ಹಾವೇರಿ: ಸಾಲ ನೀಡಲು ನಿರಾಕರಿಸಿದ ಬ್ಯಾಂಕ್​ಗೆ ಬೆಂಕಿ ಹಚ್ಚಿದ ಭೂಪ; ಆರೋಪಿ ಪೊಲೀಸ್ ವಶಕ್ಕೆ

| Updated By: preethi shettigar

Updated on: Jan 11, 2022 | 11:31 AM

ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕ್​ನಲ್ಲಿ ಕೆಲವು ತಿಂಗಳುಗಳ ಹಿಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಸುಮಾರು ತಿಂಗಳು ಕಳೆದರು ತನಗೆ ಸಾಲ ಸಿಗದೆ ಇರುವುದರಿಂದ ಈ ಬ್ಯಾಂಕಿನ ಮೇಲೆ ಕೋಪಗೊಂಡಿದ್ದು, ಬ್ಯಾಂಕಿಗೆ ಬೆಂಕಿ ಹಚ್ಚಿ ತನ್ನ ವಿಕೃತಿ ಮೆರೆದಿದ್ದಾನೆ.

ಹಾವೇರಿ: ಸಾಲ ನೀಡಲು ನಿರಾಕರಿಸಿದ ಬ್ಯಾಂಕ್​ಗೆ ಬೆಂಕಿ ಹಚ್ಚಿದ ಭೂಪ; ಆರೋಪಿ ಪೊಲೀಸ್ ವಶಕ್ಕೆ
ಬ್ಯಾಂಕ್​ಗೆ ಬೆಂಕಿ
Follow us on

ಹಾವೇರಿ: ಜೀವನ ನಿರ್ವಹಣೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಕೆಲಸ ಮಾಡಿಕೊಂಡಿರುತ್ತಾರೆ. ಕೆಲವರು ತಮ್ಮ ಕೆಲಸದಲ್ಲಿ ಯಶಸ್ಸು ಕಂಡರೆ ಮತ್ತೆ ಕೆಲವರು ಸಾಲದ ಸುಳಿಗೆ ಸಿಲುಕಿರುತ್ತಾರೆ. ಹೀಗೆ ಸರಕಾರೇತರ ಸಂಸ್ಥೆ ಆರಂಭಿಸಿದ್ದ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ನಿವಾಸಿಯೊಬ್ಬ ಸಾಲ ತೀರಿಸಲು ಬ್ಯಾಂಕ್​ನ (Bank) ಮೊರೆ ಹೋಗಿದ್ದ. ಆದರೆ ಜಿಲ್ಲೆಯಲ್ಲಿನ ಅನೇಕ ಬ್ಯಾಂಕ್​ಗಳಿಗೆ ಅಲೆದಾಡಿದರು ಯಾರು ಸಾಲ ನೀಡಲಿಲ್ಲ. ಇದರಿಂದ ಬೇಸತ್ತು, ಸಾಲ (Loan) ನೀಡಲು ನಿರಾಕರಿಸಿದ್ದ ಬ್ಯಾಂಕೊಂದಕ್ಕೆ ಬೆಂಕಿ (Fire) ಹಚ್ಚಿದ್ದಾನೆ.

ಘಟನೆಯ ಹಿನ್ನೆಲೆ:
ರಟ್ಟೀಹಳ್ಳಿ ಪಟ್ಟಣದ ನಿವಾಸಿಯಾಗಿದ್ದ ವಾಸಿಂ ಆಕ್ರಮ ಮುಲ್ಲಾ (33 ವರ್ಷ) ಎಂಬುವನು ಸರಕಾರೇತರ ಸಂಸ್ಥೆಯೊಂದನ್ನು ಆರಂಭಿಸಿದ್ದನು. ಕೆಲವು ವರ್ಷಗಳಿಂದ ಎನ್​ಜಿಓ ಕೂಡ ನಿರ್ವಹಿಸುತ್ತಿದ್ದ. ಅದರ ನಿರ್ವಹಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಮಾಡಿದ ಸಾಲವನ್ನು ತೀರಿಸಲು ಜಿಲ್ಲೆಯ ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಪಡೆಯಲು ಪ್ರಯತ್ನ ಮಾಡಿದ್ದ. ಆದರೆ ಯಾವ ಬ್ಯಾಂಕಿನಲ್ಲಿಯೂ ಈತನಿಗೆ ಸಾಲ ಸಿಕ್ಕಿರಲಿಲ್ಲ. ಎಲ್ಲಿಯೂ ಸಾಲ ಸಿಗದೆ ಇರುವುದರಿಂದ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕ್​ನಲ್ಲಿ ಕೆಲವು ತಿಂಗಳುಗಳ ಹಿಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಸುಮಾರು ತಿಂಗಳು ಕಳೆದರು ತನಗೆ ಸಾಲ ಸಿಗದೆ ಇರುವುದರಿಂದ ಈ ಬ್ಯಾಂಕಿನ ಮೇಲೆ ಕೋಪಗೊಂಡಿದ್ದು, ಬ್ಯಾಂಕಿಗೆ ಬೆಂಕಿ ಹಚ್ಚಿ ತನ್ನ ವಿಕೃತಿ ಮೆರೆದಿದ್ದಾನೆ.

