
ನವದೆಹಲಿ, (ಫೆಬ್ರವರಿ 11): ಕೇಂದ್ರ ಬಜೆಟ್ (Union Budget) ಮೇಲಿನ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ (HD Devegowda) ಅವರು ಪಾಲ್ಗೊಂಡು ಮಾತನಾಡಿದ್ದು, ಮೂರು ಪ್ರಮುಖ ಬಂದರುಗಳನ್ನು ಜೋಡಿಸುವ ಬೆಂಗಳೂರಿನಿಂದ – ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ ಹಾಗೂ ಹಲಸು, ಹುಣಸೆ, ನೇರಳೆ ಮಂಡಳಿ ರಚನೆ ಮಾಡಬೇಕು ಎಂದು ಕೋರಿದರು.
ಈಗಾಗಲೇ ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಅನುಮೋದನೆ ನೀಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ವಿಸ್ತರಿಸಿದರೆ ಕೈಗಾರಿಕಾ ಅಭಿವೃದ್ಧಿಗೆ ಬಹಳಷ್ಟು ಅನುಕೂಲ ಆಗುತ್ತದೆ. ಮಂಗಳೂರು ಕೂಡ ಪ್ರಮುಖ ಬಂದರು ಆಗಿದ್ದು; ವಿಶಾಖಪಟ್ಟಣ, ಚೆನ್ನೈ ಹಾಗೂ ಮಂಗಳೂರು ಬಂದರುಗಳನ್ನುಜೋಡಿಸಿದರೆ ರಾಷ್ಟ್ರದ ಕೈಗಾರಿಕಾಭಿವೃದಿಗೆ ಪರಿವರ್ತನಾತ್ಮಕ ವೇಗ ಬರುತ್ತದೆ ಎಂದು ಮಾಜಿ ಪ್ರಧಾನಿಗಳು ಪ್ರತಿಪಾದಿಸಿದರು.
ಕರ್ನಾಟಕವೂ ಸೇರಿ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುವ ಹಲಸು, ಹುಣಸೆ, ನೇರಳೆಗೆ ಉತ್ತೇಜನ ನೀಡಲು ಮಕಾನ ಮಂಡಳಿಯಂತೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು. ಈ ಮೂರು ಬೆಳೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದಕ್ಷಿಣದ ಭಾಗದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಕಡಿಮೆ ಮಳೆ ಅಗತ್ಯವಿರುವ ಬೆಳೆಗಳು ಎಂದು ಮಾಜಿ ಪ್ರಧಾನಿ ದೇವೇಗೌಡರು ಮನವಿ ಹೇಳಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಡಳಿ ರಚನೆ ಬಗ್ಗೆ ಕ್ರಮ ವಹಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇನೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಜೆಟ್ ಅನ್ನು ಎನ್ಡಿಎ ಮೈತ್ರಿಪಕ್ಷವಾಗಿ ಮುಕ್ತಕಂಠದಿಂದ ಸ್ವಾಗತಿಸಿವೆ ಎಂದ ಮಾಜಿ ಪ್ರಧಾನಿಗಳು; ಆಯವ್ಯಯದಲ್ಲಿ ಅಡಗಿರುವ ಅನೇಕ ಉತ್ತಮ ಅಂಶಗಳನ್ನು ಪಟ್ಟಿ ಮಾಡಿದರು. ಉತ್ಪಾದನೆ, ಎಂಎಸ್‌ಎಂಇಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡುವುದು ಸೇರಿದಂತೆ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಮತ್ತು ದೀರ್ಘಾವಧಿಯ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶವನ್ನು ಮುಂಗಡಪತ್ರದಲ್ಲಿ ಒತ್ತಿ ಹೇಳಲಾಗಿದೆ. ಇದು ಜಾಗತಿಕ ಮೌಲಿಕ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.
ಜನತೆಗೆ ಅನುಕೂಲ ಆಗುವಂತೆ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣ ಮಾಡಿರುವುದು ಸ್ವಾಗತಾರ್ಹ. ತೆರಿಗೆದಾರರ ವಿಶ್ವಾಸವು ಅಷ್ಟೇ ಮುಖ್ಯವಾಗಿದೆ ಎಂದ ಅವರು; ಸರ್ಕಾರವು ಕರ್ನಾಟಕದ ಕರಾವಳಿ ಸೇರಿ ಇತರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ವಾಣಿಜ್ಯ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಿರುವುದು ಉತ್ತಮವಾದ ಹೆಜ್ಜೆ. ತೆಂಗು ‘ಕಲ್ಪವೃಕ್ಷ’ ಎಂದು ಜನಪ್ರಿಯವಾಗಿದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಬಹುವಿಧದಲ್ಲಿ ಆರೋಗ್ಯ ಪ್ರಯೋಜನಗಳೊಂದಿಗೆ ಪೋಷಣೆ ಒದಗಿಸುತ್ತದೆ. ಹೆಚ್ಚಿನ ಪ್ರದೇಶಗಳಲ್ಲಿ ತೆಂಗು ಜೀವನಾಡಿಯಾಗಿದೆ. ಕೃಷಿಗೆ ಉತ್ತಮ ಬೆಂಬಲ ಕೊಡಲಾಗಿದೆ. ಒಟ್ಟು ಬಜೆಟ್ ನಲ್ಲಿ ಒಟ್ಟು ಬಜೆಟ್‌ನ 3% ರಷ್ಟು ಹಂಚಿಕೆ ನೀಡಲಾಗಿದ್ದು, ಈ ಪ್ರಮಾಣವನ್ನು 5% ಗೆ ಕೃಷಿ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.
Published On - 8:18 pm, Wed, 11 February 26