
ಹಾವೇರಿ, ಆಗಸ್ಟ್ 21: ಹಾವೇರಿ (haveri) ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ (Urination) ಮಾಡಿ ವಿಕೃತಿ ಮೆರೆದಿರುವ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik), ಈದ್ ಮಿಲಾದ್ ಹಬ್ಬದಂದು (ಆ. 26ರಂದು) ಶಿಗ್ಗಾಂವಿ ಪಟ್ಟಣ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಇರುವ ಆಂಜನೇಯ ಮತ್ತು ಬನ್ನಿಮಹಾಕಾಳಿ ದೇವಾಲಯದ ಆವರಣದಲ್ಲಿ ಅನ್ಯಕೋಮಿನ ಯುವಕ ಮೂತ್ರವಿಸರ್ಜನೆ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಯುವಕರಿಗೆ ನಿಂದಿಸಿರುವ ಆರೋಪ ಕೂಡ ಕೇಳಿಬಂದಿದೆ. ಜಾಫರ್ ಎನ್ನುವವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಕೃತಿ ಮೆರೆದ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತಾಗಿ ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ‘ದೇಗುಲದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದವನನ್ನ ಗುಂಡು ಹಾರಿಸಿ ಕೊಲ್ಲಬೇಕು. ಮಸೀದಿ ಒಳಗೆ ಇದೇ ರೀತಿ ಆಗಿದ್ರೆ ಏನು ಮಾಡುತ್ತಿದ್ರಿ? ಹಾವೇರಿಯಲ್ಲಿ ಪದೇಪದೆ ಹಿಂದೂಗಳನ್ನ ಕೆರಳಿಸ್ತಿದ್ದಾರೆ. ಇದಕ್ಕೆ ಕೆಲವು ‘ಕೈ’ ನಾಯಕರು ಪ್ರೇರಣೆ ಕೊಡುತ್ತಿದ್ದಾರೆ. ಶ್ರೀರಾಮಸೇನೆ, ಹಿಂದೂ ಸಂಘಟನೆ ವಿರೋಧಿಸುತ್ತವೆ. ಶಾಸಕ ಯಾಸಿರ್ ಖಾನ್ ಪಠಾಣ್ ಏನು ಮಾಡ್ತಿದ್ರಿ’ ಎಂದು ಗರಂ ಆದರು.
‘ಜಾಫರ್ ಕೃತ್ಯವೆಸಗಿ ‘ಇದು ಶಾಸಕರಿಗೆ ನೀಡಿದ ಹುಟ್ಟುಹಬ್ಬದ ಗಿಫ್ಟ್’ ಎಂದು ಹೇಳಿಕೆ ನೀಡಿದ್ದಾನೆ. ಶಾಸಕ ಯಾಸಿರ್ ಖಾನ್ ಪಠಾಣ್ ಅವರೇ ಇದಕ್ಕೆ ಏನು ಹೇಳುತ್ತೀರಿ? ಈ ಕೃತ್ಯದಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲದೆ ಸ್ಥಳೀಯ ಮೌಲ್ವಿಗಳು ಹಾಗೂ ನಾಯಕರ ಷಡ್ಯಂತ್ರ ಅಡಗಿದೆ. ಹಾನಗಲ್ ಮೂಲದವರನ್ನು ಅಕ್ರಮವಾಗಿ ಶಿಗ್ಗಾಂವಿಗೆ ಕರೆತಂದು ಮತದಾರರನ್ನಾಗಿ ಮಾಡಲಾಗುತ್ತಿದೆ. ಈ ಇಡೀ ಪ್ರಕರಣದ ಆಳವಾದ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಶಿಗ್ಗಾಂವಿ ಆಂಜನೇಯ, ಬನ್ನಿ ಮಹಾಕಾಳಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ
‘ಆರೋಪಿಯನ್ನು ಯಾವುದೇ ಕಾರಣಕ್ಕೂ ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ. ಹಿಂದೂ ಸಮಾಜ ಯಾವುದೇ ಕೇಸ್ ಅಥವಾ ಪೊಲೀಸ್ ಲಾಠಿ ಏಟಿಗೆ ಹೆದರಬೇಕಿಲ್ಲ, ಹೋರಾಟಗಾರರ ಪರವಾಗಿ ನಾವು ನಿಲ್ಲುತ್ತೇವೆ. ಹಿಂದೂಗಳೇ ಜಾಗೃತರಾಗಿ, ಇಂದು ದೇವಸ್ಥಾನ, ನಾಳೆ ನಿಮ್ಮ ಮನೆಯಲ್ಲಿ ಬಂದು ಮೂತ್ರ, ಮಲ ವಿಸರ್ಜನೆ ಮಾಡುತ್ತಾರೆ, ಗಂಭೀರ ಪರಿಸ್ಥಿತಿ ಇದೆ’ ಎಂದರು.
ಇನ್ನು ಹಿಂದೂಗಳ ಮೇಲಿನ ಸರಣಿ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ ಮುತಾಲಿಕ್, ‘ಹಾನಗಲ್‌ನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆಯಂದು ಪಟಾಕಿ ಸಿಡಿಸಿದ್ದಕ್ಕೆ ಕೊಡಲಿ-ಕುಡುಗೋಲಿನಿಂದ ಹಲ್ಲೆ ನಡೆಸಲಾಯಿತು. ರಟ್ಟಿಹಳ್ಳಿಯಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ ಶಿವಾಜಿರಾವ್ ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಲಾಯಿತು. ಇಷ್ಟೆಲ್ಲಾ ದೌರ್ಜನ್ಯಗಳು ನಡೆಯಲು ಇದೇನು ತಾಲಿಬಾನ್ ಆಡಳಿತವೇ? ಹಿಂದೂಗಳಿಗೆ ಇಲ್ಲಿ ಬದುಕುವ ಹಕ್ಕಿಲ್ಲವೇ? ಇಂತಹ ಮನಸ್ಥಿತಿ ಇರುವವರು ತಾಲಿಬಾನ್‌ಗೆ ಹೋಗಲಿ. ಇನ್ನು ಮುಂದೆ ಹಿಂದೂ ಸಮಾಜ ಕೈಕಟ್ಟಿ ಕೂರುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುರು ರಾಘವೇಂದ್ರ ಸ್ವಾಮಿ ಪವಾಡ: 7 ತಿಂಗಳ ಬಳಿಕ ಮತ್ತೆ ಎದ್ದು ಓಡಾಡುವಂತಾದ ಮೆಡಿಕಲ್ ಸ್ಟೂಡೆಂಟ್!
ಸದ್ಯ ಹಿಂದೂ ಕಾರ್ಯಕರ್ತರು ಗೋಮೂತ್ರದಿಂದ ಆಂಜನೇಯ ದೇಗುಲ ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಮುತಾಲಿಕ್ ಸೇರಿದಂತೆ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಸ್ವಚ್ಛತಾ ಕಾರ್ಯದ ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.