ಬೈಕ್‌ನ ನಂಬರ್ ಪ್ಲೇಟ್ ತೆಗೆದಿಟ್ಟು ಬಂದಿದ್ದ ಆರೋಪಿ
ಜನವರಿ 8, 2022ರಂದು ರಾತ್ರಿ 8.00 ಗಂಟೆಗೆ ತಾನು ವಾಸವಾಗಿದ್ದ ರಟ್ಟಿಹಳ್ಳಿ ಪಟ್ಟಣದಿಂದ ತನ್ನ ಬೈಕ್​ನಲ್ಲಿ ಹಾವೇರಿ ನಗರಕ್ಕೆ ಬಂದಿದ್ದಾನೆ. ಬರುವಾಗ ತನ್ನ ಬೈಕ್​ನ ನಂಬರ್‌ ಪ್ಲೇಟ್ ತೆಗೆದಿಟ್ಟು ಬಂದಿದ್ದಾನೆ. ಹಾವೇರಿ ನಗರಕ್ಕೆ ಬಂದು ರಾತ್ರಿ ಅಲ್ಲಿ ಇಲ್ಲಿ ಓಡಾಡಿದ್ದಾನೆ. ರಾತ್ರಿ ಸುಮಾರು ಎರಡೂವರೆ ಗಂಟೆಗೆ ಹೆಡಿಗ್ಗೊಂಡ ಗ್ರಾಮಕ್ಕೆ ಪೆಟ್ರೋಲ್ ತುಂಬಿದ ಕ್ಯಾನಿನ ಸಮೇತ ಬ್ಯಾಂಕ್​ಗೆ ಬಂದಿದ್ದಾನೆ. ನಂತರ ತನಗೆ ಸಾಲ ನೀಡದಿರುವ ಬ್ಯಾಂಕ್​ನ ಹಿಂಬದಿಯಲ್ಲಿರುವ ಅಂಗನವಾಡಿ ಕಟ್ಟಡದ ಮೇಲೆ ಹತ್ತಿ ಬ್ಯಾಂಕ್​ನ ಕಿಟಕಿ ಒಡೆದಿದ್ದಾನೆ. ಬಳಿಕ ಬ್ಯಾಂಕಿನ ಒಳಗಡೆ ತಾನು ಕ್ಯಾನಿನಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಲೈಟರ್‌ದಿಂದ ಬೆಂಕಿ ಹಚ್ಚಿದ್ದಾನೆ.

