ಶಿಗ್ಗಾಂವಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟ: ಸಂಧಾನಕ್ಕೆ ಬಂದಿದ್ದ ಜಮೀರ್ ಕಾರಿನ ಗಾಜು ಪುಡಿಪುಡಿ

|

Updated on: Oct 25, 2024 | 4:34 PM

ಶಿಗ್ಗಾಂವಿ ಉಪಚುನಾವಣೆ ಕಣ ರಂಗೇರಿದೆ. ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್​ ಬಿಜೆಪಿಯಿಂದ ಅಖಾಡಕ್ಕಿಳಿದಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ಅವರು ಸಹ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ, ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಬಂಡಾಯ ಅಭ್ಯರ್ಥಿಯಾಗಿ ಅಜ್ಜಂಪೀರ್ ಖಾದ್ರಿ ಸಹ ಕೊನೆ ನಿಮಿಷಗಳು ಇರುವಾಗಲೇ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್ ಅಹಮ್ಮದ್ ಖಾನ್​ ಕಾರಿನ ಗಾಜು ಪುಡಿಪುಡಿಯಾಗಿದೆ.

ಶಿಗ್ಗಾಂವಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟ: ಸಂಧಾನಕ್ಕೆ ಬಂದಿದ್ದ ಜಮೀರ್ ಕಾರಿನ ಗಾಜು ಪುಡಿಪುಡಿ
Follow us on

ಹಾವೇರಿ, (ಅಕ್ಟೋಬರ್ 25): ಶಿಗ್ಗಾಂವಿ ಕಾಂಗ್ರೆಸ್​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಟಿಕೆಟ್ ವಂಚಿತ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್​​ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು… ಶಿಗ್ಗಾಂವಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ಅವರು ಇಂದು (ಅಕ್ಟೋಬರ್ 25) ನಾಮಪತ್ರ ಸಲ್ಲಿಸಿದರು. ಮತ್ತೊಂದೆಡೆ ಟಿಕೆಟ್​ ಸಿಗದಿದ್ದಕ್ಕೆ ಆಕ್ರೋಶಗೊಂಡಿರುವ ಅಜ್ಜಂಪೀರ್ ಖಾದ್ರಿ ಮತ್ತು ಮಂಜುನಾಥ ಕುನ್ನೂರು ಸಹ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೇನು ಕೊನೆಯ 13 ನಿಮಿಷ ಬಾಕಿ ಇರುವಾಗ ಖಾದ್ರಿ ಓಡೋಡಿ ಬಂದು ಚುನಾವಣಾಧಿಕಾರಿ ಮಹ್ಮದ್ ಖಿಝರ್​ ಅವರಿಗೆ ನಾಮಪತ್ರ ಸಲ್ಲಿಸಿ ಎಲ್ಲರ ಗಮನಸೆಳೆದಿದ್ದಾರೆ. ಇನ್ನು ಮಗ ರಾಜು ಕುನ್ನೂರಗೆ ‘ಕೈ’ ಟಿಕೆಟ್ ಕೇಳಿದ್ದ ಮಂಜುನಾಥ ಕುನ್ನೂರು ಸಹ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿ ಕಾಂಗ್ರೆಸ್​ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಈ ಮೂಲಕ ಶಿಗ್ಗಾಂವಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ ತಟ್ಟಿದೆ.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಜ್ಜಂಪೀರ್ ಖಾದ್ರಿ, ನಾನು ಶಿಗ್ಗಾಂವ್ ಕ್ಷೇತ್ರದ ನಿವಾಸಿ. ಬಿಜೆಪಿ ಭರತ್ ಬೊಮ್ಮಾಯಿ ಹುಬ್ಬಳ್ಳಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀನ್ ಖಾನ್ ಹಾನಗಲ್. ನಾನು ಮಾತ್ರ ಶಿಗ್ಗಾಂವ್ ಕ್ಷೇತ್ರದ ವ್ಯಕ್ತಿ.‌ಯಾವುದೇ ಕಾರಣಕ್ಕೂ ನಾನು‌ ನಾಮಪತ್ರ ಹಿಂದೆ ಪಡೆಯಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಪೋಟ: ನಾಯಕರ ವಿರುದ್ಧ ಒಳ ಒಪ್ಪಂದ ಆರೋ

ಸಂಧಾನಕ್ಕೆ ಬಂದ ಜಮೀರ್ ಕಾರಿನ ಗಾಜು ಪುಡಿಪುಡಿ

ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್​​ ಅಹಮ್ಮದ್ ಖಾನ್​ ಕಸರತ್ತು ನಡೆಸಿದ್ದಾರೆ. ಆದ್ರೆ, ಸಂಧಾನ ವಿಫಲವಾಗಿದ್ದು, ಖಾದ್ರಿ ಕೊನೆ ಕ್ಷಣದಲ್ಲಿ ಬೈಕ್​ನಲ್ಲಿ ದಾಖಲೆ ಹಿಡಿದು ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನು ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್​​ ಅಹಮ್ಮದ್ ಖಾನ್ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿದೆ.

ಕಾಂಗ್ರೆಸ್​​ಗೆ ಮಾಜಿ ಶಾಸಕರು ಮಗ್ಗಲು ಮುಳ್ಳು

ಅಜ್ಜಂಪೀರ್ ಖಾದ್ರಿ ಮಾತ್ರವಲ್ಲ. ಮಾಜಿ ಶಾಸಕ ಮಂಜುನಾಥ ಕುನ್ನೂರು ಅವರು ಸಹ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ. ತಮ್ಮ ಪುತ್ರನಿಗೆ ಟಿಕೆಟ್​ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದ್ರೆ, ಕಾಂಗ್ರೆಸ್ ಪಠಾಣ್​ಗೆ ಮಣೆಹಾಕಿದ್ದರಿಂದ ಮಂಜುನಾಥ ಕುನ್ನೂರು ಮತ್ತು ಖಾದ್ರಿ ಕೆಂಡಮಂಡಲರಾಗಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಇದೀಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್​​ಗೆ ಬಂಡಾಯದ ಬಿಸಿ ತಟ್ಟಿದೆ. ಇಬ್ಬರೂ ಮಾಜಿ ಶಾಸಕರು ಸಿಡಿದೆದ್ದಿದ್ದರಿಂದ ನಾಯಕರಿಗೆ ದಿಕ್ಕುತೋಚದಂತಾಗಿದೆ. ಅಲ್ಲದೇ ಅವರು ಯಾವುದೇ ಕಾರಣಕ್ಕೂ ನಾಮಪತ್ರ ವಾಪಡ್ ಪಡೆಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್​​ಗೆ ಇಬ್ಬರು ಮಾಜಿ ಶಾಸಕರು ಮಗ್ಗಲು ಮುಳ್ಳಾಗುವ ಸಾಧ್ಯತೆಗಳಿವೆ.

ಇದೇ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಇದರಲ್ಲಿ ಬಿಜೆಪಿ ಗೆಲ್ಲುತ್ತೋ ಅಥವಾ ಎಲ್ಲಾ ಬಂಡಾಯದ ಬಿಸಿ ನಡುವೆ ಕಾಂಗ್ರೆಸ್​ ಅಭ್ಯರ್ಥಿ ಗೆದ್ದು ಬರುತ್ತಾರೋ ಎನ್ನುವುದನ್ನು ಕಾದುಬೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.