Lok Sabha Election: ಬಿಜೆಪಿ ಭದ್ರಕೊಟೆ ಹಾವೇರಿಗೆ ಲಗ್ಗೆ ಇಡಲು ಕಾಂಗ್ರೆಸ್ ಹರಸಾಹಸ, ಯಾರಿಗೆಲ್ಲ ಸಿಗಲಿದೆ ಲೋಕಸಭಾ ಟಿಕೆಟ್
ಹಾಲಿ ಸಂಸದ ಶಿವಕುಮಾರ್ ಉದಾಸಿ ಚುಣಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಎರಡು ಪಕ್ಷಗಳಲ್ಲಿ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ಬಾರಿ ಹಾವೇರಿ ಜಿಲ್ಲೆಯವರಾದ ಶಿವಕುಮಾರ್ ಉದಾಸಿ ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಬಿಜೆಪಿ ಭದ್ರ ಕೋಟೆಯಾದ ಹಾವೇರಿ ಲೋಕಸಭಾ ಕ್ಷೇತ್ರವು ಹಾವೇರಿಯ ಐದು ವಿಧಾನಸಭಾ ಕ್ಷೇತ್ರ ಗದಗ ಜಿಲ್ಲೆಯ ಮೂರು ಕ್ಷೇತ್ರ ಹೊಂದಿದ್ದು ಕಾಂಗ್ರೆಸ್ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದೆ.
ಹಾವೇರಿ, ಡಿ.21: ಲೋಕಸಭೆ ಚುನಾವಣೆಗೆ (Lok Sabha Election) ಇನ್ನು ಮೂರು ತಿಂಗಳು ಬಾಕಿ ಉಳಿದಿವೆ. ಅಖಂಡ ಧಾರವಾಡ ಜಿಲ್ಲೆಯಿಂದ 2008ರಲ್ಲಿ ಬೆರ್ಪಟ್ಟು ಹಾವೇರಿ ಲೋಕಸಭೆಗೆ ಪ್ರತ್ಯೆಕ ಕ್ಷೇತ್ರವಾದ ನಂತರ ಸತತ ಮೂರು ಬಾರಿ ಮತದಾರ ಬಿಜೆಪಿಗೆ ಮಣೆ ಹಾಕಿದ್ದು ದಿವಂಗತ ಸಿ ಎಮ್ ಉದಾಸಿ ಅವರ ವರ್ಚಸ್ಸಿನಿಂದ ಪುತ್ರನಿಗೆ ಲೋಕಸಭೆ ಟಿಕೆಟ್ ಕೊಡಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವಲ್ಲಿ ಯಶಸ್ಸು ಕಂಡಿದ್ದರು. ಇದೀಗ ಹಾವೇರಿ, ಗದಗ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಹಾಲಿ ಸಂಸದ ಶಿವಕುಮಾರ್ ಉದಾಸಿ ಚುಣಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಎರಡು ಪಕ್ಷಗಳಲ್ಲಿ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ಬಾರಿ ಹಾವೇರಿ ಜಿಲ್ಲೆಯವರಾದ ಶಿವಕುಮಾರ್ ಉದಾಸಿ (Shivakumar Udasi) ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಬಿಜೆಪಿ (BJP) ಭದ್ರ ಕೋಟೆಯಾದ ಹಾವೇರಿ ಲೋಕಸಭಾ ಕ್ಷೇತ್ರವು ಹಾವೇರಿಯ ಐದು ವಿಧಾನಸಭಾ ಕ್ಷೇತ್ರ ಗದಗ ಜಿಲ್ಲೆಯ ಮೂರು ಕ್ಷೇತ್ರ ಹೊಂದಿದ್ದು ಕಾಂಗ್ರೆಸ್ (Congress) ಗೆಲುವು ಸಾಧಿಸಲು ಹರಸಾಹಸ ಪಡುತ್ತಿದೆ.
