ಹಾವೇರಿ: ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬದುಕಿತು ಬಡಜೀವ, ನಾಯಿಗಳ ದಾಳಿಯಿಂದ ಜಿಂಕೆಯ ರಕ್ಷಣೆ
ನಾಯಿಗಳು ಬೆನ್ನಟ್ಟಿ ಬಂದು ದಾಳಿ ಮಾಡಿದ್ದರಿಂದ ಗಾಯಗೊಂಡು ತೀವ್ರ ಅಸ್ವಸ್ಥವಾಗಿದ್ದ ಜಿಂಕೆ ಮರಿಯನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ನಂತರ ಅರಣ್ಯ ಸಂರಕ್ಷಕ ಕೆ.ಎಲ್.ಬೇವಿನಕಟ್ಟಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ.
ಹಾವೇರಿ : ಜಿಂಕೆಗಳು ಇತ್ತೀಚಿನ ದಿನಗಳಲ್ಲಿ ಕಾಡಿಗಿಂತಲೂ ನಾಡಿನ ಬಳಿಯಲ್ಲೇ ಸುತ್ತಾಡುತ್ತವೆ. ಅರಣ್ಯದಲ್ಲಿ(Forest) ಅಷ್ಟಕಷ್ಟೇ ಆಹಾರ ಸಿಗುತ್ತಿರುವುದರಿಂದ ಕಾಡಿನಿಂದ ನಾಡಿನತ್ತ ಮುಖ ಮಾಡಿವೆ. ಹೀಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಾಡಿನಿಂದ ನಾಡಿನತ್ತ ಬರುತ್ತಿದ್ದ ಜಿಂಕೆ (Deer) ಮರಿಯೊಂದನ್ನು ನಾಯಿಗಳ ಹಿಂಡು ಬೆನ್ನಟ್ಟಿಕೊಂಡು ಬಂದಿದ್ದು, ಕೊನೆಗೆ ಜಿಂಕೆ ಮರಿಯ ಮೇಲೆ ದಾಳಿ ಮಾಡಿ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ್ದವು.
ನಾಯಿಯ ದಾಳಿಗೆ ತತ್ತರಿಸಿ ಹೋಗಿದ್ದ ಜಿಂಕೆ ಮರಿ ಓಡಿ ಓಡಿ ಸುಸ್ತಾಗಿ ಬಿದ್ದಿತ್ತು. ನಾಯಿಗಳು ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದ್ದರಿಂದ ಜಿಂಕೆ ಮರಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಹೀಗಿರುವಾಗಲೇ ಅಲ್ಲೇ ಪಕ್ಕದಲ್ಲಿ ಕ್ರಿಕೆಟ್ ಆಡುತ್ತಿದ್ದ ಗ್ರಾಮದ ಹುಡುಗರ ತಂಡಕ್ಕೆ ಜಿಂಕೆ ನರಳಾಟ ಕಂಡಿದೆ. ತಕ್ಷಣವೆ ಜಿಂಕೆ ಮರಿಯತ್ತ ದಾವಿಸಿದ ಹುಡುಗರು, ನಾಯಿಗಳನ್ನು ಓಡಿಸಿ ಜಿಂಕೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ರಕ್ತ ಸೋರಿ ಗಾಯಗೊಂಡಿದ್ದ ಜಿಂಕೆ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ಮರಳಿ ಅರಣ್ಯ ಸೇರಿದ ಜಿಂಕೆ ಮರಿ ನಾಯಿಗಳು ಬೆನ್ನಟ್ಟಿ ಬಂದು ದಾಳಿ ಮಾಡಿದ್ದರಿಂದ ಗಾಯಗೊಂಡು ತೀವ್ರ ಅಸ್ವಸ್ಥವಾಗಿದ್ದ ಜಿಂಕೆ ಮರಿಯನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ನಂತರ ಅರಣ್ಯ ಸಂರಕ್ಷಕ ಕೆ.ಎಲ್.ಬೇವಿನಕಟ್ಟಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ ದಾಳಿಗೆ ಒಳಗಾಗಿ ಒದ್ದಾಡುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ್ದ ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಳಿಕ ಜಿಂಕೆ ಮರಿಯನ್ನು ತೆಗೆದುಕೊಂಡು ಹೋಗಿ ಆರೈಕೆ ಮಾಡಿದ್ದು, ಸ್ವಲ್ಪ ಸಮಯದ ನಂತರ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಒಟ್ಟಾರೆ ಆಹಾರ ಅರಸಿ ನಾಡಿನತ್ತ ಬರುವ ಪ್ರಾಣಿಗಳಿಗೆ ಸದ್ಯ ನಾಯಿಗಳ ಕಾಟ ಹೆಚ್ಚಾಗಿದ್ದು, ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವರದಿ: ಪ್ರಭುಗೌಡ.ಎನ್.ಪಾಟೀಲ
ಇದನ್ನೂ ಓದಿ: ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ; ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಾಡು ಸೇರಿದ ಮೂಕಪ್ರಾಣಿಗಳು
ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು
(Team of youths rescued deer from dogs attack in Haveri)