AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರು ರಾಘವೇಂದ್ರ ಸ್ವಾಮಿ ಪವಾಡ: 7 ತಿಂಗಳ ಬಳಿಕ ಮತ್ತೆ ಎದ್ದು ಓಡಾಡುವಂತಾದ ಮೆಡಿಕಲ್ ಸ್ಟೂಡೆಂಟ್!

Haveri News: ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ಅಪರೂಪದ ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದರು. ಲಕ್ಷಾಂತರ ರೂ ಖರ್ಚು ಮಾಡಿದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಆದರೆ ಅದೊಂದು ದಿನ ಮಾತ್ರ ಪವಾಡವೇ ನಡೆದಿದ್ದು, ಇದೀಗ ಯುವತಿ ಚೇತರಿಸಿಕೊಂಡಿದ್ದಾಳೆ. ಹಾಗಾದರೆ ನಡೆದ ಪವಾಡವಾದರು ಏನು? ಇಲ್ಲಿದೆ ಮಾಹಿತಿ.

ಗುರು ರಾಘವೇಂದ್ರ ಸ್ವಾಮಿ ಪವಾಡ: 7 ತಿಂಗಳ ಬಳಿಕ ಮತ್ತೆ ಎದ್ದು ಓಡಾಡುವಂತಾದ ಮೆಡಿಕಲ್ ಸ್ಟೂಡೆಂಟ್!
ನಿವೇದಿತಾ, ರಾಯರ ಮಠImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on:Aug 15, 2026 | 8:19 PM

Share

ಹಾವೇರಿ, ಆಗಸ್ಟ್​ 15: ಕಳೆದ 7 ತಿಂಗಳಿಂದ ಅಪರೂಪದ ಆಟೋ ಇಮ್ಯೂನ್ ಸಮಸ್ಯೆಗೆ ಒಳಗಾಗಿ ಕೈಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಸಂಪೂರ್ಣ ಗುಣಮುಖಳಾಗಿ ವೀಲ್‌ಚೇರ್ ತೊರೆದು ಮೊದಲಿನಂತೆ ನಡೆದಾಡುತ್ತಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ 22 ವರ್ಷದ ನಿವೇದಿತಾ ಶಿವಪ್ಪ ನೆಗಳೂರು ಗುಣಮುಖರಾದ ಯುವತಿ.

ನಡೆದಿದ್ದೇನು?

ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿಸ್ಮಯ ಪವಾಡಗಳು ಆಗಾಗ ನಡೆಯುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಕಳೆದ 7 ತಿಂಗಳ ಹಿಂದೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ಅಪರೂಪದ ಅನಾರೋಗ್ಯದಿಂದ ಬಳಲುತ್ತಿದ್ದರು. ಪದೇ ಪದೇ ಮೂರ್ಚೆ ಹೋಗುವ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಹದಗೆಟ್ಟು, ಕೈ-ಕಾಲುಗಳ ಸ್ವಾಧೀನ ಹೋಗಿ ವೀಲ್‌ಚೇರ್ ಆಶ್ರಯಿಸಬೇಕಾಯಿತು.

ಅಪರೂಪದ ಸಮಸ್ಯೆಗೆ ಗುರಿಯಾಗಿದ್ದ ಯುವತಿ

ಇನ್ನು ಈ ಅಪರೂಪದ ಸಮಸ್ಯೆ ಬಗ್ಗೆ ಪರೀಕ್ಷಿಸಿದಾಗ ನಿವೇದಿತಾಗೆ ಆಟೋ ಇಮ್ಯೂನ್ ಸಮಸ್ಯೆಯಿಂದ ಉಂಟಾದ ಆ್ಯಂಟಿ ಬಾಡಿ ಮೆದುಳಿನ ಮೇಲೆ ಪರಿಣಾಮ ಬೀರುತ್ತಿರುವುದು ಪತ್ತೆಯಾಗಿದೆ. ಕುಟುಂಬಸ್ಥರು ಹಾವೇರಿಯ ಖಾಸಗಿ ಆಸ್ಪತ್ರೆ ಸೇರಿದಂತೆ ಹುಬ್ಬಳ್ಳಿಯ ಹಲವು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ನಿರೀಕ್ಷಿತ ಚೇತರಿಕೆ ಕಂಡುಬರಲಿಲ್ಲ. ಸುಮಾರು ಐದಾರು ಲಕ್ಷ ರೂ ಹಣ ಆಸ್ಪತ್ರೆಗೆ ಖರ್ಚು ‌ಮಾಡಿದ್ದಾರೆ. ಅದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಆದರೂ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯುತ್ತಾ ನಿವೇದಿತಾ ಮನೆಯಲ್ಲಿ ಕಾಲ ಕಳೆಯುತ್ತಿದ್ದಳು. ಆಗ ನಡೆದಿದ್ದೇ ರಾಯರ ಪವಾಡ.