ಮೂರು ಬಾರಿ ಹಾವೇರಿ ಜಿಲ್ಲೆಯವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಈ ಸಲ ಅಕಾಂಕ್ಷಿಗಳ ಸಂಖ್ಯೆ ಆಂಜನೇಯ ಬಾಲದ ರೀತಿ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೂ ಹಲವಾರು ಜನ ನೀರಿಕ್ಷೆ ಇಟ್ಟು ಕೊಂಡಿದ್ದಾರೆ. ಇನ್ನು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿಯ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದು ಉಳಿದ ಏಳು ಕಾಂಗ್ರೆಸ್ ಶಾಸಕರನ್ನು ಹೊಂದಿದೆ. ಇದು ಬಿಜೆಪಿ ಆಕಾಂಕ್ಷಿಗಳಿಗೆ ಸವಾಲಾಗಿದೆ. ಆದರೆ ಕಳೆದ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಶಿವಕುಮಾರ್ ಉದಾಸಿಯವರ ವಿರುದ್ದ ಎರಡು ಸಾರಿ ಕಾಂಗ್ರೆಸ್ ಎಂಎಲ್ಸಿ ಕಾರ್ಯಾಧ್ಯಕ್ಷ ಸಲಿಂ ಅಹಮದ್ ಸೋಲನ್ನು ಕಂಡರೆ, ಒಂದು ಸಲ ಮಾಜಿ ಶಾಸಕ ಸಚಿವ ಎಚ್ ಕೆ ಪಾಟೀಲ್ ಸಹೋದರ ಡಿ ಆರ್ ಪಾಟೀಲ್ ಸೋಲನುಭವಿಸಿದ್ದರು. 350 ಕಿಮಿ ವಿಸ್ತೀರ್ಣ ಹೊಂದಿದ 17 ಲಕ್ಷ ಮತದಾರರನ್ನು ಹೊಂದಿದ ದೊಡ್ಡ ಕ್ಷೇತ್ರ ಇದಾಗಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾಜಿ, ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ ಎರಡು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿಂದ ಸಕ್ರೀಯರಾಗಿ ಓಡಾಡುತ್ತಿದ್ದಾರೆ.
ಮಾಜಿ ಸಚಿವ ಬಿಸಿ ಪಾಟೀಲ್ ಕೂಡ ಅಖಾಡದಲ್ಲಿದ್ದು, ಅವರು ಸಹ ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಬಿಜೆಪಿ ಯುವ ಮೊರ್ಚಾದಿಂದ ಪವನಕುಮಾರ್ ಮಲ್ಲಾಡದ, ರೈತ ಮೊರ್ಚಾದ ಕಾರ್ಯದರ್ಶಿ ಹಿರೆಕೆರೂರಿನ ಪಾಲಾಕ್ಷಗೌಡ ಪಾಟೀಲ ಸಹ ಅಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಇನ್ನು ಗದಗ ಜಿಲ್ಲೆಯವರಾದ ಶೇಖರ ಸಜ್ಜನರ್ ಪೈಪೋಟಿಯಲ್ಲಿದ್ದಾರೆ. ಇವರೆಲ್ಲರನ್ನು ಹೊರತು ಪಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿವರಿಗೂ ಸಹ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣದತ್ತ ಹೋಗುತ್ತಾರೆ ಎನ್ನುವ ಮಾತು ಸಹ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇನ್ನು ಗದಗ ಮೂಲದವರಾದ ಅವರು ಸಹ ಹಲವು ವರ್ಷಗಳಿಂದ ಗದಗದಲ್ಲಿ ಬಿಜೆಪಿ ಪಕ್ಷದಲ್ಲಿ ದುಡಿದವರಾಗಿ ಹಾವೇರಿಯಲ್ಲಿ ಉದ್ಯೋಗ ಮೇಳದಂತಹ ಯಶಸ್ವಿ ಕಾರ್ಯಕ್ರಮಗಳ ಮೂಲಕ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಈ ಸಲದ ಬಿಜೆಪಿ ಟಿಕೆಟ್ ಮಾತ್ರ ಸಾಮಾನ್ಯ ಕಾರ್ಯಕರ್ತನಿಗೆ ನೀಡಲಾಗುತ್ತದೆ ಎಂಬುದು ಪಕ್ಷದ ಒಳಗೊಳಗೆ ಹರಿದಾಡುತ್ತಿರುವ ಮಾತುಗಳು.
ಕಾಂಗ್ರೆಸ್ ನಿಂದ ಶಾಸಕ ಆನಂದ ಗಡ್ಡದೆವರಮಠ ಪುತ್ರ ಸಹ ಎರಡು ಜಿಲ್ಲೆಗಳಲ್ಲಿ ಸಂಚರಿಸಿ ಸಂಘಟನೆ ಮಾಡುತ್ತಿದ್ದಾರೆ. ಇನ್ನು ಅಚ್ಚರಿಯ ಸಂಗತಿಗಳು ಅಂದರೆ ಹಾನಗಲ್ ಮೂಲದ ಹೈಕೋರ್ಟ್ ನ್ಯಾಯವಾದಿ ಸಂದೀಪ್ ಪಾಟೀಲ ಎಂಬುವರು ಹೈಕಮಾಂಡ್ ಮಟ್ಟದಲ್ಲಿ ಎರಡು ಪಕ್ಷಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು ಯಾವ ಪಕ್ಷಗಳು ಅವಕಾಶ ಕೊಟ್ಟರೂ ಸ್ಪರ್ಧೆಗೆ ಸಿದ್ದ ಎನ್ನುತ್ತಿದ್ದಾರೆ. ಕೊನೆಯದಾಗಿ ಎರಡು ಪಕ್ಷಗಳ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಹಾವೇರಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