ಮತದಾನಕ್ಕೂ ಮುನ್ನವೇ ಶಿಗ್ಗಾಂವಿ ಕೈ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ: ಬಿಜೆಪಿಯಿಂದ ಕಾನೂನು ಹೋರಾಟ

| Updated By: ರಮೇಶ್ ಬಿ. ಜವಳಗೇರಾ

Updated on: Nov 11, 2024 | 5:33 PM

ಶಿಗ್ಗಾವಿ ಉಪಚುನಾವಣೆಯ (By Election) ಬಹಿರಂಗ ಮತಪ್ರಚಾರ ಅಂತ್ಯವಾಗಿದ್ದು, ನವೆಂಬರ್ 13ರಂದು ಮತದಾನ ನಡೆಯಲಿದೆ. ಆದ್ರೆ, ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಒಂದು ಗಂಭೀರ ಆರೋಪ ಕೇಳಿಬಂದಿದೆ. ತಮ್ಮ ಮೇಲಿರುವ ಕೇಸ್​ಗಳನ್ನು ನಾಮಪತ್ರದಲ್ಲಿ ಉಲ್ಲೇಖಿಸದೇ ಮರೆಮಾಚಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಮತದಾನಕ್ಕೂ ಮುನ್ನವೇ ಶಿಗ್ಗಾಂವಿ ಕೈ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ: ಬಿಜೆಪಿಯಿಂದ ಕಾನೂನು ಹೋರಾಟ
ಯಾಸಿರ್ ಖಾನ್ ಪಠಾಣ್, ಬೊಮ್ಮಾಯಿ
Follow us on

ಹಾವೇರಿ, (ನವೆಂಬರ್ 11): ಶಿಗ್ಗಾಂವಿ ಉಪಚುನಾವಣೆ ರಂಗೇರಿದ್ದು, ಗೆಲುವಿಗಾಗಿ ಬಿಜೆಪಿ-ಕಾಂಗ್ರೆಸ್​​ ಇನ್ನಿಲ್ಲದ ಕಸರತ್ತು ನಡೆಸಿವೆ. ಆದ್ರೆ, ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yasir khan Pathan) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಠಾಣ್ ಅವರು ತಮ್ಮ ಮೇಲಿರುವ ಪೊಲೀಸ್​ ಕೇಸ್​​ಗಳನ್ನು ನಾಮಪತ್ರದಲ್ಲಿ ಉಲ್ಲೇಖಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ನಾಮಪತ್ರದಲ್ಲಿ ತಮ್ಮ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದ್ರೆ, ಇದೀಗ ಈ ಬಗ್ಗೆ ಹಾವೇರಿ ಎಸ್ಪಿ ಪ್ರತಿಕ್ರಿಯಿಸಿ, ಪಠಾಣ್​ ಓರ್ವ ರೌಡಿಶೀಟರ್ ಎಂಬ ಬಗ್ಗೆ ಚರ್ಚೆ ನಡೆದಿದೆ. ಇದರ ಮಧ್ಯ ​​ ಖುದ್ದು ಹಾವೇರಿ ಎಸ್ಪಿ ಪಠಾಣ್​ ಮೇಲೆ ರೌಡಿಶೀಟರ್ ಪ್ರಕರಣ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಪಠಾಣ್​ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್​ ಮುಖಂಡ ಅಜ್ಜಂಪೀರ್ ಖಾದ್ರಿ ಅವರು ಯಾಸೀರ್ ಪಠಾಣ್​​ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅವರೊಬ್ಬ ರೌಡಿಶೀಟರ್​. ರೌಡಿಶೀಟರ್​ಗೆ ಟಿಕೆಟ್ ನೀಡಲಾಗಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹಾಗೇ ಇದೀಗ ಹಾವೇರಿ ಎಸ್ಪಿ ಪಠಾಣ್ ಮೇಲೆ ರೌಡಿ ಶೀಟರ್ ಇರುವುದು ನಿಜಾ ಎಂದಿದ್ದಾರೆ. ಆದ್ರೆ, ಪಠಾಣ್​ ಮಾತ್ರ ತಮ್ಮ ವಿರುದ್ಧ ಯಾವುದೇ ಕೇಸ್ ಇಲ್ಲ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಶಿಗ್ಗಾವಿ ಟಿಕೆಟ್ ಗಿಟ್ಟಿಸಿರುವ ಯಾಸಿರ್ ಪಠಾಣ್ ಒಬ್ಬ ರೌಡಿಶೀಟರ್: ಅಜ್ಜಂಪೀರ್ ಖಾದ್ರಿ