ಇದನ್ನೂ ಓದಿ: ಮಳೆ ಅಭಾವದಿಂದ ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ

ನಿವೇದಿತಾ ಮನೆಯವರು ರಾಯರ ಮಠಕ್ಕೆ ಬರುತ್ತಿದ್ದರು. ಅದರಂತೆ ಮಠಕ್ಕೆ ಕರೆದುಕೊಂಡು ಬರಲು ನಿರ್ಧಾರ ಮಾಡಿದ್ದರು. ನಿವೇದಿತಾ ಒಲ್ಲದ ಮನಸ್ಸಿನಿಂದ ಹೊಸರಿತ್ತಿ ರಾಯರ ಮಠಕ್ಕೆ ಬಂದಿದ್ದಾರೆ. ಅದೇ ವೇಳೆಯಲ್ಲಿ 100ನೇ ಸುಶೀಲೇಂದ್ರತಿರ್ಥ ಆರಾಧನೆಯ ಕಾರ್ಯಕ್ರಮಕ್ಕೆ ಸುಭುದೇಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದರು. ಈ ವೇಳೆ ನಿವೇದಿತಾ ಕುಟುಂಬಸ್ಥರು ಆಕೆಯನ್ನು ಸ್ವಾಮೀಜಿಗಳ ಬಳಿ ಕರೆದೊಯ್ದಿದ್ದರು. ರಾಯರ ಮಂತ್ರಾಕ್ಷತೆ ಹಾಗೂ ಭಾವಚಿತ್ರವನ್ನು ನೀಡಿ, ಐದು ವಾರಗಳ ಕಾಲ ರಾಯರ ಮಠಕ್ಕೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದರು.

ಅದೊಂದು ದಿನ ನಡೆಯಿತು ಅಚ್ಚರಿ

ಸ್ವಾಮೀಜಿಗಳ ಸಲಹೆಯಂತೆ ನಡೆದುಕೊಳ್ಳುತ್ತಿರುವಾಗ ಒಂದು ಅಚ್ಚರಿ ನಡೆದಿದೆ. ಮೂರು ವಾರದಲ್ಲೇ ನಿವೇದಿತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಐದು ವಾರಗಳ ಹರಕೆಯ ನಂತರ ಇದೀಗ ಸ್ವತಃ ನಿವೇದಿತಾ ಓಡಾಡುತ್ತಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ

ಅಲ್ಲದೇ ರಾಯರಮಠದಿಂದಲೇ ಸುಭುಂದ್ರತಿರ್ಥರಿಗೆ ಕರೆ ಮಾಡಿ ವಿಷಯವನ್ನ ತಿಳಿಸಿದ್ದಾರೆ. ಅವರು ಮಂತ್ರಾಲಯಕ್ಕೆ ಬನ್ನಿ, ರಾಯರು ನಿಮಗೆ ಒಳ್ಳೆಯದು ಮಾಡುತ್ತಾರೆ ಎಂದಿದ್ದಾರೆ. ಮಗಳ ಆರೋಗ್ಯ ಸ್ಥಿತಿ ನೋಡಿ ಆತಂಕದಲ್ಲಿದ್ದ ಕುಟುಂಬಕ್ಕೆ ಇದೀಗ ನೆಮ್ಮದಿ ಸಿಕ್ಕಿದೆ. ನಿವೇದಿತಾಳ  ಚೇತರಿಕೆಯನ್ನು ಕುಟುಂಬಸ್ಥರು ರಾಯರ ಕೃಪೆ ಮತ್ತು ಆಶೀರ್ವಾದ ಎಂದು ನಂಬಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಗುಣವಾಗದ ಕಾಯಿಲೆ ರಾಯರ ಪಾದಸೇವೆಯಿಂದ ಗುಣಮುಖವಾಗಿದ್ದು, ಕುಟುಂಬಸ್ಥರು ಇದು ರಾಯರ ಪವಾಡವೇ ಎಂದು ಭಾವಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:19 pm, Sat, 15 August 26

Follow Us