ಬ್ಯಾಂಕಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ತನ್ನ ಕೆಲಸ ಮುಗಿಯಿತು ಎಂದುಕೊಂಡು ಕಟ್ಟಡದಿಂದ ಕೆಳಗೆ ಹಾರಿದ್ದಾನೆ. ಆಗ ಕೆಳಗಿದ್ದ ಚರಂಡಿಗೆ ಬಿದ್ದಿದ್ದು ಒಮ್ಮೆಲೆ ಭಾರಿ ಶಬ್ದ ಕೇಳಿ ಬಂದಿದೆ. ಆಗ ತಾನೆ ಜಮೀನಿನಲ್ಲಿ ನೀರು ಹಾಯಿಸಿ ಮನೆಗೆ ಬಂದಿದ್ದ ಬ್ಯಾಂಕಿನ ಸಮೀಪದ ಮನೆಯಲ್ಲಿರುವ ಜನರು ಹೊರಗೆ ಬಂದು ನೋಡಿದ್ದಾರೆ. ಅಷ್ಟರಲ್ಲಿ ಚರಂಡಿಗೆ ಬಿದ್ದು ಎದ್ದು ಬೈಕ್ ಹತ್ತಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ವಾಸಿಂನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ವಾಸಿಂ ಚಾಕು ಹಿಡಿದು ಹೆದರಿಸಿದ್ದಾನೆ. ಅದರೂ ಆತನ ಬೆದರಿಕೆ ಬಗ್ಗದೆ ಹಗ್ಗದಿಂದ ಹಿಡಿದು ಆತನನ್ನು ಕಟ್ಟಿಹಾಕಿದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಸುದ್ದಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಎಲ್ಲಿಲ್ಲದ ಆತಂಕ ಸೃಷ್ಟಿಸಿತ್ತು. ಯಾಕಂದರೆ ಬ್ಯಾಂಕಿನಲ್ಲಿ ಜನರು ಕಷ್ಟಪಟ್ಟು ದುಡಿದು ಸಂಪಾದಿಸಿರುವ ಬೆಳ್ಳಿ, ಬಂಗಾರದ ಆಭರಣಗಳನ್ನು ಬ್ಯಾಂಕಿನ ಸೇಫ್ ಲಾಕರ್​ಲ್ಲಿಟ್ಟಿದ್ದರು. ಇದರಿಂದ ಬ್ಯಾಂಕಿಗೆ ಬೆಂಕಿ ಬಿದ್ದು ಸುಟ್ಟಿದೆ ಎಂಬ ವಿಷಯ ಜನರನ್ನು ಎಲ್ಲಿಲ್ಲದ ಆತಂಕಕ್ಕೆ ಸಿಲುಕಿಸಿತ್ತು. ಬ್ಯಾಂಕಿಗೆ ದೌಡಾಯಿಸಿದ ಜನರು ಬ್ಯಾಂಕಿನಲ್ಲಿದ್ದ ಸೇಫ್ ಲಾಕರ್​ಗೆ ಯಾವುದೇ ಹಾನಿಯಾಗದಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಉಳಿದಂತೆ ಬ್ಯಾಂಕಿನಲ್ಲಿದ್ದ ಕಂಪ್ಯೂಟರ್, ಸಿಸಿ ಕ್ಯಾಮರಾ, ಖುರ್ಚಿ, ಟೇಬಲ್, ಕಾಗದ ಪತ್ರಗಳು, ವಿದ್ಯುತ್ ಉಪಕರಣಗಳು ಸೇರಿದಂತೆ ಬಹುತೇಕ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾಗಿನೆಲೆ ಠಾಣೆ ಪಿಎಸ್ಐ ಎಸ್.ಬಿ.ಹೊಸಮನಿ ಮತ್ತು ಅವರ ತಂಡ ಪರಿಶೀಲನೆ ನಡೆಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕ್ ಮ್ಯಾನೇಜರ್ ಹೀರಾಮನ್ ಎಮ್. ನಾಯಕ ಎಂಬುವವರು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಾಧ ಸಂಖ್ಯೆ 02/2022 ಕಲಂ 435 436 427 447 ಐಪಿಸಿ ಮತ್ತು 3 ಮತ್ತು 4 ಕರ್ನಾಟಕ ಪ್ರಿವೇನ್‌ಶನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಯಾಕ್ಟ್-1984 ನ್ನೆದ್ದರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಾಸಿಂನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ:
Bengaluru: ನಿರ್ಮಾಣ ಹಂತದ ಮಾಲ್​ನಲ್ಲಿ ಬೆಂಕಿ, ರಸ್ತೆಯೂ ಕಾಣದಷ್ಟು ದಟ್ಟ ಹೊಗೆ

Bengaluru: ಸಿಲಿಂಡರ್ ಸ್ಫೋಟವಾಗಿ 7 ಜನರಿಗೆ ಗಾಯ; ಬೆಂಕಿ ನಂದಿಸುತ್ತಿರುವ 9ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ

Published On - 10:54 am, Tue, 11 January 22