ಆಯೋಗಕ್ಕೆ ದೂರು ಕೊಡ್ತೀನಿ ಎಂದ ಬೊಮ್ಮಾಯಿ

ಇನ್ನು ಈ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಚುನಾವಣೆಗೆ ನಾವು ಅರ್ಜಿ ಸಲ್ಲಿಸ್ತೇವೆ. ಕೂಡಲೇ ಚುನಾವಣಾಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿ. ಡಿಸಿ ಮೇಲೆ‌ ದೊಡ್ಡ ಜವಾಬ್ದಾರಿ ಇದೆ. ಏನಿದೆ ಸ್ಟೇಟಸ್ ಎಂದು ಸ್ಪಷ್ಟಪಡಿಸಲಿ. ಇಲ್ಲದಿದ್ದರೆ ಅಧಿಕಾರಿಗಳು ಕಟಕಟೆಯಲ್ಲಿ ನಿಲ್ಲಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಆರೋಪಕ್ಕೆ ಕೈ ಅಭ್ಯರ್ಥಿ ಪಠಾಣ್ ಸ್ಪಷ್ಟನೆ

ಎಸ್ ಪಿ ಅವರಿಗೆ ಕನ್ನಡ ಅಷ್ಟೋಂದಾಗಿ ಬರಲ್ಲ. ಇದು ನಿಮಗೆ ಕನ್ಫೂಸ್ ಆಗಿದೆ. ನಿಮಗೆ ಅದರ ಡಾಕ್ಯುಮೆಂಟ್ ಕೋಡ್ತಿನಿ. ಮಾಜಿ ಮುಖ್ಯಮಂತ್ರಿಗಳು ನನ್ನ ಮೇಲೆ ಹಲವಾರು ಆರೋಪ ಮಾಡಿದ್ದಾರೆ. ಅಕ್ರಮಗಳು ಮಾಡಿದ್ದಾರೆ ಅಂತಾರೆ ಅವರಿಗೆ ತಡೆಯುವ ಶಕ್ತಿ ಇರಲಿಲ್ಲವಾ? ಸೋಲಿನ ಭಯದಿಂದ ಹೀಗೆ ಮಾಡ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆಯಲ್ಲಿ ಬೊಮ್ಮಾಯಿಯವರು ಗಿಮಿಕ್ ಮಾಡುತ್ತಿದ್ದಾರೆ. ನಾನು ರಾಜಕೀಯ ಮಾಡುವಾಗ ಕೇಸ್ ಗಳು ಆಗುವುದು ಸರ್ವೆ ಸಾಮಾನ್ಯ. ಬೊಮ್ಮಾಯಿವರು ಅವರ ವಯ್ಯಕ್ತಿಕವಾಗಿ ಸ್ಟೇ ತಂದಿದ್ದಾರೆ. ಸ್ಟೇ ತಗೆಯಲಿ ಈಗಲೇ ವೀಡಿಯೋ ಬಿಡುಗಡೆಯಾಗುತ್ತೆ. ಅವರ ಮಗನ ಮೇಲೆ ಬಿಟ್ ಕಾಯ್ನ್ ಅರೋಪ ಇದೆ ಎಂದು ತಿರುಗೇಟು ನೀಡಿದರು.

ಬೊಮ್ಮಾಯಿವರು ದೊಡ್ಡವರು ನಾನು ಇದುವರೆಗೂ ಅವರ ಮೇಲೆ ಚಕಾರ ಎತ್ತಿಲ್ಲ. ಸ್ಟೇ ಯಾಕೆ ತಗೆದುಕೊಂಡಿದ್ದಿರಿ? ಶಿಗ್ಗಾಂವಿ- ಸವಣೂರು ಸಂತರ ಶರಿಫರ ನಾಡು . ಇಲ್ಲಿ ಗೆದ್ದು ಹಲವು ಆರೋಪ ಎದುರಿಸಿ ತಾಲೂಕಿನ ಹೆಸರು ಹಾಳು ಮಾಡಿದ್ದಾರೆ. ಚುನಾವಣೆ ಆರಂಭದಿಂದ ನಾನು ಯಾವುದೆ ಆರೋಪ ಮಾಡಿಲ್ಲ. ಇಂದು ಸೋಲಿನ ಭಯದಿಂದ ಹೀಗೆ ಮಾಡ್ತಿದ್ದಾರೆ. ಕೈಲಾಗದ ಶತ್ರುವಿನ ಕೊನೆಯ ಅಸ್ತ್ರ ಇದು. ಈ ಕ್ಷೇತ್ರದ ಶಾಸಕರಿದ್ರು ನಾನು ತಪ್ಪು ಮಾಡಿದ್ರೆ ಯಾಕೆ ತಡೆಯುವ ಕೆಲಸ ಮಾಡಲಿಲ್ಲ ಎಂದು ಬೊಮ್ಮಾಯಿಗೆ ಪ್ರಶ್ನಿಸಿದರು.