್ರಕರಣ?
ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್ನ ರೂಮ್ನಲ್ಲಿ ಮುಸ್ಲಿಂ ವಿವಾಹಿತ ಮಹಿಳೆಯೊಂದಿಗೆ ಹಿಂದೂ ವಿವಾಹಿತ ಪುರುಷ ಇರುವ ವಿಚಾರ ತಿಳಿದು ದಾಳಿ ನಡೆಸಿದ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದರು. ಬಳಿಕ ಮಹಿಳೆಯನ್ನು ಕಾರಿನಲ್ಲಿ ಕೂರಿಸಿ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್ ಆಗಿತ್ತು.
ಇದಾದ ನಂತರ ಆಕೆಯನ್ನು ಕಾರಿನಲ್ಲಿ ಕೂರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿತ್ತು. ಒಬ್ಬರಾದ ಮೇಲೆ ಒಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಹೇಳಿಕೆ ನೀಡಿದ್ದರು. ಸಂತ್ರಸ್ತೆಯ ಪತಿ ಕೂಡ ರೇಪ್ ಬಗ್ಗೆ ಆರೋಪಿಸಿದ್ದು, ಇದರ ವಿಡಿಯೋ ಇದೆ ಎಂದಿದ್ದರು.
ವರದಿ: ರವಿ ಹುಗಾರ್, ಟಿವಿ9 ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Sat, 13 January 24