‘ಆ ಧಾರ್ಮಿಕ ಮುಖಂಡರು ತಮ್ಮ ಜವಾಬ್ದಾರಿ ಅರಿತಿದ್ದರೆ ಇಂದು ರಾಮನ ಭಕ್ತಿ ರಾಜಕಾರಣ ಆಗುತ್ತಿರಲಿಲ್ಲ’: ಎಚ್​ ಡಿ ಕುಮಾರಸ್ವಾಮಿ

H. D. Kumaraswamy Tweet: ಇತಿಹಾಸ ಸಾರುತ್ತ ನಿಂತಿರುವ ಪುರಾತನ ದೇಗುಲಗಳ ಹಿಂದೆ ಎಲ್ಲಿಯೂ ಜನರನ್ನು ವಿಭಜಿಸುವ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

  • TV9 Web Team
  • Published On - 13:00 PM, 17 Feb 2021
‘ಆ ಧಾರ್ಮಿಕ ಮುಖಂಡರು ತಮ್ಮ ಜವಾಬ್ದಾರಿ ಅರಿತಿದ್ದರೆ ಇಂದು ರಾಮನ ಭಕ್ತಿ ರಾಜಕಾರಣ ಆಗುತ್ತಿರಲಿಲ್ಲ’: ಎಚ್​ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಯಾರು ಹಣ ಕೊಡುವುದಿಲ್ಲವೋ ಆರ್​​ಎಸ್​ಎಸ್​ ಅವರ ಮನೆಗೆ ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ. ಈ ಮೂಲಕ ಜರ್ಮನಿಯ ನಾಜಿಗಳಂತೆ ವರ್ತಿಸುತ್ತಿದೆ ಎಂಬ ಎಚ್​. ಡಿ.ಕುಮಾರಸ್ವಾಮಿ (H. D. Kumaraswamy) ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪೇಜಾವರ ಶ್ರೀಗಳು, ಬಿಜೆಪಿಯ ನಾಯಕರು, ವಿಎಚ್​ಪಿ ಮುಖಂಡರು ಸೇರಿ ಹಲವರು ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಅದೆಲ್ಲದಕ್ಕೂ ಪ್ರತಿಕ್ರಿಯೆಯಾಗಿ ಇಂದು ಮತ್ತೆ ಎಚ್​ಡಿಕೆ ಸರಣಿ ಟ್ವೀಟ್​ ಮಾಡಿದ್ದಾರೆ.

ಒಬ್ಬರು ಹೇಳಿದ್ದಾರೆ, ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ಕೊಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ, ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡುವಳಿಕೆಯನ್ನು ತಿದ್ದಿಕೊಳ್ಳಿ ಎಂದು ಹೆಸರು ಹೇಳದರೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿ ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ಈಗ ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ ಎಂದು ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.

ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು. ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶೀರ್ವಾದದಿಂದ 2 ಬಾರಿ ಸಿಎಂ ಆದ ನಾನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ ಎಂದಿದ್ದಾರೆ.

ಇತಿಹಾಸ ಸಾರುತ್ತ ನಿಂತಿರುವ ಪುರಾತನ ದೇಗುಲಗಳ ಹಿಂದೆ ಎಲ್ಲಿಯೂ ಜನರನ್ನು ವಿಭಜಿಸುವ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ. ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ, ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ-ರಾಮಮಂದಿರ ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತರೂಪ.. ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ ಎಂದು ಹೇಳಿದ್ದಾರೆ.