ಹಾವೇರಿ, ಡಿಸೆಂಬರ್ 20: ಜಮೀನಿನಲ್ಲಿ ಬೆಳೆದು ನಿಂತಿದ್ದ ಈರುಳ್ಳಿ (onions) ಯನ್ನು ರಾತ್ರೋರಾತ್ರಿ ಖದೀಮರು ಕದ್ದುಕೊಂಡು ಪರಾರಿಯಾಗಿರುವ ಘಟನೆ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ಮಾದೇವಪ್ಪ ಹಳೇರಿತ್ತಿ ಎಂಬುವರು ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ರೈತ ಮಾಹದೇವಪ್ಪ ಕಣ್ಣೀರು ಹಾಕಿದ್ದಾನೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಜಮೀನಿನಲ್ಲಿದ್ದು ಈರುಳ್ಳಿ ಬೆಳೆಯನ್ನು ಜೋಪಾನ ಮಾಡಿದ್ದರು.
ರೈತನ ಶ್ರಮಕ್ಕೆ ತಕ್ಕಂತೆ ಈರುಳ್ಳಿ ಬೆಳೆ ಉತ್ತಮವಾಗಿಯೇ ಬೆಳೆದಿತ್ತು. ಕಳೆದ ಕೆಲವು ದಿನಗಳ ಹಿಂದಷ್ಟೇ ಮೊದಲ ಹಂತದ ಕಟಾವು ಮಾಡಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಮೂರೂವರೆ ಸಾವಿರ ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡಿ ಬಂದಿದ್ದರು. ಜಮೀನಿನಲ್ಲಿ ಸಾಕಷ್ಟು ಪ್ರಮಾಣದ ಈರುಳ್ಳಿ ಬೆಳೆ ಇತ್ತು. ಕನಿಷ್ಠ ಅಂದರು ಇನ್ನೂ 70 ರಿಂದ 80 ಸಾವಿರ ರೂ. ಹಣ ಬರುವಷ್ಟು ಈರುಳ್ಳಿ ಜಮೀನಿನಲ್ಲಿತ್ತು.
ಇದನ್ನೂ ಓದಿ: ಚಿತ್ರದುರ್ಗ: ಕೆಜಿಗೆ 300 ರೂ ಏರಿಕೆ ಬೆನ್ನಲೇ 6 ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ
ಇನ್ನೊಂದೆರಡು ದಿನಗಳಲ್ಲಿ ಅದನ್ನೂ ಕಟಾವು ಮಾಡಿ ಮಾರಾಟ ಮಾಡಲು ರೈತ ಯೋಚಿಸಿದ್ದ. ಪ್ರತಿದಿನ ರಾತ್ರಿ ಈರುಳ್ಳಿ ಜಮೀನಿನಲ್ಲೇ ಮಲಗುತ್ತಿದ್ದ. ಆದರೆ ರೈತ ಮಾದೇವಪ್ಪ ಇನ್ನೊಂದು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಮಷೀನ್ಗೆ ಹಾಕಿಸಿದ್ದರಿಂದ ಈರುಳ್ಳಿ ಜಮೀನಿನ ಬದಲು ಮೆಕ್ಕೆಜೋಳದ ಜಮೀನಿನಲ್ಲಿ ಮಲಗಿಕೊಂಡಿದ್ದ.
ಇದನ್ನೂ ಓದಿ: ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ ಅಂತ ರೈತರಿಗೆ ಇಲ್ಲ ಖುಷಿ, ಕಳ್ಳರ ಹಾವಳಿಗೆ ಗದಗ ಅನ್ನದಾತರು ಬೆಚ್ಚಿಬಿದ್ದಿದ್ದಾರೆ!
ಈರುಳ್ಳಿ ಜಮೀನಿನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖದೀಮರ ತಂಡ ರಾತ್ರೋರಾತ್ರಿ ಈಡಿ ಜಮೀನಿನಲ್ಲಿ ಬೆಳೆದಿದ್ದ ದೊಡ್ಡ ದೊಡ್ಡ ಗಾತ್ರದ ಈರುಳ್ಳಿಯನ್ನೇ ಕದ್ದುಕೊಂಡು ಪರಾರಿ ಆಗಿದ್ದಾರೆ. ಬೆಳಿಗ್ಗೆ ರೈತ ಮಾದೇವಪ್ಪ ಜಮೀನಿಗೆ ಬಂದಾಗ ಈರುಳ್ಳಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈರುಳ್ಳಿ ಕಳ್ಳತನ ಆಗಿರುವ ಬಗ್ಗೆ ರೈತ ಮಾದೇವಪ್ಪ ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಗುತ್ತಲ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.