ಮೂಡಿಗೆರೆ ವಿಜಯಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರ ಗಲಾಟೆ: ನಾನು ಗೆಲ್ಲಬಾರದು ಅಂತ ಹೀಗೆ ಮಾಡಿದ್ದಾರೆ- ಎಂ.ಪಿ. ಕುಮಾರಸ್ವಾಮಿ
ನನಗೆ 2004 ರಿಂದಲೂ ಇರುವ ವಿರೋಧಿಗಳು ಇಂದಿಗೂ ಇದ್ದಾರೆ. ಆದರೂ ಕೂಡಾ ನಾನು ಗೆಲ್ಲುತ್ತಲೇ ಬಂದಿದ್ದೇನೆ. ಬಿಎಸ್ ಯಡಿಯೂರಪ್ಪ ಅವರು ಬಂದಾಗ ಬೇರೆ ಸಂದೇಶ ಕೊಡಬೇಕು ಅಂತ 3-4 ಪದಾಧಿಕಾರಿಗಳು ಸೇರಿಕೊಂಡು ಗಲಾಟೆ ಮಾಡಿದರು ಎಂದು ಎಂಪಿ ಕುಮಾರಸ್ವಾಮಿ ಹೇಳಿದರು.

ಚಿಕ್ಕಮಗಳೂರು: ನಿನ್ನೆ (ಮಾ.16) ಮೂಡಿಗೆರೆ ಬಿಜೆಪಿ (BJP) ಶಾಸಕ ಎಂ.ಪಿ. ಕುಮಾರಸ್ವಾಮಿಯವರನ್ನು (MP Kumaraswamy) ವಿರೋಧಿಸಿ ಸ್ವಪಕ್ಷದ ಕಾರ್ಯಕರ್ತರೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ (BS Yediyurappa) ಕಾರಿಗೆ ಮುತ್ತಿಗೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ನನಗೆ 2004 ರಿಂದಲೂ ಇರುವ ವಿರೋಧಿಗಳು ಇಂದಿಗೂ ಇದ್ದಾರೆ. ಆದರೂ ಕೂಡಾ ನಾನು ಗೆಲ್ಲುತ್ತಲೇ ಬಂದಿದ್ದೇನೆ. ಬಿಎಸ್ ಯಡಿಯೂರಪ್ಪ ಅವರು ಬಂದಾಗ ಬೇರೆ ಸಂದೇಶ ಕೊಡಬೇಕು ಅಂತ 3-4 ಪದಾಧಿಕಾರಿಗಳು ಸೇರಿಕೊಂಡು ಗಲಾಟೆ ಮಾಡಿದರು. ಬಿಎಸ್ ಯಡಿಯೂರಪ್ಪ ಅವರು ಕೂಡ ನಿನ್ನೆ ಬಹಳ ಬೇಸರ ಮಾಡಿಕೊಂಡಿದ್ದಾರೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಮೂಡಿಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಗೆಲ್ಲಬಾರದು ಅಂತ ಹೀಗೆ ಮಾಡಿದ್ದಾರೆ. ನನಗೆ ಟಿಕೆಟ್ ಕೊಟ್ಟರೆ ನನ್ನ ಗೆಲುವಿಗೆ ಯಾರೂ ಅಡ್ಡಿಪಡಿಸಲು ಆಗಲ್ಲ. ನಾನು ಗೆದ್ದು ಬರುತ್ತೇನೆ. ನಾನು ಇಲ್ಲಿಯವರೆಗೂ ಯಾರ ವಿರುದ್ಧವೂ ಚಾಡಿ ಹೇಳಿಲ್ಲ. ಬಹುಶಃ ಇನ್ನು ಬಿಎಸ್ ಯಡಿಯೂರಪ್ಪನವರು ಮೂಡಿಗೆರೆಗೆ ಬರಲ್ವೇನೋ? ಸಿ.ಟಿ. ರವಿಯವರ ಮಾತೂ ಕೂಡ ನಿನ್ನೆ ಯಾರೂ ಕೇಳಲಿಲ್ಲ. ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ ಅಂತ ಟಿಕೆಟ್ ಕೊಡದಂತೆ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾರ್ಯಕರ್ತರ ಪ್ರತಿಭಟನೆಗೆ ಯಡಿಯೂರಪ್ಪ ಗರಂ; ವಿಜಯಸಂಕಲ್ಪ ಯಾತ್ರೆ ರದ್ದುಗೊಳಿಸಿ ವಾಪಸ್
ಕೆಟ್ಟ ಇಮೇಜ್ ಬರಬೇಕು ಅಂತಾ ನಿನ್ನೆ ಗಲಾಟೆ ಮಾಡಿದ್ದಾರೆ. ಕಿಡಿಗೇಡಿಗಳು ಮತ್ತು ಪಕ್ಷದ ಪದಾಧಿಕಾರಿಗಳು ಸೇರಿಕೊಂಡು ಈ ರೀತಿ ಮಾಡಿದ್ದಾರೆ. ಕೆಲಸ ಮಾಡಿಕೊಂಡು ಹೋಗು, ನಾವು, ಹೈಕಮಾಂಡ್ ಎಲ್ಲ ಇದ್ದೇವೆ ಅಂತ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ನಾನು ಇಷ್ಟು ಕಾಲ ಮೌನವಾಗಿದ್ದಿದ್ದಕ್ಕೆ ನನಗೆ ಹಿನ್ನಡೆ ಆಗಿತ್ತು, ನಿನ್ನೆಯ ಘಟನೆ ಪಕ್ಷದ ಗಮನಕ್ಕೆ ತರುತ್ತೇನೆ. ನಮ್ಮ ಕ್ಷೇತ್ರದ ಪ್ರಮುಖರದ್ದೇ ಘಟನೆಯಲ್ಲಿ ಕೈವಾಡ ಇದೆ. ನಾನು ಅವರ ಹೆಸರು ಹೇಳಲು ಇಷ್ಟಪಡಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Fri, 17 March 23