ಬೆಂಗಳೂರು, ಜುಲೈ 28: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮೂಗಿನಿಂದ ಏಕಾಏಕಿ ರಕ್ತ ಸ್ರಾವವಾಗಿದೆ. ಜಯನಗರ ಅಪೋಲೊ (Apollo) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ಯತೀಶ್ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಕ್ತ ಸೋರಿಕೆ ನಿಂತಿದ್ದು, ಆತಂಕಪಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಪೋಲೊ ವೈದ್ಯರು ಹೇಳಿದ್ದಾರೆ.
ಅಪೋಲೊ ಆಸ್ಪತ್ರೆ ವೈದ್ಯ ಯತೀಶ್ ಪ್ರತಿಕ್ರಿಯಿಸಿದ್ದು, ಆತಂಕಪಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಕುಮಾರಸ್ವಾಮಿ ಆರೋಗ್ಯ ಕಡೆ ಹೆಚ್ಚು ಒತ್ತು ಕೊಡಬೇಕು. ಸ್ಟ್ರೋಕ್ ಆಗಿದ್ದ ಹಿನ್ನೆಲೆ ರಕ್ತಹೆಪ್ಪುಗಟ್ಟದಂತೆ ಮಾತ್ರೆ ತೆಗೆದುಕೊಳುತ್ತಿದ್ದಾರೆ. ಹಾಗಾಗಿ ಮೂಗಿನಲ್ಲಿ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಕೆಲಸದ ಒತ್ತಡದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಆಗಿಲ್ಲ. ಆತಂಕಪಡುವ ವಾತಾವರಣ ಇಲ್ಲ. ಕುಮಾರಣ್ಣ ಅವರು ಆರೋಗ್ಯವಾಗಿದ್ದಾರೆ. ತಂದೆ-ತಾಯಿ ಆಶೀರ್ವಾದ ಕುಮಾರಣ್ಣ ಮೇಲೆ ಇದೆ. ಅವರಿಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕಾಏಕಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ, ಕೂಡಲೇ ಆಸ್ಪತ್ರೆಗೆ ಕರೆದೊಯ್ದ ಪುತ್ರ
ಡಾಕ್ಟರ್ ಕೂಡ ಹೇಳಿದ್ದಾರೆ ಆತಂಕ ಬೇಡ ಅಂತ. ಯಾವ ರೀತಿ ಚಿಕಿತ್ಸೆ ಕೊಡಬೇಕು ಅಂತ ಪರೀಕ್ಷೆ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಏರುಪೇರು ಸಾಮಾನ್ಯ. ಆರೋಗ್ಯ ಲೆಕ್ಕಿಸದೆ ಸಂಸತ್ನಲ್ಲಿ ಮಾತಾಡಿದ್ದಾರೆ. ರಾತ್ರಿ ಪುಸ್ತಕಗಳನ್ನ ಓದುತ್ತಾರೆ. ರಾಜ್ಯದ ಜನರಿಗೆ ಏನಾದರೂ ಕೊಡಬೇಕು ಅಂತ ಕೆಲಸ ಮಾಡುತ್ತಿದ್ದಾರೆ. ಈಶ್ವರನ ನಂಬಿಕೊಂಡಿದ್ದೇವೆ, ಜನ, ರೈತರ ಆಶೀರ್ವಾದ ಇದೆ. ಇಂದು ರಾತ್ರಿಯೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ದೇಹದ ಉಷ್ಣಾಂಶ ಹೆಚ್ಚಾಗಿರುವ ಕಾರಣಕ್ಕೆ ರಕ್ತ ಬಂದಿರುವ ಸಂಶಯ ವ್ಯಕ್ತಪಡಿಸಲಾಗಿತ್ತು. ಈ ಹಿಂದೆ ಸಹ ಇದೆ ರೀತಿ ಮೂಗಿನಲ್ಲಿ ರಕ್ತ ಬಂದಿತ್ತು ಎನ್ನಲಾಗುತ್ತಿದೆ. ಇನ್ನು ಹೆಚ್ಡಿ ಕುಮಾರಸ್ವಾಮಿ ಹಾರ್ಟ್ ಪೇಷಂಟ್ ಆಗಿರುವ ಕಾರಣ ಹಲವು ಮಾತ್ರೆಗಳನ್ನು ಸೇವಿಸುತ್ತಿದ್ದರು. ಇದೇ ಕಾರಣಕ್ಕೆ ದೇಹದ ಉಷ್ಣಾಂಶ ಹೆಚ್ಚಾಗಿರುವ ಮಾಹಿತಿ ಇತ್ತು.
ಇದನ್ನೂ ಓದಿ: ಮುಡಾ ಹಗರಣ: ಬೆಂಗಳೂರು ಟು ಮೈಸೂರು ಪಾದಯಾತ್ರೆ ದಿನಾಂಕ ಘೋಷಿಸಿದ ವಿಜಯೇಂದ್ರ
ದೇಹದ ಉಷ್ಣಾಂಶ ಹೆಚ್ಚಾದರೆ ರಕ್ತನಾಳಗಳು ಒಣಗುತ್ತವೆ. ಈ ವೇಳೆ ಮೂಗಿನಲ್ಲಿ ಬರುವಂತ ಸಾಧ್ಯತೆ ಇರುತ್ತೆ. ರಕ್ತ ಹೆಪ್ಪುಗಟ್ಟದಂತೆ ಮಾಡುವ ಚಿಕಿತ್ಸೆ ಪಡೆದಿರಬಹುದು ಅಥವಾ ಔಷಧಿಗೆ ಒಳಪಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಡಿ ಕುಮಾರಸ್ವಾಮಿ ಮೂಗಿನಿಂದ ರಕ್ತ ಬಂದಿರುಬಹುದು ಎನ್ನಲಾಗಿತ್ತು.
ಮುಡಾ ಹಗರಣ ವಿಚಾರವಾಗಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಭೆ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮೂಗಿನಿಂದ ರಕ್ತ ಸೋರಿಕೆ ಆಗಿದೆ. ಹೀಗಾಗಿ ಸುದ್ದಿಗೋಷ್ಠಿ ಮೊಟಕುಗೊಳಿಸಿ ನಿರ್ಗಮಿಸಿದ್ದರು. ಕುಮಾರಸ್ವಾಮಿ ಮೂಗಿನಿಂದ ರಕ್ತ ನಿರಂತರವಾಗಿ ಸೋರುತ್ತಿರುವಾಗ ಈ ವೇಳೆ ಪಕ್ಕದಲ್ಲೇ ನಿಂತಿದ್ದ ಪುತ್ರ ನಿಖಿಲ್ ಅಪ್ಪನನ್ನು ಆಸ್ಪತ್ರೆಗೆ ಕರೆದೊಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 pm, Sun, 28 July 24