R Shankar: ಬಿಜೆಪಿ ಎಂಎಲ್ಸಿ ಆರ್.ಶಂಕರ್ ವಿರುದ್ಧ ಎಫ್ಐಆರ್ ದಾಖಲು
ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ರಾಣೆಬೆನ್ನೂರು ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಎಂಎಲ್ಸಿ ಆರ್.ಶಂಕರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು, ಆಮಿಷಗಳನ್ನು ಒಡ್ಡುತ್ತಿದ್ದಾರೆ. ಇದೀಗ ಚುನಾವಣೆ ಹಿನ್ನಲೆ ಮತದಾರರಿಗೆ ಆಮಿಷವೊಡ್ಡಿದ ಪ್ರಕರಣ ಸಂಬಂಧ ಬಿಜೆಪಿ ಎಂಎಲ್ಸಿ ಆರ್.ಶಂಕರ್ (BJP MLC R. Shankar) ವಿರುದ್ಧ ಜಿಲ್ಲೆಯ ರಾಣೇಬೆನ್ನೂರು ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ. ಎಂಎಸ್ಸಿ ಶಂಕರ್ ಅವರು ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಗುರು ಬಸವರಾಜ ಅವರು ಠಾಣೆಗೆ ದೂರು ನೀಡಿದ್ದು, ಮತದಾರರಿಗೆ ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದಾರೆಂದು ಉಲ್ಲೇಖಿಸಿದ್ದಾರೆ. ತಹಶೀಲ್ದಾರ್ ನೀಡಿದ ದೂರಿನ ಅನ್ವಯ ಪೊಲೀಸರು ಎಂಎಲ್ಸಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮಾರ್ಚ್ 14ರಂದು ರಾತ್ರಿ ಆರ್.ಶಂಕರ್ ಕಚೇರಿ ಮೇಲೆ ಹಾವೇರಿ ಎಸಿ, ವಾಣಿಜ್ಯ ತೆರಿಗೆ ಅಧಿಕಾರಿಗಳು (Commercial Taxes Department) ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕ ಮಾಹಿತಿಯನ್ನು ಕಂದಾಯ ಇಲಾಖೆ ಕೋರ್ಟ್ಗೆ ಸಲ್ಲಿಸಿತ್ತು. ಇದೀಗ ಕೋರ್ಟ್ ಅನುಮತಿಯಂತೆ ದೂರು ಸಲ್ಲಿಸಲಾಗಿದೆ.
ಚುನಾವಣೆ ಹಿನ್ನಲೆ ಎಂಎಲ್ಸಿ ಶಂಖರ್ ಅವರು ಕುಕ್ಕರ್, ಸೀರೆ ಹಂಚಿಕೆ ಮಾಡಿ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುರು ಬಸವರಾಜ ಅವರು ದೂರು ನೀಡಿದ್ದಾರೆ. ಅದರಂತೆ ಪೊಲೀಸರು, ಕಲಂ 171 E ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರ್. ಶಂಕರ ಕಚೇರಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆ, ತಟ್ಟೆ, ಮಕ್ಕಳ ಸ್ಕೂಲ್ ಬ್ಯಾಗ್ಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಕಚೇರಿ ಒಳಗೆ ಯಾರೂ ಹೋಗದಂತೆ ಶಹರ ಠಾಣೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದಲ್ಲಿರುವ ಶಂಕರ್ ಮನೆ ಮೇಲೆ ಮಾರ್ಚ್ 14ರಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಡರಾತ್ರಿ ದಾಳಿಯಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆಯಲ್ಲಿ ನಡೆಸಿದ್ದಾರೆ. ಈ ವೇಳೆ ಆರ್.ಶಂಕರ್ ಗೃಹಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ಹಲವು ವಸ್ತುಗಳು ಪತ್ತೆಯಾಗಿತ್ತು. ಆರ್.ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್. ತಟ್ಟೆ, ಲೋಟಾ ಹಾಗೂ ಎಲ್.ಕೆ.ಜಿ ಪದವಿ ಕಾಲೇಜು ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿದ್ದವು.
ಸುಮಾರು 8 ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿತ್ತು ಎಂದು ಅಂದಾಜಿಸಲಾಗಿದ್ದು, ಈ ಎಲ್ಲ ವಸ್ತುಗಳ GST ಬಿಲ್ ಕೇಳಲಾಗಿತ್ತು. ಈ ಹಿನ್ನಲೆಯಲ್ಲಿ ಆರ್ ಶಂಕರ್ ಬಿಲ್ ಕೊಡಲು ಅವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್ಟಿ ಬಿಲ್ ಇಲ್ಲದಿದದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ. ಇನ್ನು ಚುನಾವಣೆ ನಿಯಮ ಉಲ್ಲಂಘಣೆ ಮಾಡಿದಾರಾ ಎಂಬುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸಹ ದಾಳಿ ಮಾಡಿದ್ದು, ಎಲ್ಲ ದಾಖಲೆಗಳನ್ನು ಕೊರ್ಟ್ ಮುಂದೆ ಹಾಜರುಪಡಿಸಿ, ಒಪ್ಪಿಗೆ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರು Tv9ಗೆ ಮಾಹಿತಿ ನೀಡಿದ್ದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿರುವುದಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ವಿರುದ್ಧ ಸಂಚು ಹೂಡಲಾಗಿದೆ ಎಂದು ಆರೋಪಿಸಿರುವ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ನಾನೂ ಕಾರಣ. ಬಸವರಾಜ ಬೊಮ್ಮಾಯಿ ಮತ್ತು ಆರ್ ಅಶೋಕ ನನ್ನ ಮನೆಗೆ ಬಂದು ಬೆಂಬಲ ಕೋರಿದ್ದರು. ಅದಾದ ನಂತರ ಅವರು ಪ್ರತಿ ದಿನ ನನ್ನನ್ನು ನೋಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳಿದ್ದರೂ ನಮ್ಮನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಶಂಕರ್ ಆರೋಪ ತಳ್ಳಿಹಾಕಿದ್ದ ಸಿಎಂ ಬೊಮ್ಮಾಯಿ, ತನಿಖಾ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ಯಾರೇ ತಪ್ಪು ಮಾಡಿದರೂ ಶಿಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Fri, 17 March 23